ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನರಿಲ್ಲದೆ ಭಣಗುಡುತ್ತಿರುವ ಹಳ್ಳಿಗಳು

ಮಂಜುನಾಥ ಎನ್.ಬಳ್ಳಾರಿ
Published 7 ಜನವರಿ 2024, 6:35 IST
Last Updated 7 ಜನವರಿ 2024, 6:35 IST
ಅಕ್ಷರ ಗಾತ್ರ

ಕವಿತಾಳ: ‘ಯಪ್ಪಾ ಮಗ ಸೊಸಿ ಮೊಮ್ಮಕ್ಕಳನ್ನ ಕರ್ಕೊಂಡು ದುಡ್ಯಾಕ ಬೆಂಗ್ಳೂರಿಗೆ ಹೋಗ್ಯಾರ. ಈ ವಯಸ್ಸಿನ್ಯಾಗ ಮನ್ಯಾಗ ನಾ ವಬ್ಬಾಕೀ ಅದೀನಿ, ಕುಂತ್ರ ಏಳಕ್ಕಾಗಲ್ಲ, ಅಡ್ಯಾಡಕ ಆಗಲ್ಲ. ಕೈಲಾದ್ರ ಮಾಡ್ಕೊಂಡ ತಿಂತೀನಿ ಇಲ್ಲಾಂದ್ರ ಉಪಾಸ. ಯಾರಾದ್ರೂ ಏನನ ತಂದು ಕೊಡ್ತಾರ ಅವ್ರಿಗಿ ಪುಣ್ಯಾ ಬರ್ಲಿ, ಆ ದೇವ್ರು ನನ್ನ ಮ್ಯಾಕ ಕರ್ಕೊವಲ್ಲ...’

–ಎರಡೂ ಕೈ ಮೇಲೆತ್ತಿ ಆಗಸಕ್ಕೆ ಕೈ ಮುಗಿದ 86 ವರ್ಷದ ಅಂಬಮ್ಮ ಕಣ್ಣಂಚಲ್ಲಿ ಜಿನುಗಿದ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ ತಮ್ಮ ಸಂಕಟವನ್ನು ಹೇಳಿಕೊಂಡ ರೀತಿ ಇದು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಬಡ ಕುಟುಂಬಗಳು ವಯಸ್ಸಾದ ತಂದೆ–ತಾಯಿಯನ್ನು ಮನೆಯಲ್ಲಿ ಬಿಟ್ಟು ಕೆಲಸ ಅರಸಿ ದುಡಿಯಲು ಬೆಂಗಳೂರು ಮತ್ತಿತರ ನಗರಗಳಿಗೆ ಗುಳೆ ಹೋಗಿದ್ದಾರೆ.

ಹಿಂಗಾರು, ಮುಂಗಾರು ಮಳೆ ಕೊರತೆಯಿಂದ ಉಂಟಾದ ತೀವ್ರ ಬರ, ತೊಗರಿ, ಸಜ್ಜೆ, ಹತ್ತಿ ಮತ್ತಿತರ ಬೆಳೆಗಳು ಅಷ್ಟಕ್ಕಷ್ಟೆ ಎಂಬ ಸಂದಿಗ್ಧ ಪರಿಸ್ಥಿಯಲ್ಲಿ ಕುಟುಂಬ ನಿರ್ವಹಣೆಗೆ ಗುಳೆ ಅನಿವಾರ್ಯವಾಗಿದೆ.

ಮಳೆ ಆಧಾರಿತ ಕೃಷಿ ಚಟುವಟಿಕೆ ಅವಲಂಬಿಸಿದ ಬಹುತೇಕ ಹಳ್ಳಿಗಳಲ್ಲಿ ಹೆಚ್ಚಿನ ಕುಟುಂಬಗಳು ಗುಳೆ ಹೋಗಿವೆ. ಊರ ಮುಂದಿನ ಕಟ್ಟೆ ಮೇಲೆ ನಾಲ್ಕಾರು ಜನ ವೃದ್ಧರು ಬೀಡಿ ಸೇದುತ್ತಾ ಕುಳಿತ ದೃಶ್ಯ ಹೊರತುಪಡಿಸಿದರೆ ಜನರಿಲ್ಲದೆ ಓಣಿಗಳು ಭಣಗುಡುತ್ತಿವೆ.

‘ಹುಸೇನಪುರದಲ್ಲಿ ಅಂದಾಜು 950 ಜನಸಂಖ್ಯೆ ಇದೆ. ಈಗ 350ಕ್ಕೂ ಹೆಚ್ಚಿನ ಜನರು ಗುಳೆ ಹೋಗಿದ್ದಾರೆ. ತೊಗರಿ ಕೊಯ್ಲಿಗೆ ಬಂದ ಕಾರಣ ಕೆಲವರು ಊರಿಗೆ ಬಂದಿದ್ದಾರೆ. ಇಪ್ಪತ್ತು ದಿನ ಕಳೆದರೆ ಅರ್ಧ ಊರು ಖಾಲಿಯಾಗುತ್ತದೆ. ನರೇಗಾ ಕೆಲಸ ನಡೆದಿಲ್ಲ ಮತ್ತು ನಡೆದರೂ ಅದನ್ನು ನೆಚ್ಚಿಕೊಂಡು ಕೂಡುವುದಿಲ್ಲ. ಯಾಕೆಂದರೆ ಬೆಂಗಳೂರಲ್ಲಿ ಕೂಲಿ ಹೆಚ್ಚಿಗೆ ಸಿಗುತ್ತದೆ. ಅದರಿಂದ ಸಾಲಸೋಲ ತೀರಿಸಬಹುದು ಹಾಗೂ ಸ್ವಲ್ಪ ಹಣ ಉಳಿಸಬಹುದು. ಹೀಗಾಗಿ ಗುಳೆ ಹೋಗುತ್ತಾರೆ’ ಎಂದು ಗ್ರಾಮದ ಬಸವರಾಜ ಹೇಳಿದರು.

‘ಪಾಮನಕಲ್ಲೂರು ಪಂಚಾಯಿತಿ ಯಲ್ಲಿ ಖಾತರಿ ಕೆಲಸ ನೀಡಿಲ್ಲ. ನಿಗದಿತ ನೂರು ದಿನಗಳಲ್ಲಿ 2023 ಡಿಸೆಂಬರ್‌ ತಿಂಗಳ ಅಂತ್ಯಕ್ಕೆ ಕೇವಲ 14 ದಿನ ಕೆಲಸ ನೀಡಿದ್ದು ಮಾನವ ದಿನಗಳು ವ್ಯರ್ಥವಾಗಿವೆ. ಕೆಲಸ ನೀಡುವಂತೆ ಪಿಡಿಒ ಅವರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಕರವೇ ಮುಖಂಡ ರಮೇಶ ಗಂಟ್ಲಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT