ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ‘ಶಿಕ್ಷಕರ ಮೂಲಕ ಮಕ್ಕಳಿಗೆ ಹೊಸ ತಂತ್ರಜ್ಞಾನ’

ಮೂರು ದಿನಗಳ ಸಂಪನ್ಮೂಲ ಅಭಿವೃಧ್ಧಿ ಕಾರ್ಯಾಗಾರ ಆರಂಭ
Last Updated 6 ಅಕ್ಟೋಬರ್ 2020, 13:20 IST
ಅಕ್ಷರ ಗಾತ್ರ

ರಾಯಚೂರು: ಪ್ರಸ್ತುತ ರೊಬೊಟಿಕ್ಸ್‌ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಬಹಳಷ್ಟು ಅವಕಾಶಗಳು ಇದರಲ್ಲಿವೆ. ರಾಯಚೂರು ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ಈ ತಂತ್ರಜ್ಞಾನವನ್ನು ಪರಿಚಯಿಸುವ ಉದ್ದೇಶಕ್ಕಾಗಿ ಮೊದಲು ಶಿಕ್ಷಕರಿಗೆ ಮನವರಿಕೆ ಮಾಡಲು ಮೂರು ದಿನಗಳ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಉದ್ಯೋಗಾವಕಾಶಗಳು ಮತ್ತು ಕಲಿಕಾ ಕೇಂದ್ರ, ಚೆನ್ನೈನ ಪ್ಯಾಂಟೆಕ್‌ ಇ–ಲರ್ನಿಂಗ್‌ ಸಂಸ್ಥೆಯಿಂದ ಆಯೋಜಿಸಿರುವ ಮೂರು ದಿನಗಳ ‘ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.

ದಿನನಿತ್ಯ ಬಳಸುವ ಮೊಬೈಲ್‌, ಎಟಿಎಂ ಸೇರಿದಂತೆ ಅನೇಕ ಕಡೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಆಗುತ್ತಿದೆ. ಇವುಗಳ ತಂತ್ರಜ್ಞಾನದ ಬಗ್ಗೆ ಶಾಲಾ ಹಂತದಲ್ಲಿ ಮಕ್ಕಳಲ್ಲಿ ಆಸಕ್ತಿ ಬೆಳೆಸುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ಶಾಲಾ‌ಹಂತದಲ್ಲಿ ಮಕ್ಕಳಲ್ಲಿ ಹೊಸ ಹೊಸ ಕನಸುಗಳನ್ನು ಕಟ್ಟಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಮುಂಬರುವ ದಿನಗಳಲ್ಲಿ ಗಣಿತ, ವಿಜ್ಞಾನ ವಿಷಯ ಬೋಧಿಸುವ ಜಿಲ್ಲೆಯ ಎಲ್ಲ ಶಿಕ್ಷಕರಿಗೂ ಈ ಬಗ್ಗೆ ತರಬೇತಿ ನೀಡಲಾಗುವುದು. ರಿಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟುಹಾಕುವ ಕೆಲಸವನ್ನು ಶಿಕ್ಷಕರು ಮಾಡಬೇಕು.9, 10 ತರಗತಿಗಳ ಮಕ್ಕಳಿಗೆ ಈ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಬೇಕಿದೆ. ಈ ಬಗ್ಗೆ ಒಂದು ಪಠ್ಯಕ್ರಮ ತಯಾರಿಸುವಂತೆಯೂ ಪ್ಯಾಂಟೆಮ್‌ ಸಂಸ್ಥೆಯನ್ನು ಕೋರಲಾಗಿದೆ ಎಂದರು.

ರಾಯಚೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಎಸ್ ಎಲ್ ಎನ್ ಕಾಲೇಜುಗಳೊಂದಿಗೆ ಪ್ಯಾಂಟೆಮ್‌ ಒಪ್ಪಂದ ಮಾಡಿಕೊಂಡು ಕೆಲಸ ಮಾಡುತ್ತಿದೆ. ತಂತ್ರಜ್ಞಾನವನ್ನು ಕೈಬಿಟ್ಟು ಹಿಂದಕ್ಕೆ ಸರಿಯಬಾರದು.ಸಮಾಜದಲ್ಲಿ ತಂತ್ರಜ್ಞಾನ ಪರಿಕಲ್ಪನೆ ಬೆಳೆಸಬೇಕು ಎನ್ನುವುದು ಸಂವಿಧಾನದಲ್ಲಿ ಮೂಲಭೂತ ಕರ್ತವ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ತಂತ್ರಜ್ಞಾನ ತಿಳಿದುಕೊಳ್ಳಬೇಕು. ಚಂದ್ರಯಾನ, ಮಂಗಳಯಾನ ಮಾಡುವುದರಿಂದ ಏನು ಪ್ರಯೋಜನ ಎಂದು ಅನಿಸಬಹುದು.‌ ಆದರೆ ತಾಂತ್ರಿಕವಾಗಿ ದೇಶವನ್ನು ಸದೃಢಗೊಳಿಸಲು ಇದು ಉತ್ತೇಜನೆ ನೀಡುತ್ತದೆ. ಒಂದು ಮಾದರಿಯನ್ನು ನಿರ್ಮಾಣ ಮಾಡಿದರೆ ಅದರಿಂದ ಒಳ್ಳೆಯ ಪರಿಣಾಮಗಳಾಗುತ್ತವೆ ಎಂದು ಹೇಳಿದರು.

ಪ್ಯಾಂಟೆಕ್ ಇ ಲರ್ನಿಂಗ್ ಸಂಸ್ಥೆಯ ನಿರ್ದೇಶಕ ಸೆಂಥಿಲ್ ಕುಮಾರ್ ಮಾತನಾಡಿ, ಜಿಲ್ಲೆಯ ಶಿಕ್ಷಕರನ್ನು ಬೋಧನೆಯಲ್ಲಿ ಗಟ್ಟಿಗೊಳಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಪ್ಯಾಂಟೆಕ್ ಕೂಡಾ ಇದೇ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಕೃತಕ ಬುದ್ಧಮತ್ತೆ ಎಲ್ಲ‌ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆ ಆಗುತ್ತಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನಗಳ ವಿವಿ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ ಮಾತನಾಡಿದರು. ರಾಯಚೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್‌ ದೊಡ್ಡಮನಿ ಸ್ವಾಗತಿಸಿದರು.

ಯರಮರಸ್‌ ಡಯಟ್‌ ಕಾಲೇಜು ಪ್ರಾಂಶುಪಾಲ ವೃಷಬೇಂದ್ರಸ್ವಾಮಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರಾಜು ಭಾವಿಹಳ್ಳಿ, ತ್ರಿವಿಕ್ರಮ ಜೋಶಿ, ಬಿಸಿಎಂ ಜಿಲ್ಲಾಧಿಕಾರಿ ಎಂ.ಎಂ.ಗೋನಾಳ, ಶ್ರೀನಿವಾಸ್‌, ಡಾ.ಟಿ. ರೋಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT