ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ಮಾರ್ಗಗಳ ಕೊರತೆ; ಅತಿಕ್ರಮಣ

ಸುರಪುರದ: ರಸ್ತೆಗಳಲ್ಲಿ ತಿರುಗಾಡಲು ಪಾದಚಾರಿಗಳಿಗೆ ತೊಂದರೆ
Last Updated 24 ಮಾರ್ಚ್ 2020, 11:23 IST
ಅಕ್ಷರ ಗಾತ್ರ

ಸುರಪುರ: ಭತ್ತದ ಕಣಜವಾದ ಸುರಪುರ ದಿನೇ ದಿನೇ ಬೆಳೆಯುತ್ತಿದೆ. ವಾಣಿಜ್ಯ ನಗರಿಯಾಗಿ ರೂಪುಗೊಳ್ಳುತ್ತಿರುವ ನಗರದಲ್ಲಿ ಪಾದಚಾರಿಗಳು ತಿರುಗಾಡಲು ತೊಂದರೆಯಿದೆ. ಸೂಕ್ತ ಪಾದಚಾರಿ ಮಾರ್ಗವಿರದ ಕಾರಣ ಜನರು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.

ಗಾಂಧಿ ವೃತ್ತ, ರಾಜಾ ನಾಲ್ವಡಿ ವೆಂಕಟಪ್ಪನಾಯಕ ವೃತ್ತ, ಅರಮನೆ ರಸ್ತೆ, ಬಸ್‍ ನಿಲ್ದಾಣ, ಮಾರುಕಟ್ಟೆ, ವಲ್ಲಭಭಾಯ್‌ ವೃತ್ತ, ವೇಣುಗೋಪಾಲಸ್ವಾಮಿ ರಸ್ತೆ, ವಾಲ್ಮೀಕಿ ವೃತ್ತ, ತಹಶೀಲ್ದಾರ್ ಕಚೇರಿ ರಸ್ತೆ, ಹನುಮಾನ ಟಾಕೀಸ್‌ ರಸ್ತೆ, ಕುಂಬಾರಪೇಟೆ ಮತ್ತು ತಿಮ್ಮಾಪುರ ನಗರದ ಪ್ರಮುಖ ರಸ್ತೆಗಳಾಗಿವೆ.

ಪ್ರಮುಖ ರಸ್ತೆಗಳ ಪೈಕಿ ಅರಮನೆ ರಸ್ತೆ ಮತ್ತು ಹನುಮಾನ್ ಟಾಕೀಸ್ ರಸ್ತೆ ಮಾತ್ರ ದಶಕಗಳ ಹಿಂದೆ ವಿಸ್ತರಣೆ ಮಾಡಲಾಗಿತ್ತು.ಉಳಿದ ರಸ್ತೆಗಳು ಇಕ್ಕಟ್ಟಾಗಿಯೇ ಇವೆ. ರಾಜಾ ನಾಲ್ವಡಿ ವೆಂಕಟಪ್ಪನಾಯಕ ವೃತ್ತ ಬೈಪಾಸ್ ರಾಜ್ಯ ಹದ್ದಾರಿಯ ಮೇಲೆ ಬರುವುದರಿಂದ ಅಲ್ಲಿಯ ರಸ್ತೆ ಉತ್ತಮವಾಗಿದೆ.

ಈ ರಸ್ತೆಗಳಲ್ಲಿ ಸದಾ ಜನಜಂಗುಳಿ ಇರುತ್ತದೆ ಅಲ್ಲದೇ ವಾಹನ ದಟ್ಟಣೆಯೂ ಹೆಚ್ಚು ಇರುತ್ತದೆ. ವ್ಯಾಪಾರದ ಭರಾಟೆಯೂ ಜೋರು. ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಿರುಗಾಡುತ್ತಾರೆ. ಅಗತ್ಯ ಸಾಮಗ್ರಿಗಳನ್ನು ಖರೀದಿಸಲು, ಕಚೇರಿ ಕೆಲಸಗಳಿಗೆ, ಶಾಲಾ, ಕಾಲೇಜುಗಳಿಗೆ ಹೋಗಲು ಜನ ಬರುತ್ತಾರೆ.

ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರದ ಕಾರಣ ವಾಹನ ಸವಾರರು ರಸ್ತೆಯ ಬದಿಯಲ್ಲೇ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಹೀಗಾಗಿ ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗುವುದಲ್ಲದೇ ಗ್ರಾಹಕರು ಅಂಗಡಿ ಒಳಗೆ ಸುಲಭವಾಗಿ ಹೋಗಲು ಸಾಧ್ಯವಾಗುವುದಿಲ್ಲ.

ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಮತ್ತು ವಾಹನಗಳು ಸುಗಮವಾಗಿ ಸಂಚರಿಸುವಂತೆ ಮಾಡಲೆಂದೇ ಪೊಲೀಸರು ಹಲವು ನಿಯಮಗಳನ್ನು ಜಾರಿಗೆ ತಂದರು. ದಿನ ಬಿಟ್ಟು ದಿನ ಒಂದು ಬದಿಯಲ್ಲಿ ವಾಹನ ನಿಲುಗಡೆ ಮಾಡುವಂತೆ ಪೊಲೀಸರು ಸೂಚಿಸಿದರು. ಆದರೆ, ಈ ನಿಯಮವು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.

ಬಸ್‍ನಿಲ್ದಾಣದ ಹಿಂಬದಿಯ ಹಿಂದುಗಡೆಯ ಕಿರುರಸ್ತೆಯಲ್ಲಿ, ಮುಖ್ಯ ರಸ್ತೆಯ ಎರಡು ಬದಿ, ಅರಮನೆ ರಸ್ತೆ, ಗಾಂಧಿವೃತ್ತ ಇತರೆಡೆ ಬೀದಿ ಬದಿ ವ್ಯಾಪಾರಿಗಳದ್ದೆ ಕಾರುಬಾರು ಇರುತ್ತದೆ. ಈ ಎಲ್ಲ ರಸ್ತೆಗಳಲ್ಲಿ ವಾಹನಗಳು ಎಲ್ಲೆಂದರಲ್ಲಿ ನಿಂತಿರುತ್ತವೆ. ಇದರಿಂದ ಜನರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದೆ.

ಕೆಂಭಾವಿ ರಸ್ತೆ, ರಂಗಂಪೇಟೆ ರಸ್ತೆ, ಟಿಪ್ಪುಸುಲ್ತಾನ್ ವೃತ್ತ, ಕುಂಬಾರಪೇಟೆ, ತಹಶೀಲ್ದಾರ್ ಕಚೇರಿ ರಸ್ತೆಯ ಎರಡು ಬದಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ.

ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ಅಲ್ಲಲ್ಲಿ ತಮ್ಮ ಮಾರಾಟದ ವಸ್ತುಗಳನ್ನು ಇಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ಪಾದಚಾರಿಗಳು ನಗರದ ರಸ್ತೆಗಳಲ್ಲಿ ತಿರುಗಾಡಲು ಹೆದರುವಂತಾಗಿದೆ. ಅನೇಕ ಬಾರಿ ದಾರಿಹೋಕರಿಗೆ ವಾಹನಗಳು ಡಿಕ್ಕಿ ಹೊಡೆದ ಪ್ರಸಂಗಗಳು ನಡೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಪಾದಚಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಮಸ್ಯೆ ನಿವಾರಿಸಲು ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT