ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರ್ತಮಾನಕ್ಕೆ ಅನುಗುಣವಾಗಿ ಸಂಘಟಿತ ಹೋರಾಟ ಅಗತ್ಯ’

Last Updated 3 ಆಗಸ್ಟ್ 2019, 12:27 IST
ಅಕ್ಷರ ಗಾತ್ರ

ರಾಯಚೂರು: ದೇಶದಲ್ಲಿ ವರ್ತಮಾನಕ್ಕೆ ಅನುಗುಣವಾಗಿ ಸಂಘಟನೆಯ ಕಾರ್ಯಕರ್ತರು ಸಂಘಟನಾತ್ಮಕ ಹೋರಾಟ ರೂಪಿಸಬೇಕಾಗಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಸ್ಲಂ ಜನಾಂದೋಲನ ಮತ್ತು ಸ್ಲಂ ನಿವಾಸಿಗಳ ಕ್ರಿಯಾವೇದಿಕೆಯಿಂದ ಈಚೆಗೆ ಆಯೋಜಿಸಿದ್ದ ವಿಭಾಗ ಮಟ್ಟದ ಕಾರ್ಯಕರ್ತರ ಅಧ್ಯಯನ ಶಿಬಿರದಲ್ಲಿ ಪ್ರಸಕ್ತ ವಿದ್ಯಮಾನಗಳಲ್ಲಿ ಸ್ಲಂ ನಿವಾಸಿಗಳ ಕುರಿತು ಉಪನ್ಯಾಸ ನೀಡಿದರು.

ದೇಶದ ಸಂಪತ್ತಿನ ಮೇಲೆ ಸರ್ಕಾರಗಳ ನಿಯಂತ್ರಣವಿಲ್ಲದೇ ಕಾರ್ಪೋರೇಟ್ ಕಂಪೆನಿಗಳಿಗೆ ನೀಡಿರುವುದರಿಂದ ಡೀಸೆಲ್ ಹಾಗೂ ಪೆಟ್ರೋಲ್‌ ಬೆಲೆಯನ್ನು ಕಂಪೆನಿಗಳೇ ನಿರ್ಧರಿಸುತ್ತಿವೆ. ಆರ್ಥಿಕ, ರಾಜಕೀಯ ಪರಿಸ್ಥಿತಿ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಭುತ್ವದ ಬಗೆಗಿನ ಧೋರಣೆ ಆಧರಿಸಿ ಸಂಘಟನೆ ಬಲಿಷ್ಠಗೊಳಿಸಬೇಕು ಎಂದರು.

ದೇಶ, ಭಾಷೆ, ಧರ್ಮದ ಹೆಸರಿನಲ್ಲಿ ಬಹುತ್ವವನ್ನು ನಾಶಮಾಡಿ ಸರ್ವಾಧಿಕಾರಿಯತ್ತ ದೇಶವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ದ್ವೇಷ ಹಾಗೂ ಭಾವನೆಗಳ ಆಧಾರದಲ್ಲಿ ಜನರನ್ನು ಛಿದ್ರಗೊಳಿಸುವ ಕೆಲಸವನ್ನು ಸಮರ್ಥವಾಗಿ ಮಾಡಲಾಗುತ್ತಿದೆ. ನಗರ ವಂಚಿತ ಸಮುದಾಯಗಳಿಗೆ ಸಿಗಬೇಕಾದ ನ್ಯಾಯ ಸಿಗದಂತೆ ಮಾಡಿ ಬಡವರ ಸೌಲಭ್ಯ ಕಸಿದುಕೊಳ್ಳಲಾಗುತ್ತಿದೆ ಎಂದು ದೂರಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾಯ್ದೆ, ಶಿಕ್ಷಣ ನೀತಿ ಜನರನ್ನು ಹಿಂಸಿಸುವಂತೆ ರೂಪಿಸುವುದು ಸರಿಯಲ್ಲ. ಸ್ಲಂ ಜನರ ಭೂ ಒಡೆತನಕ್ಕೆ ನಗರ ವಂಚಿತ ಸಮುದಾಯಗಳ ಜಾಗೃತಿ ಅಗತ್ಯವಾಗಿದೆ ಎಂದರು.

ಉದ್ಘಾಟಿಸಿದ ಮುಖಂಡ ಎಂ.ಆರ್.ಭೇರಿ ಮಾತನಾಡಿ, ಸಾಮಾಜಿಕ ಸಮಾನತೆಯ ಮಾನವ ಸಮಾಜ ನಿರ್ಮಾಣಕ್ಕೆ ಸ್ಲಂ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ರಾಜೀಯ ಅಧಿಕಾರ ಹಿಡಿಯದೇ ಭಾರತದಲ್ಲಿ ಜಾತಿ ವ್ಯವಸ್ಥೆ ವಿನಾಶ ಮಾಡಲು ಸಾಧ್ಯವಿಲ್ಲ. ಎಲ್ಲ ನೀತಿಗಳು ಜಾತಿ ಪ್ರತಿಪಾದಿಸುವ ತಂತ್ರವನ್ನೇ ಹೊಂದಿವೆ ಎಂದು ಆರೋಪಿಸಿದರು.

ವೆಂಕಟೇಶ ಬೇವಿನಬೆಂಚಿ ಮಾತನಾಡಿ, ದೇಶದ ನೈಸರ್ಗಿಕ ಸಂಪತ್ತಿನ ಮೇಲೆ ಸರ್ಕಾರಗಳು ಸಾರ್ವಭೌಮತೆ ಸಾಧಿಸದೇ ಬೆಲೆ ನಿರ್ಧಾರವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಬಿಟ್ಟುಕೊಟ್ಟಿವೆ. ಶೇ 68ರಷ್ಟು ಸಂಪತ್ತು ಕೆಲ ಕುಟುಂಬಗಳ ಕೈಯಲ್ಲಿವೆ. ಶೇ. 32ರಷ್ಟು ಸಂಪತ್ತು ಹಂಚಿಕೆಗೆ ಸರ್ಕಾರಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಸಾಧಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT