ಬುಧವಾರ, ಜುಲೈ 28, 2021
24 °C

ನಮ್ಮ ಜ್ಞಾಪಕ ಶಕ್ತಿಯನ್ನು ನಾವೇ ಅಳತೆ ಮಾಡಿಕೊಳ್ಳಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರದೇ ಆದ ಜ್ಞಾಪಕ ಶಕ್ತಿಯ ಸಾಮರ್ಥ್ಯ ಇರುತ್ತದೆ. ಕೆಲವರಿಗೆ ಒಮ್ಮೆ ಅಥವಾ ಎರಡು ಬಾರಿ ಓದಿದರೆ ಸಾಕು ಎಲ್ಲವೂ ನೆನಪಿನಲ್ಲಿ ಉಳಿದು, ಕರಗತವಾಗುತ್ತದೆ. ಆದರೆ, ನನಗೆ ಕನಿಷ್ಠ 4ರಿಂದ 5 ಬಾರಿ ಒಂದೇ ವಿಷಯ ಓದಿದಾಗ ಮಾತ್ರ ಪೂರ್ಣವಾಗಿ ತಲೆಗೆ ಹೋಗುತ್ತದೆ. ಇನ್ನೂ ಕಲವರಿಗೆ ಇನ್ನಷ್ಟು ಬಾರಿ ಓದುವ ಅಗತ್ಯ ಇರಬಹುದು. ಏನೇ ಆದರೂ ಒಂದು ವಿಷಯ ನಮಗೆ ಪರಿಪೂರ್ಣ ಅರ್ಥವಾಗುವವರೆಗೂ ಅದನ್ನು ಓದುವುದನ್ನು ಬಿಡಬಾರದು. ಒಂದೇ ವಿಷಯವನ್ನು ನಾನು ಐದಾರು ಬಾರಿ ಓದಿದ್ದರಿಂದಲೇ ಪರೀಕ್ಷೆ ಹತ್ತಿರ ಬಂದಾಗಲೂ ಯಾವುದೇ ಗೊಂದಲ, ಒತ್ತಡ ಇರಲಿಲ್ಲ. ನಮ್ಮ ನಮ್ಮ ಜ್ಞಾಪಕ ಶಕ್ತಿಯನ್ನು ನಾವೇ ಅಳತೆ ಮಾಡಿಕೊಂಡು, ನಾನು ಎಷ್ಟು ಬಾರಿ ಓದಬೇಕು, ಎಷ್ಟು ಸಮಯ ಓದಬೇಕು ಎಂದು ನಿರ್ಧರಿಸುವುದು ಮುಖ್ಯ.

ಪ್ರತಿ ದಿನ ಕನಿಷ್ಠ 4ರಿಂದ ಗರಿಷ್ಠ 6 ತಾಸು ಓದುವುದು ನನ್ನ ರೂಢಿ. ಬೆಳಿಗ್ಗೆ ಅಥವಾ ರಾತ್ರಿ ಓದಿದರೆ ಮಾತ್ರ ತಲೆಗೆ ಹತ್ತುತ್ತದೆ ಎನ್ನುವವರೂ ಇದ್ದಾರೆ. ಕೆಲವರಿಗೆ ಆ ರೂಢಿ ಇರುತ್ತದೆ. ಹಾಗೆಂದು ಎಲ್ಲರೂ ಒಂದೇ ರೀತಿಯ ಕ್ರಮ ಅನುಸರಿಸಬೇಕು ಎಂದೇನಿಲ್ಲ. ನಮಗೆ ಅನುಕೂಲಕರ ಸಮಯವನ್ನು ನಾವು ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಶ್ರೀಗುರು ಇಂಟಿಗ್ರೇಟೆಡ್‌ ಪದವಿಪೂರ್ವ ಕಾಲೇಜಿಗೆ ಸೇರಿದ ದಿನದಿಂದಲೂ ನಾನು ಹೆಚ್ಚಾಗಿ ಅವಲಂಬಿಸಿದ್ದು ನೋಟ್ಸ್‌ಗಳನ್ನು. ಪ್ರಥಮ ಹಾಗೂ ದ್ವಿತೀಯ ಪದವಿಪೂರ್ವ ತರಗತಿಗಳ ಎಲ್ಲ ಪಠ್ಯ ಪುಸ್ತಕಗಳೂ ದೊಡ್ಡ ಗಾತ್ರದಲ್ಲಿರುತ್ತವೆ. ಹೆಚ್ಚು ಓದು ಇರುತ್ತದೆ. ಹಾಗಾಗಿ, ಕಾಲೇಜಿನಲ್ಲಿ ಉಪನ್ಯಾಸಕರು ನೀಡುವ ನೋಟ್ಸ್‌ ಬಹಳ ಸಹಕಾರಿ. ನಮ್ಮ ಎಲ್ಲ ಉಪನ್ಯಾಸಕರೂ ದೊಡ್ಡ ಪಠ್ಯಕ್ರಮವನ್ನು ಚಿಕ್ಕದಾಗಿ ನೋಟ್ಸ್‌ ಮಾಡಿ ನೀಡಿದ್ದರಿಂದ ಹೆಚ್ಚು ಅನುಕೂಲಕ ಆಯಿತು.

ನೋಟ್ಸ್‌ನಿಂದ ಇನ್ನೊಂದು ಅನುಕೂಲ ಏನೆಂದರೆ, ಅಂದಿನ ವಿಷಯವನ್ನು ಅಂದೇ ಪೂರ್ಣವಾಗಿ ಓದಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ರಸಾಯನವಿಜ್ಞಾನ ವಿಷಯ ಓದಿ ಮುಗಿಸುವಷ್ಟರಲ್ಲಿ, ಜೀವವಿಜ್ಞಾನಕ್ಕೆ ಸಮಯವೇ ಸಿಗದಂತೆ ಆಗುತ್ತದೆ. ಇವೆರಡೂ ಮುಗಿಸಿದರೂ ಗಣಿತ ಮತ್ತು ಇನ್ನುಳಿದ ವಿಷಯಗಳಿಗೆ ಸಮಯ ಸಾಲುವುದಿಲ್ಲ. ಹಾಗಾಗಿ, ನೋಟ್ಸ್‌ಗಳ ಮೇಲೆ ಒಮ್ಮೆ ಕಣ್ಣಾಡಿಸಿದರೂ ಸಾಕು; ಪೂರ್ಣ ವಿಷಯ ಒಂದೊಂದಾಗಿ ನೆನಪಾಗುತ್ತ ಹೋಗುತ್ತದೆ. ನನಗೆ ನೋಟ್ಸ್‌ ಹಾಗೂ ರಿವಿಜನ್‌ ಬಹಳ ಅಗತ್ಯ ಅನ್ನಿಸಿತು.

ಪರೀಕ್ಷೆಗಳು ಹತ್ತಿರ ಬಂದಾಗ ಪ್ರತಿ ದಿನ ಹಳೆ ಪ್ರಶ್ನೆ ಪತ್ರಿಕೆಗಳನ್ನು ಪಡೆದು, ಉತ್ತರ ಬರೆಯಲು ಪ್ರಯತ್ನಿಸುವುದು ಬಹಳ ಮುಖ್ಯ. ಅದನ್ನು ಕಾಟಾಚಾರಕ್ಕೆ ಮಾಡಕೂಡದು. ನಾನು ವಾರ್ಷಿಕ ಪರೀಕ್ಷೆಯ ಮಾದರಿಯಲ್ಲೇ ಸಮಯದ ಅಲಾರಾಮ್‌ ಇಟ್ಟುಕೊಂಡು ಈ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಿದ್ದೆ. ಮಾರನೇ ದಿನ ಅದರ ರಿಸಲ್ಟ್‌ ಏನಾಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಹೀಗಾಗಿ, ವಾರ್ಷಿಕ ಪರೀಕ್ಷೆ ಬರೆದ ನಂತರ ಫಲಿತಾಂಶ ಬರುವ ಮುನ್ನವೇ ನನಗೆ ಎಷ್ಟು ಅಂಕ ಬರಬಹುದು ಎಂದು ಅಂದಾಜಿಸಿದ್ದೆ. ಅದೇ ರೀತಿ 590 (ಶೇ 98.33) ಅಂಕಗಳು ಬಂದವು.

ಇಡೀ ದಿನವನ್ನು ಓದಿಗಾಗಿಯೇ ಮೀಸಲಿಟ್ಟ ದಿನಗಳು ಒಂದೂ ಇಲ್ಲ. ಪ್ರತಿ ದಿನ ಕೆಲ ಹೊತ್ತು ಸಹಪಾಠಿಗಳ ಜೊತೆ ಹರಟೆ, ಮನೆಯವರ ಜೊತೆ ಸಣ್ಣ ಪುಟ್ಟ ಕೆಲಸ ಅಥವಾ ಮೊಬೈಲ್‌, ಆಟ, ಏನಾದರೂ ಪಠ್ಯೇತರ ಚಟುವಟಿಕೆ ಮಾಡುತ್ತಿರಬೇಕು. ಇದು ಮನಸ್ಸು ಭಾರವಾಗದಂತೆ ತಡೆಯುತ್ತದೆ.

–ನಿಕಿತಾ ಯು. ಪಾಟೀಲ (ದ್ವಿತೀಯ ಪಿಯು ವಿಜ್ಞಾನ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ)

ನಿರೂಪಣೆ: ಸಂತೋಷ ಈ.ಚಿನಗುಡಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು