ಗುರುವಾರ , ಮಾರ್ಚ್ 30, 2023
24 °C

ತಲುಪದ ಮುಖ್ಯಮಂತ್ರಿ ಪರಿಹಾರ ನಿಧಿ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಕೃಷ್ಣಾ ನಡುಗಡ್ಡೆ ಪ್ರದೇಶದ ಹಂಚಿನಾಳ ಗ್ರಾಮದ ಬಸಮ್ಮ ಬಸೆಟ್ಟೆಪ್ಪ ತಳವಾರ ಅವರ ಹೆಸರಲ್ಲಿ 2020 ಮಾರ್ಚ್‌ 4ರಂದು ಬಂದಿರುವ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್‍ ವಿತರಣೆಯಾಗದೇ ಉಳಿದಿರುವುದು ಬೆಳಕಿಗೆ ಬಂದಿದೆ.

ಬಸಮ್ಮ ತಳವಾರ 2019 ಸೆಪ್ಟಂಬರ್‌ 4ರಂದು ಹುಬ್ಬಳ್ಳಿ ಆಸ್ಪತ್ರೆಯೊಂದರಲ್ಲಿ ಮಿದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಬಡ ಕುಟುಂಬ ಸಾಲ ಮಾಡಿ ತೊಂದರೆಯಲ್ಲಿರುವುದನ್ನು ತಿಳಿದ ಮಾಜಿ ಶಾಸಕ ಮಾನಪ್ಪ ವಜ್ಜಲ ಅವರು, 2020 ಫೆಬ್ರುವರಿ 24ಕ್ಕೆ ಮುಖ್ಯಮಂತ್ರಿ ಕಚೇರಿಗೆ ಪರಿಹಾರಕ್ಕಾಗಿ ಶಿಫಾರಸು ಪತ್ರ ಬರೆದಿದ್ದರು.

ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಪಿ.ಎ.ಗೋಪಾಲ್‍ ಅವರು, 2020 ಮಾರ್ಚ್‌ 4ರಂದು ₹ 59,554 ಮೊತ್ತದ ಪರಿಹಾರ ಚೆಕ್‍ ಬರೆದು, ಅದು ತಲುಪಿದ ಮೂರು ದಿನಗಳಲ್ಲಿ ಸಂತ್ರಸ್ತರ ಕುಟುಂಬಕ್ಕೆ ವಿತರಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ್ದರು. ಆದರೆ, ಅದು ಇಂದಿಗೂ ವಿತರಣೆಯಾಗಿಲ್ಲ. ಈಗ ಕೇಳಿದರೆ ಚೆಕ್‍ ಅವಧಿ ಮುಗಿದಿದೆ ಎಂದು ಹೇಳುತ್ತಿದ್ದಾರೆ ಎಂದು ಸಂತ್ರಸ್ತೆ ಪತಿ ಬಸೆಟ್ಟೆಪ್ಪ ತಳವಾರ ಆರೋಪಿಸಿದ್ದಾರೆ.

ಈ ಕುರಿತು ತಹಶೀಲ್ದಾರ್ ಚಾಮರಾಜ ಪಾಟೀಲರನ್ನು ಸಂಪರ್ಕಿಸಿದಾಗ, ‘ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದಿರುವ ಚೆಕ್‍ ವಿತರಣೆ ಬಾಕಿ ಉಳಿದಿಲ್ಲ. ಯಾವುದಕ್ಕೂ ಪರಿಶೀಲನೆ ನಡೆಸಿ ಅಂತಹ ಪ್ರಕರಣ ಕಂಡು ಬಂದಲ್ಲಿ ತಕ್ಷಣವೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು