ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಥಿತಿ ಬದಲಿಸಿಕೊಂಡು ಕೆಲಸಮಾಡಿ: ವಿ.ಸೋಮಣ್ಣ

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ
Last Updated 7 ಆಗಸ್ಟ್ 2021, 13:08 IST
ಅಕ್ಷರ ಗಾತ್ರ

ರಾಯಚೂರು: ‘ರಾಯಚೂರು ಜಿಲ್ಲೆ ಮಾದರಿ ಮಾಡಬೇಕಿದ್ದು, ಅಧಿಕಾರಿಗಳೆಲ್ಲರೂ ಈಗಿರುವ ಮನಸ್ಥಿತಿ ಬದಲಿಸಿಕೊಂಡು ಕೆಲಸ ಮಾಡಬೇಕು’ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೋವಿಡ್‌ ಮತ್ತು ಪ್ರವಾಹ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಗಸ್ಟ್‌ 15 ರಂದು ಮೂರು ದಿನಗಳವರೆಗೂ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಪ್ರತಿಯೊಂದು ವಿವರವನ್ನು ಅಧಿಕಾರಿಗಳ ಒಪ್ಪಿಸಬೇಕಾಗುತ್ತದೆ. ಅಭಿವೃದ್ಧಿಗೆ ಸರ್ಕಾರದಿಂದ ಏನು ಬೇಕಾಗಿದೆ ಎಂಬುದನ್ನು ಪಟ್ಟಿ ಮಾಡಿಕೊಂಡು ಬರಬೇಕು ಎಂದರು.

ರಾಯಚೂರು ನಗರದೊಳಗಿನ ಮಾವಿನಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಳಚರಂಡಿ ಮಂಡಳಿ ಅಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಒಟ್ಟಾಗಿ ಸಮಗ್ರ ಮಾಹಿತಿ ಒದಗಿಸಬೇಕು. ಕೆರೆ ಅತಿಕ್ರಮಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹೋಗಿದ್ದವರನ್ನು ಕರೆಸಿಕೊಂಡು ಮಾತನಾಡಬೇಕು. ಕೆರೆ ನೋಡಿ ಬಂದಿದ್ದೇನೆ.‌ ಊರೊಳಗೆ ಕೊಳಚೆಯನ್ನು ಕೆರೆಗೆ ಬಿಡುತ್ತಿರುವುದು ಸರಿಯಲ್ಲ. ಕೆರೆ ಸುತ್ತಲೂ ದುರ್ನಾತ ಹೊಡೆಯುತ್ತಿದೆ. ಕೆರೆ ಉತ್ತಮವಾಗಿ ಅಭಿವೃದ್ಧಿ ಮಾಡುವುದಕ್ಕೆ ಏನು‌ ಮಾಡಬೇಕು ಎಂಬುದನ್ನು ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದು ಹೇಳಿದರು.

ಕೋವಿಡ್ ಮೂರನೇ ಅಲೆ ತಡೆಗಾಗಿ ಜಿಲ್ಲಾಡಳಿತ ಬಿಗಿಕ್ರಮ ಕೈಗೊಳ್ಳಬೇಕು. ಎರಡನೇ ಅಲೆ ಸಂದರ್ಭದಲ್ಲಿ ಆಗಿರುವ ತಪ್ಪುಗಳು ಮರುಕಳಿಸಬಾರದು. ಗ್ರಾಮೀಣ ಭಾಗದಲ್ಲಿ ಕೋವಿಡ್ ದೃಢಪಟ್ಟವರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಬೇಕು. ಮೂರನೇ ಅಲೆ ತಡೆಗಾಗಿ ಇನ್ನೂ ಏನು ಎಂಬುದನ್ನು ಜಿಲ್ಲಾ ಆರೋಗ್ಯಾಧಿಕಾರಿ ಪಟ್ಟಿ ಕೊಡಬೇಕು. ಲಸಿಕೆ ಯಾವ ಪ್ರಮಾಣದಲ್ಲಿ ಎಂಬುದರ ಮಾಹಿತಿ ಕೊಡಬೇಕು. ಕೋವಿಡ್ ಅಲೆ ಸಂಬಂಧಿಸಿದ್ದನ್ನು ಜಿಲ್ಲಾ ಆರೋಗ್ಯಾಧಿಕಾರಿ ಗಂಭೀರ ತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ರಾಯಚೂರು ನಗರದಲ್ಲಿ ವಿದ್ಯುತ್ ಕೈಕೊಡುತ್ತಿರುವುದು ಗಂಭೀರ ಸಮಸ್ಯೆ. ನಾಡಿಗೆ ವಿದ್ಯುತ್‌ ಕೊಡುವ ನಗರದಲ್ಲಿ ಈ ಸ್ಥಿತಿ ಇರಬಾರದು. ಸಮಸ್ಯೆ ಪರಿಹಾರಕ್ಕೆ ಏನುಬೇಕು ಎಂಬುದನ್ನು ಜೆಸ್ಕಾಂ ಎಂಜಿನಿಯರುಗಳು ತಿಳಿಸಬೇಕು. ಪ್ರತಿದಿನ ವಿದ್ಯುತ್ ಕಡಿತ ಕ್ರಮ ಸರಿಯಲ್ಲ ಎಂದು ಹೇಳಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಮಾಸ್ಕ್ ಧರಿಸುವಂತೆ ಜಿಲ್ಲಾಡಳಿತದಿಂದ ಬಿಗಿಯಾಗಿ ಸೂಚನೆ ಕೊಡಬೇಕು. ಸ್ವಲ್ಪ ಯಾಮಾರಿದರೆ ಪರಿಣಾಮ ಏನಾಗುತ್ತದೆ ಎಂಬುದು ಕೋವಿಡ್‌ ಎರಡನೇ ಅಲೆಯಿಂದ ಗೊತ್ತಾಗಿದೆ ಎಂದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ಕೃಷ್ಣಾನದಿ ಪ್ರವಾಹದಿಂದ ಸಾಕಷ್ಟು ಬೆಳೆಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತವಾಗಿದೆ. ಪಂಪ್ ಸೆಟ್‌ಗಳು ಹಾಳಾಗಿವೆ. ಜುರಾಲಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಆಂಧ್ರದಿಂದ ಹಣ ಕೊಡಲಾಗಿದೆ. ಲೋಕೋಪಯೋಗಿ ಎಂಜಿನಿಯರುಗಳು ಎಂಟು ವರ್ಷಗಳ‌ ಬಳಿಕ ಕೆಆರ್‌ಐಡಿಎಲ್‌ಗೆ ಕೊಟ್ಟಿದ್ದಾರೆ. ಆದರೆ ಕೆಲಸ ಯಾವಾಗ ಆಗುತ್ತದೆ ಎನ್ನುವುದನ್ನು ಹೇಳಬೇಕು ಎಂದರು.

‘ಮೂರು ಸೇತುವೆಗಳ‌ ನಿರ್ಮಾಣಕ್ಕೆ ₹140 ಕೋಟಿ ಹಣ ಬೇಕಾಗುತ್ತದೆ. ಆದರೆ ಜಿಲ್ಲಾಡಳಿತ ಬಳಿ ಹಣವಿಲ್ಲ. ಅದರ ಅನುದಾನ ಹೊಂದಿಸಬೇಕು. ಗುರ್ಜಾಪುರ ಸ್ಥಳಾಂತರ ಗ್ರಾಮದ ಕೆಲಸ ಆಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಿ’ ಎಂದು ಕೋರಿದರು.

ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್‌ ತನ್ವೀರ್‌ ಆಸೀಫ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT