ಶುಕ್ರವಾರ, ಮಾರ್ಚ್ 5, 2021
21 °C
ಮಂಗಳವಾರವೂ ಬೇಡಿಕೆ ಹೆಚ್ಚಳ; ಗೋದಾಮಿನಿಂದ ₹4.79 ಕೋಟಿ ಮೌಲ್ಯದ ಉತ್ಪನ್ನ ಸರಬರಾಜು

ರಾಮನಗರ: 1ಲಕ್ಷ ಲೀಟರ್ ಮದ್ಯ ಒಂದೇ ದಿನ ಖಾಲಿ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: 44ದಿನಗಳ ಲಾಕ್‌ಡೌನ್‌ ಬಳಿಕ ಜಿಲ್ಲೆಯ ಮದ್ಯದಂಗಡಿಗಳು ಸೋಮವಾರ ಬಾಗಿಲು ತೆರೆದಿದ್ದು, ಈ ದಿನ ಅಂಗಡಿಗಳಲ್ಲಿ ಮಾರಾಟವಾದ ಒಟ್ಟು ಮದ್ಯದ ಪ್ರಮಾಣ ಬರೋಬ್ಬರಿ 1.04 ಲಕ್ಷ ಲೀಟರ್‌ ದಾಟಿದೆ! ಇದರಲ್ಲಿ 76 ಸಾವಿರ ಲೀಟರ್‌ನಷ್ಟು.

76ಸಾವಿರ ಲೀಟರ್‌ ಮದ್ಯ (ವಿಸ್ಕಿ, ರಮ್‌, ಜಿನ್‌, ವೋಡ್ಕಾ ಇತ್ಯಾದಿ) ಸೇರಿದ್ದರೆ, 28 ಸಾವಿರ ಲೀಟರ್‌ ಬಿಯರ್‌ ಒಂದೇ ದಿನ ಮಾರಾಟವಾಗಿದೆ. ಇದು ಜಿಲ್ಲೆಯ ಪಾಲಿಗೆ ಒಂದು ದಿನದಲ್ಲಿ ಮಾರಾಟವಾದ ಮದ್ಯದ ದಾಖಲೆ ಪ್ರಮಾಣವಾಗಿದೆ. ಈ ಹಿಂದೆ ದಿನವೊಂದಕ್ಕೆ 23ಸಾವಿರ ಲೀಟರ್ ಮದ್ಯ ಹಾಗೂ 11ಸಾವಿರ ಲೀಟರ್ ಬಿಯರ್ ಬಿಕರಿಯಾಗಿದ್ದೇ ಈವರೆಗಿನ ದಾಖಲೆಯಾಗಿತ್ತು.

ದೇಶದಲ್ಲಿ ಲಾಕ್‌ಡೌನ್‌ ಆದೇಶ ಜಾರಿಗೊಂಡ ದಿನದಿಂದ ರಾಮನಗರ ಜಿಲ್ಲೆಯಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಸೋಮವಾರದಿಂದ ಮತ್ತೆ ಇದಕ್ಕೆ ಅವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ 16 ಎಂಎಸ್‌ಐಎಲ್ ಹಾಗೂ 87 ಸಿಎಲ್‌-2 ಅಂಗಡಿಗಳ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ರಾಮನಗರದಲ್ಲಿ ಅತಿ ಹೆಚ್ಚು

ಮದ್ಯ ಮಾರಾಟದಲ್ಲಿ ರಾಮನಗರ ತಾಲ್ಲೂಕು ಮುಂದೆ ಇದೆ. ಇಲ್ಲಿ ಒಂದೇ ದಿನ 22 ಸಾವಿರ ಲೀಟರ್ ಮದ್ಯ ಹಾಗೂ 8,800 ಲೀಟರ್ ಬಿಯರ್ ಖಾಲಿಯಾಗಿದೆ. ಚನ್ನಪಟ್ಟಣ ತಾಲ್ಲೂಕು ಕಡೆಯ ಸ್ಥಾನದಲ್ಲಿದ್ದು, ಇಲ್ಲಿ 14800 ಲೀಟರ್‌ನಷ್ಟು ಮದ್ಯ ಹಾಗೂ 4600 ಲೀಟರ್‌ ಬಿಯರ್‌ ಖಾಲಿಯಾಗಿದೆ.

ಮಂಗಳವಾರವೂ ಬೇಡಿಕೆ

ಮದ್ಯದಂಗಡಿಗಳಲ್ಲಿನ ಹಳೆಯ ದಾಸ್ತಾನು ಖಾಲಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಅಂಗಡಿಗಳಿಂದ ಬೇಡಿಕೆ ಹೆಚ್ಚಿತ್ತು. ಜಿಲ್ಲೆಯಲ್ಲಿ ಮಾಗಡಿ ತಾಲ್ಲೂಕು ಹೊರತುಪಡಿಸಿ ಉಳಿದ ಮೂರು ತಾಲ್ಲೂಕಿನಲ್ಲಿ ಈ ದಿನ ಎಂಎಸ್‌ಐಎಲ್ ಗೋಡೌನ್‌ನಿಂದ ₹4.79 ಕೋಟಿ ಮೌಲ್ಯದ ಮದ್ಯವು ಅಂಗಡಿಗಳಿಗೆ ಸರಬರಾಜಾಗಿದೆ. 14,655 ಕೇಸ್‌ನಷ್ಟು ಮದ್ಯ ಹಾಗೂ 1,798 ಕೇಸ್‌ನಷ್ಟು ಬಿಯರ್ ಅನ್ನು ವೈನ್‌ಶಾಪ್‌ಗಳ ಮಾಲೀಕರು ಕೊಂಡೊಯ್ದಿದ್ದಾರೆ.

ದಾಸ್ತಾನು ಕಡಿಮೆ

ರಾಮನಗರ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳಿಗೆ ರಾಮನಗರದ ಗೋದಾಮಿನಿಂದ ಹಾಗೂ ಮಾಗಡಿ ತಾಲ್ಲೂಕಿಗೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿನ ಗೋದಾಮಿನಿಂದ ಮದ್ಯ ಸರಬರಾಜು ಆಗುತ್ತಿದೆ. ರಾಮನಗರ ಗೋದಾಮಿನಲ್ಲಿ ಈಗಾಗಲೇ ಕೆಲವು ಬ್ರಾಂಡ್‌ಗಳ ಮದ್ಯ ಖಾಲಿಯಾಗಿದೆ. ಇನ್ನು ಒಂದು ವಾರಕ್ಕೆ ಆಗು‌ವಷ್ಟು ದಾಸ್ತಾನು ಇದೆ. ಹೊಸ ಮದ್ಯದ ಬಾಟಲಿಗಳು ಬರಲು ಇನ್ನೂ ಮೂರ್ನಾಲ್ಕು ದಿನ ಬೇಕು. ಮದ್ಯ ಉತ್ಪಾದನೆ ಕಾರ್ಖಾನೆಗಳಲ್ಲಿ ಶೇ 33ರಷ್ಟು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿರುವ ಕಾರಣ ಸಗಟು ಮದ್ಯ ಪೂರೈಕೆ ಪ್ರಮಾಣವೂ ತಗ್ಗಬಹುದು ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು