ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಟ್ಟನಿಟ್ಟಿನ ನಡುವೆ ಗರಿಗೆದರಿದ ಅಕ್ರಮ ದಂಧೆ

Last Updated 28 ಮಾರ್ಚ್ 2020, 9:57 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೊರೊನಾ ವೈರಸ್ ಹರಡುವ ಭೀತಿಯ ನಡುವೆ ಅಕ್ರಮ ಚಟುವಟಿಕೆ ತಾಲ್ಲೂಕಿನಲ್ಲಿ ಗರಿಗೆದರಿವೆ. ಜನರನ್ನು ಮನೆಯಲ್ಲಿ ಕಟ್ಟಿಹಾಕುವ ಪ್ರಯತ್ನವನ್ನು ತಾಲ್ಲೂಕು ಆಡಳಿತ ನಡೆಸುತ್ತಿದ್ದರೆ ಇನ್ನೊಂದೆಡೆ ಅಕ್ರಮ ಮರಳು ಸಂಗ್ರಹ, ಸಾಗಣೆ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.

ತಾಲ್ಲೂಕಿನ ತುಂಗಾ, ಮಾಲತಿ, ಕುಂಟೇಹೊಳೆ, ಗೋಪಿನಾಥಹಳ್ಳ ಸೇರಿ ಅನೇಕ ಭಾಗಗಳಲ್ಲಿ ಸ್ಥಳೀಯವಾಗಿ ಲಭ್ಯ ಇರುವ ಮರಳನ್ನು ಸಣ್ಣ ಪುಟ್ಟ ವಾಹನಗಳ ಮೂಲಕ ಸಾಗಣೆ ಮಾಡಲಾಗುತ್ತಿದೆ. ಕೆಲ ದಂಧೆಕೋರರು ನದಿ, ತೊರೆಗಳಲ್ಲಿ ಸಿಗುವ ಮರಳನ್ನು ದೋಚಿ ಸಂಗ್ರಹಿಸಿಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಅಕ್ರಮ ಮದ್ಯ ಮಾರಾಟ: ಜನರ ಪ್ರಾಣಕ್ಕೆ ಕುತ್ತು ತರುತ್ತಿರುವ ಕಳಪೆ ದರ್ಜೆಯ ಅಕ್ರಮ ಮದ್ಯ ಮಾರಾಟ ಯಾವುದೇ ಅಡತಡೆ ಇಲ್ಲದೇ ತಾಲ್ಲೂಕಿನಲ್ಲಿ ನಿರಾತಂಕವಾಗಿ ನಡೆಯುತ್ತಿದೆ. ಕಳಪೆ ದರ್ಜೆಯ ಮದ್ಯ ಸೇವಿಸಿ ಹಲವರು ಜೀವ ತೆತ್ತಿದ್ದಾರೆ.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಕುರಿತು ಖಚಿತ ಮಾಹಿತಿ ಇದ್ದರೂ ಸಂಬಂಧಪಟ್ಟ ಇಲಾಖೆಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಪೂರೈಕೆ, ಮಾರಾಟವನ್ನು ತಡೆಯಲು ಅಬಕಾರಿ, ಪೊಲೀಸ್ ಇಲಾಖೆಗೆ ಸಾಧ್ಯವಾಗದೇ ಇರುವುದು ಸಾರ್ವಜನಿಕರಲ್ಲಿ ವ್ಯಾಪಕ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಹಳ್ಳಿಗಳಲ್ಲಿ ಕೆಲ ಆಯ್ದ ಮನೆಗಳು, ದಿನಸಿ ಅಂಗಡಿ, ಸಣ್ಣ ಪುಟ್ಟ ಹೋಟೆಲ್, ಗೂಡಂಗಡಿ, ನೆರಳೇ ಇಲ್ಲದ ನಿಗದಿತ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ₹ 30 ಮುಖ ಬೆಲೆಯ 90 ಮಿಲಿಯ 1 ಮದ್ಯದ ಸ್ಯಾಚೆಟ್ ಹಳ್ಳಿಗಳಲ್ಲಿ ₹ 70ರಿಂದ 80ರ ಬೆಲೆಗೆ ಗುರುವಾರ ರಾತ್ರಿ ಮಾರಾಟವಾಗಿದೆ. ದಲಿತ ಕೇರಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ನಡೆಸಲಾಗುತ್ತಿದೆ.

ಪರವಾನಗಿ ಪಡೆದ ವೈನ್ ಷಾಪ್, ಬಾರ್, ರೆಸ್ಟೋರೆಂಟ್‌ನ ಕೆಲ ಮಾಲೀಕರು ಅಕ್ರಮ ಮದ್ಯ ಪೂರೈಕೆ ಮಾಡುವುದನ್ನು ಹಳ್ಳಿಗಳಿಗೆ ವಿಸ್ತರಿಸಿಕೊಂಡಿದ್ದಾರೆ. ನಿರ್ದಿಷ್ಟ ಭಾಗಕ್ಕೆ ತಮ್ಮ ಕಡೆಯವರು ಮಾತ್ರ ಸರಬರಾಜು ಮಾಡಬೇಕು ಎಂಬ ಅಘೋಷಿತ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ.

ಅಕ್ರಮ ಮದ್ಯದ ಮೊಬೈಲ್ ಸರ್ವಿಸ್: ಕೆಲ ಪರಿಣತ ದಂಧೆಕೋರರು ಹಳ್ಳಿಗಳಿಗೆ ಸುಲಭವಾಗಿ ಬೈಕು, ಕಾರಿನ ಮೂಲಕ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದಾರೆ. ದಂಧೆಕೋರರಿಗೆ ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವೃದ್ಧರು ಕಡಿಮೆ ಬೆಲೆಯ ಅಕ್ರಮ ಮದ್ಯ ಸೇವಿಸುತ್ತಿರುವುದರ ಪ್ರಭಾವಕ್ಕೆ ಒಳಗಾದ ಯುವ ಸಮೂಹ ಕೂಡ ಮದ್ಯದ ಚಟ ಅಂಟಿಸಿಕೊಳ್ಳುವಂತಾಗಿದೆ. ಅನೇಕ ಕುಟುಂಬದಲ್ಲಿ ಹಿರಿಯರು ಕುಡಿತದ ಚಟಕ್ಕೆ ದಾಸರಾಗಿ ಹಾಸಿಗೆ ಹಿಡಿದಿದ್ದಾರೆ.

ಹಳ್ಳಿಯಿಂದ ಪೇಟೆಗೆ ಹೋಗುವುದಕ್ಕೆ ಹಣ ಖರ್ಚಾಗುತ್ತದೆ. ಬಸ್ಸಿನ ವ್ಯವಸ್ಥೆ ಇಲ್ಲ. ಅದಕ್ಕಾಗಿ ಸ್ಥಳೀಯವಾಗಿ ಸಿಗುವ ಮದ್ಯವನ್ನು ಹೆಚ್ಚು ಬೆಲೆ ಕೊಟ್ಟಾದರೂ ಕೊಂಡು ಸೇವಿಸುವುದಾಗಿ ಹೆಸರು ಹೇಳಲಿಚ್ಛಿಸದವರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT