ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬೆಳೆಗೆ ಕಂಠಕವಾದ ಕಳೆ: ಕೂಲಿ ಕಾರ್ಮಿಕರನ್ನು ಕರೆತರಲು ರೈತರಿಂದ ಸಾಹಸ

Last Updated 13 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಈ ವರ್ಷ ಹದವಾಗಿ ಸುರಿದ ಮುಂಗಾರು ಮಳೆಯಿಂದ ಬೆಳೆಗಳೆಲ್ಲ ಹುಲುಸಾಗಿ ಬೆಳೆಯುತ್ತಿವೆ. ಜೊತೆಗೆ ಹತ್ತಿ, ತೊಗರಿ ಹಾಗೂ ಹೆಸರು ಬೆಳೆಗಳಲ್ಲಿ ಭಾರಿ ಪ್ರಮಾಣದಲ್ಲಿ ಕಳೆ ಬೆಳೆದು ಕಂಠಕವಾಗಿದೆ.

ಜೂನ್‌ ಆರಂಭದಲ್ಲಿ ಬಿತ್ತನೆ ಮಾಡಿದ್ದ ರೈತರ ಜಮೀನುಗಳಲ್ಲಿ ಬೆಳೆಗಿಂತಲೂ ಕಳೆ ಎತ್ತರವಾಗಿದೆ. ಬೆಳೆಗಳ ಸಾಲಿನಲ್ಲೇ ಕಳೆ ಇರುವುದರಿಂದ ಕೈಯಿಂದಲೇ ಕಿತ್ತು ಹಾಕುವ ಅನಿವಾರ್ಯತೆ ಇದೆ. ಔಷಧಿ ಸಂಪರಣೆ ಮಾಡಿದರೆ, ಎಡೆ ಹೊಡೆದರೆ ಕಳೆ ಕಿತ್ತುಹೋಗುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಬಿತ್ತನೆ ಮಾಡಿದ ಒಂದು ತಿಂಗಳಲ್ಲಿ ಕಳೆ ತೆಗೆದುಹಾಕುವುದು ಸುಲಭ. ಆದರೆ ಈ ವರ್ಷ ಬಿಟ್ಟುಬಿಡದೆ ಮಳೆ ಬೀಳುತ್ತಿದೆ. ಭೂಮಿಯಲ್ಲಿ ಹಸಿ ಕಾಯಂ ಉಳಿದುಕೊಂಡಿದ್ದು, ಕಳೆ ಕಿತ್ತಲು ಆಗುತ್ತಿಲ್ಲ. ಮಳೆ ಬಿಡುವು ನೀಡಿದಾಗ ಸರಿಯಾದ ಸಮಯಕ್ಕೆ ಕೃಷಿ ಕೂಲಿ ಕಾರ್ಮಿಕರು ಸಿಗುವುದಿಲ್ಲ. ಇಂಥ ಇಕ್ಕಟ್ಟಿನಿಂದ ಬೇಸತ್ತಿದ್ದ ರಾಯಚೂರು ತಾಲ್ಲೂಕಿನ ಹುಣಸಿಹಾಳಹುಡಾ ಗ್ರಾಮದ ರೈತರೊಬ್ಬರು ಐದು ಎಕರೆಯಲ್ಲಿ ಬೆಳೆದಿದ್ದ ಹತ್ತಿಯನ್ನು ಕಳೆ ಸಹಿತ ಕಿತ್ತುಹಾಕಿದ್ದಾರೆ.

ಕಳೆ ಹೆಚ್ಚಾಗಿದ್ದರೆ ಬೆಳೆ ಬೆಳೆಯುವುದಿಲ್ಲ. ಬೇರೆ ಬೇರೆ ಊರುಗಳಿಂದ ಕೃಷಿ ಕೂಲಿಕಾರರನ್ನು ಕರೆತರುವುದು ರೈತರಿಗೆ ಸವಾಲಾಗಿದೆ. ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೂ ಕೆಲಸ ಮಾಡಲು ಮಹಿಳೆಯರಿಗೆ ದಿನಕ್ಕೆ ₹200 ಹಾಗೂ ಪುರುಷರಿಗೆ ₹300 ದಿನಗೂಲಿ ನೀಡುವುದು ಸಾಮಾನ್ಯವಾಗಿದೆ. ಕೆಲವು ರೈತರು ಹೆಚ್ಚು ದಿನಗೂಲಿ ಕೊಟ್ಟು ಕಳೆ ತೆಗೆಸುವ ಕೆಲಸುತ್ತಿದ್ದಾರೆ. ಬೇರೆ ಊರುಗಳಿಂದ ಕಾರ್ಮಿಕರನ್ನು ಕರೆತರಲು ಮಧ್ಯವರ್ತಿಗಳಿದ್ದಾರೆ. ಕರೆತರುವ ವಾಹನದ ಬಾಡಿಗೆ ಹಾಗೂ ಮಧ್ಯವರ್ತಿಗೆ ಕಮಿಷನ್‌ನನ್ನು ರೈತರು ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ.

ಕಾಲುವೆ ಭಾಗಗಳಲ್ಲಿ ಭತ್ತ ಬಿತ್ತನೆ ಈಗ ಚುರುಕಾಗಿದೆ. ಬಹುತೇಕ ಕೃಷಿ ಕಾರ್ಮಿಕರು ಭತ್ತದ ನಾಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಇದರಿಂದ ಬೇರೆ ಬೆಳೆ ಬೆಳೆದಿರುವ ರೈತರ ಜಮೀನುಗಳ ಕಳೆ ಹಾಗೇ ಉಳಿದುಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಸದ್ಯಕ್ಕೆ ಕೆಲವು ದಿನಗಳವರೆಗೆ ಬಿಸಿಲಿನ ವಾತಾವರಣ ಬರಬೇಕಾಗಿದೆ. ನೆಲದ ಹಸಿ ಕಡಿಮೆಯಾದರೆ ಕಳೆ ತೆಗೆದು ಹಾಕುವುದಕ್ಕೆ ಸಾಧ್ಯವಾಗಲಿದೆ.

ಬೆಳೆಗಳಿಗೆ ಸಿಗಬೇಕಾದ ಭೂಮಿಯ ಪೋಷಕಾಂಶಗಳನ್ನೆಲ್ಲ ಕಳೆ ತೆಗೆದುಕೊಳ್ಳುತ್ತವೆ. ಇದರಿಂದ ಬೆಳೆಗಳು ಎತ್ತರಾಗುವ ಬದಲು ಮತ್ತಷ್ಟು ಕುಬ್ಜವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT