ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಗಗನಕ್ಕೇರಿದ ತರಕಾರಿ ದರ

Last Updated 19 ಮೇ 2021, 14:04 IST
ಅಕ್ಷರ ಗಾತ್ರ

ರಾಯಚೂರು: ಮೂರು ದಿನಗಳ ಸಂಪೂರ್ಣ ಲಾಕ್‌ಡೌನ್ ನಂತರ ಬುಧವಾರ ಆರಂಭಿಸಿದ್ದ ಮಾರುಕಟ್ಟೆಯಲ್ಲಿ ತರಕಾರಿ ದರಗಳು ಇದ್ದಕ್ಕಿದ್ದಂತೆ ಹೆಚ್ಚಳವಾಗಿದ್ದರಿಂದ ಜನರು ಆತಂಕ ಪಡುವಂತಾಯಿತು. ಅನಿವಾರ್ಯವಾಗಿ ಕಡಿಮೆ ಪ್ರಮಾಣ ತರಕಾರಿ ಖರೀದಿ ಮಾಡಿದರು.

ಮಾಮೂಲಿ ದರಕ್ಕಿಂತಲೂ ದುಪ್ಪಟ್ಟು ಮತ್ತು ಕೆಲವೊಂದು ತರಕಾರಿ ಮೂರು ಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾದವು. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೂ ಮಾತ್ರ ತರಕಾರಿ ಮತ್ತು ದಿನಸಿ ಖರೀದಿಗೆ ಅವಕಾಶ ಮಾಡಲಾಗಿತ್ತು. ಬಹುತೇಕ ಜನರು ಬೆಳಿಗ್ಗೆಯಿಂದಲೇ ತರಕಾರಿ ಖರೀದಿಗೆ ಎಲ್ಲ ಕಡೆಗಳಲ್ಲೂ ಮುಗಿಬಿದ್ದಿದ್ದರು. ಸಮಯ ಹೆಚ್ಚಿದಂತೆ ಜನರಿಂದ ‌ಬೇಡಿಕೆ ಹೆಚ್ಚಳವಾಗಿದ್ದನ್ನು ಅರಿತು ವ್ಯಾಪಾರಿಗಳು ಮನಬಂದ ದರಕ್ಕೆ ತರಕಾರಿ ಮಾರಾಟ ಮಾಡಿ ಲಾಭ ಮಾಡಿಕೊಂಡರು.

ಒಂದು ಕಿಲೋ ಟೊಮೆಟೊ ಬೆಳಿಗ್ಗೆ 8 ಗಂಟೆವರೆಗೂ ₹20 ಕ್ಕೆ ಮಾರಾಟವಾಗಿದ್ದು, 11 ಗಂಟೆ ನಂತರ ₹50 ದರದಲ್ಲಿ ಮಾರಾಟವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಪೂರೈಕೆ ಇದ್ದರೂ ಜನರು ಏಕಕಾಲಕ್ಕೆ ನುಗ್ಗಿದ್ದರಿಂದ ದರದಲ್ಲಿ ವ್ಯತ್ಯಾಸವಾಯಿತು.ಆಯಾ ಬಡಾವಣೆಗಳಲ್ಲೇ ತರಕಾರಿ ಮಾರಾಟ ಇದ್ದರೂ ಪ್ರಮುಖ ವ್ಯಾಪಾರಿಗಳಿರುವಲ್ಲಿ ಕಡಿಮೆ ದರಕ್ಕೆ ದೊರೆಯುತ್ತದೆ ಎಂದು ಮಹಿಳಾ ಸಮಾಜ ಮೈದಾನ, ವೀರಣ್ಣ ವೃತ್ತದಲ್ಲಿ ಜನರು ಮುಗಿಬಿದ್ದಿದ್ದರು. 9 ಗಂಟೆಯ ಬಳಿಕ ಆಯಾ ಬಡಾವಣೆಯ ತರಕಾರಿ ಅಂಗಡಿ ಮತ್ತು ಕಿರಾಣಿ ಅಂಗಡಿಗಳಲ್ಲಿ ದಿನಸಿ, ತರಕಾರಿಗಳ ಖರೀದಿ ಜೋರಾಯಿತು. ಬೇಡಿಕೆ ಹೆಚ್ಚಳದ ಅವಕಾಶ ಮಾಡಿಕೊಂಡ ವ್ಯಾಪಾರಿಗಳು ದಾಸ್ತಾನು ಇಲ್ಲದ ಕೆಲವು ಪದಾರ್ಥಗಳ ದರ ಹೆಚ್ಚಿಸಿ ಮಾರಾಟ ಮಾಡಿದರು.

ರಾಯಚೂರು ತಾಲ್ಲೂಕಿನ ಕೃಷ್ಣಾ ನದಿ ಮತ್ತು ತುಂಗಭದ್ರಾ ನದಿತೀರದ ಗ್ರಾಮಗಳಲ್ಲಿ ಹೆಚ್ಚು ತರಕಾರಿ ಬೆಳೆಯುತ್ತಾರೆ. ಆದರೆ ಜಿಲ್ಲೆಗೆ ಬಹುತೇಕ ಶೇ 60 ರಷ್ಟು ತರಕಾರಿ ಬೆಳಗಾವಿ ಜಿಲ್ಲೆಯಿಂದ, ನೆರೆಯ ಆಂಧ್ರದ ಕರ್ನೂಲ್ ಜಿಲ್ಲೆ ಹಾಗೂ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯಿಂದ ಬರುತ್ತದೆ. ಸರಕು ಸಾಗಣೆ ಮತ್ತು ತರಕಾರಿ ಸಾಗಣೆಗೆ ಪರವಾನಿಗೆ ಇರುವುದರಿಂದ ಬೇಡಿಕೆಗೆ ಅನುಗುಣವಾಗಿ ತರಕಾರಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT