ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ಭಾರಿ ಮಳೆಗೆ ಕೊಚ್ಚಿಹೋದ ಮುಖ್ಯ ನಾಲೆ

ನಾರಾಯಣಪುರ ಕಾಲುವೆ ಆಧುನೀಕರಣ ಕಾಮಗಾರಿ ಅವೈಜ್ಞಾನಿಕ: ಆರೋಪ
ಬಿ.ಎ. ನಂದಿಕೋಲಮಠ
Published : 20 ಆಗಸ್ಟ್ 2024, 4:11 IST
Last Updated : 20 ಆಗಸ್ಟ್ 2024, 4:11 IST
ಫಾಲೋ ಮಾಡಿ
Comments

ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ ಆರಂಭದಿಂದಲೂ ಕಳಪೆಯಿಂದ ಕೂಡಿವೆ ಎಂಬ ಆರೋಪ ಕೇಳಿಬರುತ್ತಿವೆ. ಆಧುನೀಕರಣ ಕಾಮಗಾರಿ ಅವೈಜ್ಞಾನಿಕ ಅನುಷ್ಠಾನ ಮತ್ತು ಅಧಿಕಾರಿಗಳ ತತ್ಸಾರ ಮನೋಭಾವಕ್ಕೆ ಮೇಲಿಂದ ಮೇಲೆ ನಾಲೆ ಕೊಚ್ಚಿ ಹೋಗುತ್ತಿರುವುದು ಸಾಕ್ಷಿಯಾಗಿದೆ.

ನಾರಾಯಣಪುರ ಬಲದಂಡೆ ಮುಖ್ಯ ನಾಲೆ 35ನೇ ಕಿ.ಮೀ.ನಲ್ಲಿ ಮಳೆಗಾಲದಲ್ಲಿ ಜಮೀನುಗಳಿಂದ ಹರಿಯುವ ನೀರು ಬೇರೆಡೆ ಹರಿಸಲು ಸೂಪರ್ ಪ್ಯಾಸೇಜ್‍ (ಎಸ್‍ಪಿ) ನಿರ್ಮಿಸಿಲ್ಲ. ರೈತರ ಪ್ರತಿಭಟನೆಗೆ ಅಧಿಕಾರಿಗಳು ಪೈಪ್‍ ಹಾಕಿಸಿ ಸಮಾಧಾನ ಪಡಿಸಿದ್ದರು. ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಮಣ್ಣಿನ ಏರಿ ಭಾಗಶಃ ಕುಸಿದು ಪೈಪ್‌ಲೈನ್‍ ಕಿತ್ತುಹೋಗಿ ಮುಖ್ಯನಾಲೆಯಲ್ಲಿ ಮಣ್ಣು ಆವರಿಸಿಕೊಂಡಿದೆ.

ಮುಖ್ಯ ನಾಲೆ ಬಲಭಾಗದ ವೀಕ್ಷಣಾ ರಸ್ತೆ ಅಂದಾಜು 200 ಅಡಿಯಷ್ಟು ಸಂಪೂರ್ಣ ಕೊಚ್ಚಿ ಹೋಗಿದೆ. ಮುಖ್ಯ ನಾಲೆ ಕಾಂಕ್ರಿಟ್‍ 300 ಅಡಿಗೂ ಹೆಚ್ಚು ಬಿರುಕು ಕಾಣಿಸಿಕೊಂಡಿದ್ದು ಭಾರಿ ಅಪಾಯ ತಂದೊಡ್ಡಿದೆ. ಎರಡು ವರ್ಷ ಹಿಂದೆ ಇದೇ ಸ್ಥಳದಲ್ಲಿ ಮಣ್ಣಿನ ಏರಿ ಸಮೇತ ಕಾಂಕ್ರಿಟ್‍ ಕುಸಿತಗೊಂಡು ಮತ್ತು 7(ಎ) ವಿತರಣಾ ನಾಲೆ ಕಾಂಕ್ರಿಟ್‍ ಕಿತ್ತು ಹೋಗಿತ್ತು. ಆಗಲೂ ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸವೇ ಸರಿ.

ಮುಖ್ಯ ನಾಲೆ ಆಧುನೀಕರಣಕ್ಕೆ ₹980 ಕೋಟಿ ಮತ್ತು ವಿತರಣಾ ನಾಲೆ, ಹೊಲಗಾಲುವೆಗಳ ಆಧುನೀಕರಣಕ್ಕೆ ₹1,444 ಕೋಟಿ ಅನುದಾನ ನೀಡಲಾಗಿದೆ. ಗುತ್ತಿಗೆದಾರರು ನಿಯಮಾನುಸಾರ ಕಾಮಗಾರಿ ಕೈಗೆತ್ತಿಕೊಳ್ಳದೆ ಕಳಪೆ ಕಾಮಗಾರಿ ಕೈಗೊಂಡಿದ್ದರಿಂದ ಮೇಲಿಂದ ಮೇಲೆ ಕಿತ್ತು ಹೋಗುತ್ತಿವೆ. ಅನೇಕ ಸಂಘಟನೆಗಳು ಲೋಕಾಯುಕ್ತ ಸೇರಿದಂತೆ ತನಿಖಾ ಸಂಸ್ಥೆಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ರೈತರ ಆರೋಪ.

‘ಕಾಮಗಾರಿ ಆರಂಭದಿಂದಲೂ ಹಳ್ಳದ ನೀರು ಹರಿದು ಹೋಗಲು ಅಂಡರ್ ಪಾಸ್, ಜಮೀನುಗಳ ಮಳೆ ನೀರು ಹರಿದು ಹೋಗಲು ಸೂಪರ್ ಪ್ಯಾಸೇಜ್‍ ನಿರ್ಮಿಸುವಂತೆ ಹೋರಾಟ ನಡೆಸುತ್ತ ಬಂದಿದ್ದೇವೆ. ಅವೈಜ್ಞಾನಿಕ ಕಾಮಗಾರಿಯಿಂದ ಜಮೀನುಗಳು ಜಲಾವೃತಗೊಂಡು ಬೆಳೆ ಹಾನಿಗೀಡಾಗಿವೆ. ಮುಖ್ಯ ನಾಲೆ ಮೇಲಿಂದ ಮೇಲೆ ಕುಸಿಯುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ರೈತ ಮೌನೇಶ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎರಡು ದಿನಗಳ ಹಿಂದೆ ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ಜಮೀನುಗಳ ನೀರು ಹರಿದು ಹೋಗಲು ಹಾಕಿದ್ದ ಪೈಪ್‌ಲೈನ್‍ ಸಮೇತ ಮುಖ್ಯ ನಾಲೆ ಕೊಚ್ಚಿದೆ. ಆಧುನೀಕರಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು ಗುತ್ತಿಗೆದಾರರಿಗೆ ಹೇಳಿ ದುರಸ್ತಿ ಮಾಡಿಸಲಾಗುವುದು’ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಂದ್ರರೆಡ್ಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT