ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆ ಬಜೆಟ್ ಕ್ರಿಯಾಯೋಜನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಬೋಸರಾಜು ಸೂಚನೆ

ಜಲದುರ್ಗ ಏತ ನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಬೋಸರಾಜು ಭೇಟಿ
Published 31 ಜುಲೈ 2023, 14:20 IST
Last Updated 31 ಜುಲೈ 2023, 14:20 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಜಲದುರ್ಗ ಏತ ನೀರಾವರಿ ಯೋಜನೆಯಡಿ ಕೃಷ್ಣಾ ನದಿಗೆ ಅಡ್ಡಲಾಗಿ ತಡೆಗೋಡೆ, ಪಂಪ್‌ಹೌಸ್‍ ನಿರ್ಮಿಸಲು ಹಾಗೂ ಪೈಪ್‌ಲೈನ್‍ ಕಾಮಗಾರಿಗೆ ₹3.86 ಕೋಟಿ ಅನುದಾನ ನೀಡಲಾಗಿದೆ. ಇನ್ನೂ 200 ಮೀಟರ್ ಪೈಪ್‌ಲೈನ್‍ ಮಾಡಲು ಬೇಕಾಗುವ ಕೊರತೆ ಬಜೆಟ್‍ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸಬೇಕು’ ಎಂದು ಸಚಿವ ಎನ್‍.ಎಸ್‍ ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಲದುರ್ಗ ಏತ ನೀರಾವರಿ ಯೋಜನೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ‘ಕ್ರಿಯಾಯೋಜನೆ ಸಿದ್ಧಪಡಿಸುವಾಗ ಪೂರ್ವಾಪರ ಯೋಚನೆಗಳನ್ನು ಮಾಡಬೇಕು. ಕಾಮಗಾರಿ ನಡೆಯುವ ಹಂತದಲ್ಲಿ ಹಣಕಾಸಿನ ಕೊರತೆ ಎಂದು ಹೇಳುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗುತ್ತದೆ’ ಎಂದು ಹೇಳಿದರು.

‘ಕೃಷ್ಣಾ ನದಿ ನಡುಗಡ್ಡೆ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಮಹತ್ವದ ಯೋಜನೆ ನೀಡಿದೆ. ರೈತರ ಜಮೀನಿಗೆ ಹಲವು ದಶಕಗಳಿಂದ ನೀರು ಹರಿಸದಿರುವುದು ನೋವಿನ ಸಂಗತಿ. ಈಗಲಾದರು ಎಚ್ಚೆತ್ತು ಅಧಿಕಾರಿಗಳು ರೈತರ ಜಮೀನಿಗೆ ಪೂರ್ಣ ಮತ್ತು ಸಮರ್ಪಕವಾಗಿ ನೀರು ಹರಿಸಲು ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು. ಅಗತ್ಯ ಆಧರಿಸಿ ಹಣಕಾಸಿನ ನೆರವು ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ರಾಂಪುರ–ನವಲಿ ಜಡಿಶಂಕರಲಿಂಗ ಏತ ನೀರಾವರಿಯ ಜಾಕ್‌ವೆಲ್‍ ಪ್ರದೇಶದಿಂದ ಮಸ್ಕಿ ತಾಲ್ಲೂಕಿನ ಕೆರೆಗಳ ಭರ್ತಿಗಾಗಿ ನಡೆದ ಕಾಮಗಾರಿ ಪರಿಶೀಲನೆ ನಡೆಸಿದರು.

ಸಣ್ಣ ನೀರಾವರಿ ಇಲಾಖೆಯಡಿ ನನೆಗುದಿಗೆ ಬಿದ್ದಿರುವ ಯೋಜನೆಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಹಂತ ಹಂತವಾಗಿ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಂಡು ರೈತರ ಜಮೀನಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಬಸನಗೌಡ ತುರ್ವಿಹಾಳ, ಮಾಜಿ ಶಾಸಕರಾದ ಡಿ.ಎಸ್‍ ಹೂಲಗೇರಿ, ರಾಜಾ ರಾಯಪ್ಪ ನಾಯಕ, ಮುಖಂಡರಾದ ಅಮರಗುಂಡಪ್ಪ ಮೇಟಿ, ಭೂಪನಗೌಡ ಕರಡಕಲ್ಲ, ದಾವೂದ್‍ ಮುದಗಲ್, ಪಾಮಯ್ಯ ಮುರಾರಿ, ವೆಂಕಟೇಶ ಗುತ್ತೆದಾರ, ಸಂಜೀವಕುಮಾರ ಕಂದಗಲ್ಲ, ಶರಣಬಸವ, ಸಣ್ಣ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಶ್ರೀಹರಿ ಪ್ರಕಾಶ, ಸುಪರಿಂಟೆಂಡೆಂಟ್‍ ಎಂಜಿನಿಯರ್ ಸುರೇಶ ಶರ್ಮಾ, ಕಾರ್ಯನಿರ್ವಾಹಕ ಎಂಜಿನಿಯರ್ ನಾಗನಗೌಡ, ಕಿರಿಯ ಎಂಜಿನಿಯರ್‌ಗಳಾದ ಸೂಗಪ್ಪ ಹಾಗೂ ಪ್ರಲ್ಹಾದ ಬಿಜ್ಜೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT