ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ಡೊಳ್ಳು ಕುಣಿತ, ವೀರಗಾಸೆ ತರಬೇತಿ ಶಿಬಿರ ಜುಲೈ 14ರಿಂದ

ಸಂಚಾಲಕ ಬೀರಪ್ಪ ಶಂಭೋಜಿ ಹೇಳಿಕೆ
Published 11 ಜುಲೈ 2024, 14:17 IST
Last Updated 11 ಜುಲೈ 2024, 14:17 IST
ಅಕ್ಷರ ಗಾತ್ರ

ಸಿಂಧನೂರು: ಗವಿಸಿದ್ದೇಶ್ವರ ಜಾನಪದ ಸಾಂಸ್ಕೃತಿಕ ಕಲಾ ಸಂಘದಿಂದ ಜುಲೈ 14ರಿಂದ ಜುಲೈ 17ರ ವರೆಗೆ ಐದು ದಿನಗಳ ಕಾಲ ನಗರದ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಹಾಗೂ ವೀರಗಾಸೆ ನೃತ್ಯದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಂಚಾಲಕ ಬೀರಪ್ಪ ಶಂಭೋಜಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕಳೆದ ಏಳು ವರ್ಷಗಳ ಹಿಂದೆ ಈ ಸಂಘ ಉದ್ಘಾಟನೆಯಾಗಿದೆ. ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ವೀರಗಾಸೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ ರಾಜ್ಯದಲ್ಲಿ ವೀರಗಾಸೆ ನೃತ್ಯ ಮಾಡಿ ಮೂಲ ಜಾನಪದ ಕಲೆ ಉಳಿಸಿ ಬೆಳೆಸುತ್ತಿದ್ದಾರೆ’ ಎಂದರು.

‘ಡೊಳ್ಳಿನ ಕುಣಿತ ಪರಂಪರೆ ವಿದ್ಯಾರ್ಥಿಗಳಲ್ಲಿ ಬೆಳೆಸುವ ಹಿನ್ನೆಲೆಯಲ್ಲಿ ಸಂಘದಿಂದ ಈ ಹಿಂದೆ ತಿಡಿಗೋಳ ಗ್ರಾಮದಲ್ಲಿ ಜಿಲ್ಲಾಮಟ್ಟದ ಡೊಳ್ಳು ತರಬೇತಿ ನಡೆಸಲಾಗಿತ್ತು. ಇದರ ಫಲವಾಗಿ ದಾವಣಗೆರೆ ಹಾಗೂ ಮೈಸೂರು ರಾಜ್ಯಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ತಿಡಿಗೋಳ ಬಾಲಕರ ಮತ್ತ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದ್ದು ಗಮನಾರ್ಹ’ ಎಂದರು.

‌‘ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೀಗಾಗಿ ಈ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಈಗಾಗಲೇ 30 ಕಾಲೇಜುಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಗಿದೆ. ಸುಮಾರು 100 ರಿಂದ 150 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಯಾವುದೇ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2.30ರಿಂದ 4.30 ರವರೆಗೆ ಎರಡು ಹಂತದಲ್ಲಿ ಶಿಬಿರ ನಡೆಸಲಾಗುತ್ತಿದೆ. ಯಾವುದೇ ನೋಂದಣಿ ಶುಲ್ಕ ಇಲ್ಲ. ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸುವ ಜೊತೆಗೆ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು’ ಎಂದರು.

‘ಮುಂದಿನ ದಿನಗಳಲ್ಲಿ ಗೊರವರ ಕುಣಿತ, ಕಂಸಾಳೆ ಶಿಬಿರ ನಡೆಸುವ ಚಿಂತನೆ ಇದೆ’ ಎಂದು ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಹನುಮೇಶ ಬಾಗೋಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ ವೀರಗಾಸೆ, ಸದಸ್ಯ ಬಸವರಾಜ ಗಸ್ತಿ, ತತ್ವಪದಕಾರ ನಾರಾಯಣಪ್ಪ ಮಾಡಶಿರವಾರ, ವೀರೇಶ ಯರದಿಹಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT