ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲು‘

‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಬರಹ
Published 19 ಫೆಬ್ರುವರಿ 2024, 16:14 IST
Last Updated 19 ಫೆಬ್ರುವರಿ 2024, 16:14 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ 32 ವಸತಿ ಶಾಲೆಗಳ ಪೈಕಿ ಬಹುತೇಕ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್‌.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾʼ ಎನ್ನುವ ಫಲಕದ ಬದಲಿಗೆ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಸಲಾಗಿದೆ.

ದೇವದುರ್ಗ ತಾಲ್ಲೂಕಿನ ಗಲಗ ಅಂಬೇಡ್ಕರ್ ವಸತಿ ವಸತಿ ಶಾಲೆಯಲ್ಲಿ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಹಾಗೂ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ‌’ ಎಂದು ಎರಡನ್ನೂ ಬರೆಸಲಾಗಿದೆ.

KREIS official TEAM ಟೆಲಿಗ್ರಾಂ ಗ್ರೂಪ್‌ನಲ್ಲಿ ಜನವರಿ 18ರಂದು ನಡೆದ ಚರ್ಚೆಯಲ್ಲಿ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎನ್ನುವ ಬದಲಿಗೆ ಮೇಲಿನಂತೆ ಬರೆಯಿಸುವಂತೆ ಆದೇಶ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಆದೇಶದಂತೆ ನಾಮಫಲಕ ಬದಲಿಸಲಾಗಿದೆ ಎಂದು ಕೆಲ ಪ್ರಾಚಾರ್ಯರು ಪ್ರತಿಕ್ರಿಯಿಸಿದ್ದಾರೆ.

ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಸ್ಕಿ, ಲಿಂಗಸುಗೂರಿನ ಅಡವಿಬಾವಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ, ವಟಗಲ್, ದೇವದುರ್ಗ ತಾಲ್ಲೂಕಿನ ಗಬ್ಬೂರು, ಜಾಲಹಳ್ಳಿ, ಸಿಂಧನೂರು, ತುರ್ವಿಹಾಳ, ನವಲಕಲ್ಲು, ಸಿಂಧನೂರು ತಾಲ್ಲೂಕಿನ ಜವಳಗೇರಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಾಲಾಪುರದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹೊಸ ಘೋಷವಾಕ್ಯ ಬರೆಸಲಾಗಿದೆ.

ಟೆಲಿಗ್ರಾಂ ಗ್ರೂ‍ಪ್‌ನಲ್ಲಿ ಚರ್ಚೆಯಾದಂತೆ ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ಮಾಡಲಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ಬದಲಾಯಿಸಲಾಗಿದೆ. ಇಲಾಖೆಯಿಂದ ಅಧಿಕೃತ ಆದೇಶ ಬಂದಿಲ್ಲ’ ಎಂದು ರಾಯಚೂರು ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯೆ ಕಲ್ಪನಾ ಬಿರಾದರ್ ಹಾಗೂ ಲಿಂಗಸುಗೂರು ತಾಲ್ಲೂಕಿನ ಅಡವಿಭಾವಿ ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ನಾಗಭೂಷಣ ನಾಗರಹಾಳ ತಿಳಿಸಿದ್ದಾರೆ.

ಆದರೆ, ಮಾನ್ವಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬದಲಾವಣೆ ಮಾಡಿಲ್ಲ. ಲಿಖಿತ ಆದೇಶ ಬಾರದ ಕಾರಣ ಕೆಲವರು ಇನ್ನೂ ಘೋಷವಾಕ್ಯ ಬದಲಿಸಿಲ್ಲ.

ಯಾದಗಿರಿ ಜಿಲ್ಲೆಯ 22 ವಸತಿ ಶಾಲೆಗಳಲ್ಲೂ ಈಗಾಗಲೇ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬರೆಸಲಾಗಿದೆ. ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಸತಿ ಶಾಲೆಯ ಶಿಕ್ಷಕರು, ‘ಇಲಾಖೆಯ ಆದೇಶದನ್ವಯ ಬರಹ ಬರೆಸಲಾಗಿದೆ. ಕೈ ಮುಗಿದಷ್ಟು, ತಲೆಬಾಗಿದಷ್ಟು ನಮಗೆ ವಿದ್ಯೆ ಜಾಸ್ತಿಯಾಗುತ್ತದೆ. ವಿದ್ಯೆ ಕಲಿತ ಮೇಲೆ, ಜ್ಞಾನವಂತರಾದ ಮೇಲೆ ಪ್ರಶ್ನಿಸುವ ಗುಣ ಬರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕೆಲ ವಸತಿ ಶಾಲೆಗಳಲ್ಲಿಯೂ ಹಿಂದಿನ ಘೋಷವಾಕ್ಯ ಬದಲಾಯಿಸಿ ‘ದಿಸ್‌ ದಿ ಟೆಂಪಲ್‌ ಆಫ್‌ ನಾಲೆಜ್ಡ್‌, ಆಸ್ಕ್‌ ವಿಥೌಟ್‌ ಫಿಯರ್‌’ ಎಂದು ಇಂಗ್ಲಿಷ್‌ನಲ್ಲಿ ಬರೆಸಲಾಗಿದೆ. ಕೆಲವೆಡೆ ಕನ್ನಡದಲ್ಲಿಯೇ ‘ಜ್ಞಾನ ದೇಗುಲವಿದು; ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಲಾಗಿದೆ.

‘ಒಂದು ತಿಂಗಳ ಹಿಂದೆ ಸೂಚನೆ ಬಂದಿದ್ದರಿಂದ ಈ ಹಿಂದೆ ಇದ್ದ ಜ್ಞಾನದೇಗುಲವಿದು ಕೈಮುಗಿದು ಒಳಗೆ ಬಾ ಉಳಿಸಿಕೊಂಡು, ಜ್ಞಾನ ದೇಗುಲವಿದು ಧೈರ್ಯದಿಂದ ಪ್ರಶ್ನಿಸು ಎಂಬುದನ್ನೂ ಇನ್ನೊಂದು ಕಡೆ ಬರೆಸಲಾಗಿದೆ’ ಎಂದು ಭಾಲ್ಕಿ ತಾಲ್ಲೂಕಿನ ನಿಟ್ಟೂರು ವಸತಿ ಶಾಲೆಯ ಪ್ರಾಚಾರ್ಯರು ಪ್ರತಿಕ್ರಿಯಿಸಿದ್ದಾರೆ.

ಅಧಿಕೃತವಾಗಿ ಇನ್ನೂ ಆದೇಶ ಬಾರದೇ ಇರುವುದರಿಂದ ಕಲಬುರಗಿ ಜಿಲ್ಲೆಯ ವಸತಿಶಾಲೆಗಳಲ್ಲಿ ಘೋಷವಾಕ್ಯವನ್ನು ಬದಲಾಯಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವದುರ್ಗ ತಾಲ್ಲೂಕಿನ ಗಲಗ ಅಂಬೇಡ್ಕರ್ ವಸತಿ ಶಾಲೆಯಲ್ಲಿ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾʼ ಜೊತೆಗೆ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂಬುದನ್ನೂ ಬರೆಸಲಾಗಿದೆ
ದೇವದುರ್ಗ ತಾಲ್ಲೂಕಿನ ಗಲಗ ಅಂಬೇಡ್ಕರ್ ವಸತಿ ಶಾಲೆಯಲ್ಲಿ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾʼ ಜೊತೆಗೆ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂಬುದನ್ನೂ ಬರೆಸಲಾಗಿದೆ

ಮತ ಬ್ಯಾಂಕ್‌ಗಾಗಿ ಬದಲಾವಣೆ: ಮುತಾಲಿಕ್‌ ವಸತಿ ನಿಲಯಗಳಲ್ಲಿ ಘೋಷವಾಕ್ಯ ಬದಲಾಯಿಸಿರುವ ಈ ಕುರಿತು ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ‘ಕೈ ಮುಗಿದು ಒಳಗೆ ಬನ್ನಿ ಎನ್ನುವ ಸಾಲುಗಳು ಕಾಂಗ್ರೆಸ್‌ಗೆ ಏನು ತೊಂದರೆ ಮಾಡಿತ್ತು? ವಿದ್ಯಾರ್ಥಿಗಳು ಬೇಕಾದರೆ ಶಿಕ್ಷಕರನ್ನು ಪ್ರಶ್ನೆ ಮಾಡಲಿ. ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ಗಣೇಶ ಹಬ್ಬ ಸರಸ್ವತಿ ಪೂಜೆ ಮಾಡಿದರೆ ಕಾಂಗ್ರೆಸ್‌ಗೆ ಆಗಿಬರಲ್ಲ. ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ಹೀಗೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT