ಕವಿತಾಳ: ಸರ್ಕಾರಿ ಶಾಲೆಯಲ್ಲಿ ಕಲಿತ ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ಸುರೇಶರಡ್ಡಿ ಬಸವರಾಜ ಹೊನ್ನಳ್ಳಿ ಅವರು ಕೇರಳದ ತಿರುವನಂತಪುರಂನ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವಕನ ಸಾಧನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಸವರಾಜ ನ್ಯಾವಿಗೇಶನ್ ಸೆನ್ಸಾರ್‌ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ.
ವಟಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಕವಿತಾಳದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದ ಸುರೇಶ ರಡ್ಡಿ ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಮತ್ತು ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬಿ.ಇ. ಮೆಕ್ಯಾನಿಕಲ್ ಪದವಿ ಹಾಗೂ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂ.ಟೆಕ್ ಉನ್ನತ ಶಿಕ್ಷಣ ಪಡೆದಿದ್ದಾರೆ.
‘ಈಚೆಗೆ ಚಂದ್ರಯಾನ–3 ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತ ಇಡೀ ವಿಶ್ವದ ಗಮನ ಸೆಳೆದಿದೆ. ಅಂತಹ ಹೆಮ್ಮೆಯ ಇಸ್ರೊದಲ್ಲಿ ನಮ್ಮ ಪುತ್ರ ಕೆಲಸ ಮಾಡುವುದು ನಮಗೆಲ್ಲಾ ಖುಷಿ ತರುವ ಮತ್ತು ಹೆಮ್ಮೆ ಪಡುವ ಸಂಗತಿ’ ಎಂದು ಸುರೇಶ ರೆಡ್ಡಿ ತಂದೆ ಬಸವರಾಜ ಹೊನ್ನಳ್ಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಇಸ್ರೊ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ತಾನು ಕಲಿತ ಗ್ರಾಮದ ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆ ಪಡುತ್ತಿರುವ ಸುರೇಶ ರೆಡ್ಡಿ ಈಚೆಗೆ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು’ ಎಂದು ವಟಗಲ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಪುಷ್ಪಾ ಪತ್ತಾರ್ ಹೇಳಿದರು.
‘ಇಸ್ರೊದಲ್ಲಿ ಕೆಲಸ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ವಿಕ್ರಂ ಲ್ಯಾಂಡರ್‌ನ ಸೆನ್ಸಾರ್ ಅಭಿವೃದ್ಧಿಪಡಿಸುವ ಸಂಶೋಧನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ಯುವಕನ ಕುರಿತು ಮಾಹಿತಿ ಸಂಗ್ರಹಿಸಿ ಸಂಪರ್ಕಿಸಿದ ‘ಪ್ರಜಾವಾಣಿ’ ಕಾರ್ಯ ಶ್ಲಾಘನೀಯ’ಸುರೇಶರೆಡ್ಡಿ ವಟಗಲ್ ಇಸ್ರೊ ಉದ್ಯೋಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.