ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಕೆರೆಗಳ ಭರ್ತಿಗಾಗಿ ನಿದ್ದೆಗೆಟ್ಟು ಶ್ರಮಿಸುತ್ತಿರುವ ಅಧಿಕಾರಿ ವರ್ಗ

Published 9 ನವೆಂಬರ್ 2023, 4:31 IST
Last Updated 9 ನವೆಂಬರ್ 2023, 4:31 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಎಲ್ಲ ಕೆರೆಗಳನ್ನು ಭರ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಇಷ್ಟು ದಿನ ರೈತರ ಹೊಲಗಳಿಗೆ ನೀರು ಹರಿಸಲು ಒದ್ದಾಡಿದ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ ಸೇರಿದಂತೆ ನೀರಾವರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒಗಳು ಸೇರಿದಂತೆ ನೋಡಲ್ ಅಧಿಕಾರಿಗಳು ಇದೀಗ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿಗಾಗಿ ಗ್ರಾಮೀಣ ಪ್ರದೇಶದ ಎಲ್ಲ ಕೆರೆಗಳ ಭರ್ತಿ ಮಾಡಲು ನಿದ್ದೆಗೆಟ್ಟು ಶ್ರಮಿಸುತ್ತಿದ್ದಾರೆ.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಎಡದಂಡೆ ನಾಲೆಗೆ ನ.31ರಿಂದ ನೀರನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮವಹಿಸಲು ನ.4ರಂದು ತಾಲ್ಲೂಕುಮಟ್ಟದ ಎಲ್ಲ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಚಂದ್ರಶೇಖರ ಎಲ್.ನಾಯಕ, ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳುವಂತೆ ಆದೇಶಿಸಿದ್ದಾರೆ.

ನ.6 ಬೆಳಿಗ್ಗೆ 8 ಗಂಟೆಯಿಂದ ನ.10 ರಾತ್ರಿ 12 ಗಂಟೆಯವರೆಗೆ ಸಿಂಧನೂರು ತಾಲ್ಲೂಕು ವ್ಯಾಪ್ತಿಗೊಳಪಡುವ ಸಾರ್ವಜನಿಕ ಕುಡಿಯುವ ನೀರಿನ ಕೆರೆಗಳನ್ನು ಸಂಪೂರ್ಣ ಭರ್ತಿ ಮಾಡಿಕೊಳ್ಳಲು ನೀರು ಪೂರೈಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಲ್ಲದೆ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬುವ ಸಮಯದಲ್ಲಿ ಅನಧಿಕೃತವಾಗಿ ಹೊಲಗಳಿಗೆ ನೀರು ಹರಿಸುವುದಾಗಲಿ, ಪಂಪ್‍ಸೆಟ್ ಮತ್ತು ಟೂಬ್‍ಗಳ ಮೂಲಕ ನೀರು ಎತ್ತುವಳಿ ಮಾಡದಂತೆ ಸಂಪೂರ್ಣ ನಿಷೇಧ ಹೇರಿದ್ದಾರೆ.

ವಿತರಣಾ ಕಾಲುವೆ ಸಂಖ್ಯೆ 31 ರಿಂದ 55ರ ವರೆಗಿನ ವ್ಯಾಪ್ತಿಗೊಳಪಡುವ ರಾಮತ್ನಾಳ, ಗೋನವಾರ, ರಾಗಲಪರ್ವಿ, ಹೆಡಗಿನಾಳ, ಬಾದರ್ಲಿ, ವಳಬಳ್ಳಾರಿ, ಅಲಬನೂರು, ಆರ್.ಎಚ್.ಕ್ಯಾಂಪ್, ಮಾಡಶಿರವಾರ, ಸೋಮಲಾಪುರ, ಸಾಲಗುಂದಾ, ಚೆನ್ನಳ್ಳಿ ಸೇರಿದಂತೆ ಕೆರೆಗಳಿರುವ ಎಲ್ಲ ಗ್ರಾಮ ಪಂಚಾಯಿತಿ ಸರಹದ್ದಿನ ಕುಡಿಯುವ ನೀರಿನ ಕೆರೆಗಳನ್ನು ಶೇ100ರಷ್ಟು ಭರ್ತಿ ಮಾಡಿಕೊಳ್ಳಲು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಕೆರೆ ಭರ್ತಿ ಮಾಡುವ ಕಾರ್ಯದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೇಲುಸ್ತುವಾರಿ ವಹಿಸಿಕೊಂಡು ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಿ ನೀರಾವರಿ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕೆರೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಈ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ವಿಪತ್ತು ನಿರ್ವಹಣಾ ಕಾಯ್ದೆ-2005 ರಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೆರೆಗಳ ಭರ್ತಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಮಾಡಿ ವಿಪತ್ತು ನಿರ್ವಹಣಾ ಕಾಯ್ದೆ-2005ರಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಅರುಣ್ ಎಚ್.ದೇಸಾಯಿ, ಸಿಂಧನೂರು ತಹಶೀಲ್ದಾರ್
ಸಿಂಧನೂರು ತಾಲ್ಲೂಕಿನಲ್ಲಿ 152 ಕೆರೆಗಳಿದ್ದು ಈ ಪೈಕಿ ಅರ್ಧದಷ್ಟು ಕೆರೆಗಳು ಈತನಕ ಶೇ100ರಷ್ಟು ತುಂಬಿವೆ. ಇನ್ನುಳಿದ ಕೆರೆಗಳು ಶೇ 60-70ರಷ್ಟು ತುಂಬಿವೆ. ಇನ್ನೆರಡು ದಿನಗಳಲ್ಲಿ ಎಲ್ಲ ಕೆರೆಗಳನ್ನು ಶೇ 100ರಷ್ಟು ಭರ್ತಿಗೆ ಕ್ರಮವಹಿಸಲಾಗಿದೆ
ಚಂದ್ರಶೇಖರ, ಇಒ ತಾಲ್ಲೂಕು ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT