ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಂಸದರಿಗೆ ಟಿಕೆಟ್‌ ನೀಡಲು ಆಗ್ರಹ: ಆತ್ಮಹತ್ಯೆಗೆ ಯತ್ನ

Published 27 ಮಾರ್ಚ್ 2024, 22:55 IST
Last Updated 27 ಮಾರ್ಚ್ 2024, 22:55 IST
ಅಕ್ಷರ ಗಾತ್ರ

ರಾಯಚೂರು: ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್‌ ನೀಡುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲು ನಗರದ ರಾಯಚೂರು ಹಬ್‌ನಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಇಬ್ಬರು ಯುವಕರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಹಸನ ನಡೆಯಿತು.

ಸಭೆ ನಡೆಯುತ್ತಿರುವಾಗಲೇ ಯುವಕರು ಮೈಮೇಲೆ ಡೀಸೆಲ್‌ ಸುರಿದುಕೊಂಡದ್ದರಿಂದ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಸ್ಥಳದಲ್ಲಿದ್ದ ಕಾರ್ಯಕರ್ತರು ತಕ್ಷಣ ಅವರನ್ನು ತಡೆದರು. ಇದೇ ಸಂದರ್ಭದಲ್ಲಿ ಬಿ.ವಿ.ನಾಯಕ ಬೆಂಬಲಿಗರು, ‘ರಾಜಾ ಅಮರೇಶ್ವರ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದರು.

‘ಐದು ವರ್ಷ ಕಾಣೆಯಾಗಿದ್ದ ರಾಜಾ ಅಮರೇಶ್ವರ ನಾಯಕ ರನ್ನು ಪಕ್ಷದ ಹೈಕಮಾಂಡ್‌ ಹುಡುಕಿ ಕೊಟ್ಟಿದೆ’ ಎಂದು ಫಲಕವನ್ನೂ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಯಚೂರು ಲೋಕಸಭೆ ಟಿಕೆಟ್‌ ಪುನರ್‌ ಪರಿಶೀಲನೆ ಮಾಡದಿದ್ದರೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಬಿ.ವಿ.ನಾಯಕ ಎಚ್ಚರಿಸಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ವಿರುದ್ಧವೇ ಸೋತಿದ್ದ ಬಿ.ವಿ.ನಾಯಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ಈ ಬಾರಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದರು. ಚುನಾವಣೆಗೆ ತಯಾರಿಯನ್ನೂ ನಡೆಸಿದ್ದರು. ಕೊನೆ ಗಳಿಗೆಯಲ್ಲಿ ರಾಜಾ ಅಮರೇಶ್ವರ ನಾಯಕ ಅವರಿಗೆ ಟಿಕೆಟ್‌ ಘೋಷಿಸಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ಮಾಣ ಹಂತದ ಸೇತುವೆ ಕುಸಿತ

ಕುಮಟಾ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಮಿರ್ಜಾನ್–ಹೆಗಡೆ ತಾರಿಬಾಗಿಲ ಗ್ರಾಮಗಳನ್ನು ಸಂಪರ್ಕಿಸಲು ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆಯ ಮಧ್ಯಭಾಗ ಬುಧವಾರ ಕುಸಿದು ಬಿತ್ತು.

ಸೇತುವೆಯ ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಅಳವಡಿಸಿದ್ದ ಕಾಂಕ್ರೀಟ್ ತೊಲೆ (ಬೀಮ್) ಏಕಾಏಕಿ ಕುಸಿದ ಕಾರಣ ಬೃಹತ್ ಗಾತ್ರದ ಕ್ರೇನ್, ಹಿಟಾಚಿ, ದ್ವಿಚಕ್ರ ವಾಹನಗಳು ಸೇರಿ ಕೋಟ್ಯಂತರ ಮೌಲ್ಯದ ಪರಿಕರಕ್ಕೆ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

‘₹18 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದ್ದು, ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ 40ಕ್ಕಿಂತ ಹೆಚ್ಚು ಭಾಗದ ಕಾಮಗಾರಿ ನಡೆದಿದ್ದು, ಎರಡು ಕಂಬಗಳ ನಡುವೆ ಜೋಡಿಸಿಟ್ಟಿದ್ದ ಕಾಂಕ್ರೀಟ್ ತೊಲೆ ಕುಸಿದು ಹಾನಿಯಾಗಿದೆ. ಅಂದಾಜು ₹4 ಕೋಟಿ ಮೌಲ್ಯದ ಪರಿಕರ ಹಾನಿಯಾಗಿದೆ. ಕಾಮಗಾರಿ ವೇಳೆ ಕ್ರೇನ್ ಬಡಿದು ತೊಲೆ ಕುಸಿದು ಬಿದ್ದಿರಬಹುದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಪಿ.ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT