ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ವೈದ್ಯರ ಮೇಲೆ ಹಲ್ಲೆಗೆ ಖಂಡನೆ

Published 29 ಜೂನ್ 2024, 15:55 IST
Last Updated 29 ಜೂನ್ 2024, 15:55 IST
ಅಕ್ಷರ ಗಾತ್ರ

ಸಿಂಧನೂರು: ರಾಯಚೂರಿನ ವಿಜಿಕೆ ಪಾಲಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್‍ನಲ್ಲಿ ಕರ್ತವ್ಯ ನಿರತ ವೈದ್ಯಕೀಯ ಮತ್ತು ಆಸ್ಪತ್ರೆಯ ಇತರ ಸಿಬ್ಬಂದಿ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಘಟಕದಿಂದ ಶನಿವಾರ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಸ್ಥಳೀಯ ಪ್ರವಾಸಿ ಮಂದಿರದಿಂದ ವಿವಿಧ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಮತ್ತು ಸನ್‍ರೈಸ್ ನರ್ಸಿಂಗ್ ಫ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಗಮನಿಸಿದ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ರಸ್ತೆ ತೆರವುಗೊಳಿಸಿ ವೈದ್ಯರು ತಹಶೀಲ್ದಾರ್ ಕಚೇರಿಗೆ ಬಂದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಸ್ತ್ರಚಿಕಿತ್ಸಕರ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಿ.ಎನ್.ಪಾಟೀಲ, ‘ರೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ವೈದ್ಯರನ್ನು ಹೊಣೆ ಮಾಡಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ತಹಶೀಲ್ದಾರ್ ಗಮನ ಸೆಳೆದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಅರುಣ ದೇಸಾಯಿ,‘ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಕೋರಲಾಗುವುದು’ ಎಂದು ಹೇಳಿದರು.

ವೈದ್ಯರಾದ ಚನ್ನನಗೌಡ ಪಾಟೀಲ, ಚಂದ್ರಶೇಖರ ತುರ್ವಿಹಾಳ, ಶ್ರೀನಿವಾಸ, ನಾಗರಾಜ ಮಾಲಿಪಾಟೀಲ, ಚನ್ನಬಸವರಾಜ ಪಾಟೀಲ್, ರವಿ, ಸಂದೇಶ, ಸತೀಶ, ವಿದ್ಯಾ, ಕೋನಿಕಾ, ಸಂಗಮೇಶ, ಜಯರಾಮರೆಡ್ಡಿ, ಸನ್‍ರೈಸ್ ಕಾಲೇಜು ಪ್ರಾಚಾರ್ಯ ಶಿರಿಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಆಸ್ಪತ್ರೆ ಬಂದ್: ಭಾರತೀಯ ವೈದ್ಯಕೀಯ ಸಂಘದ ರಾಯಚೂರು ಜಿಲ್ಲಾ ಘಟಕದ ಕರೆ ಅನ್ವಯ ಜೂ.28 ಮತ್ತು 29 ರಂದು ಎರಡು ದಿನಗಳ ಕಾಲ ತುರ್ತು ಸೇವೆ ಹೊರತು ಪಡಿಸಿ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳು ಸೇವೆಯನ್ನು ಸ್ಥಗಿತಗೊಳಿಸಿದ್ದವು.

ಪ್ರತ್ಯೇಕ ಮನವಿ: ಇದೇ ವೇಳೆ ಆಯುಷ ಫೆಡರೇಶನ್ ಆಫ್ ಇಂಡಿಯಾದ ಸ್ಥಳಿಯ ಘಟಕದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಲು ಒತ್ತಾಯಿಸಿದರು.

ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ. ರಾಘವೇಂದ್ರ ಮನವಿ ಪತ್ರ ಓದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT