ಭಾನುವಾರ, ಅಕ್ಟೋಬರ್ 25, 2020
21 °C
ಒಟ್ಟು 11 ಪ್ರಕರಣ ದಾಖಲು: 15 ಮಂದಿ ವಶಕ್ಕೆ

ರಾಮನಗರ: 15 ದಿನದಲ್ಲಿ 133 ಕೆ.ಜಿ. ಗಾಂಜಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಾದ್ಯಂತ ಗಾಂಜಾ ಬೆಳೆಗಾರರು ಮತ್ತು ಮಾರಾಟ ಜಾಲದ ಮೇಲೆ ಪೊಲೀಸರು ದಾಳಿ ಮುಂದಿವರಿಸಿದ್ದು, ಕಳೆದ 15 ದಿನಗಳಲ್ಲಿ 11 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಬರೋಬ್ಬರಿ ₹43.91 ಲಕ್ಷ  ಮೌಲ್ಯದ 133 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

'ಒಟ್ಟಾರೆ 22 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರಲ್ಲಿ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಹೊರ ರಾಜ್ಯಗಳ ಮಾರಾಟ ಜಾಲವನ್ನೂ ಬೇಧಿಸಲಾಗಿದೆ. ಒಟ್ಟಾರೆ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದೇವೆ. ಪ್ರಮುಖವಾಗಿ ಗಾಂಜಾ ಮಾರಾಟವಾಗುವ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಎಸ್.ಗಿರೀಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

'ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 91 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ 25 ಪ್ರಕರಣಗಳು ದಾಖಲಾಗಿದ್ದವು. ಈಗ 15 ದಿನಗಳಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾಗಡಿ ವ್ಯಾಪ್ತಿಯಲ್ಲಿ 60 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು, ಅಂತರರಾಜ್ಯ ಪೂರೈಕೆದಾರರು ಆರು 6 ಮಂದಿಯನ್ನು ಬಂಧಿಸಲಾಗಿದೆ. ರಾಮನಗರ, ಹಾರೋಹಳ್ಳಿ, ಚನ್ನಪಟ್ಟಣ ಮೊದಲಾದ ಕಡೆಗಳಲ್ಲಿ ಪ್ರಕರಣಗಖಳು ದಾಖಲಾಗಿವೆ’ ಎಂದು ವಿವರಿಸಿದರು.

'ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ರಾಮನಗರಕ್ಕೆ ಗಾಂಜಾ ತಂದು ನಂತರ ಇಲ್ಲಿಂದ ಪ್ರವಾಸಿ ತಾಣಗಳು, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು. ಕೇವಲ ಮಾರಾಟಗಾರರನ್ನು ಹಿಡಿಯುವುದು ಮಾತ್ರವಲ್ಲದೇ, ಬೆಳೆಯುವವರು ಮತ್ತು ಪೂರೈಕೆದಾರರನ್ನೂ ಹೆಡೆಮುರಿ ಕಟ್ಟಲಾಗಿದೆ. ಮಾಗಡಿಯಲ್ಲಿ ಪತ್ತೆಯಾದ ಗಾಂಜಾ ಆಂಧ್ರಪ್ರದೇಶ ವಿಶಾಖಪಟ್ಟಣದ್ದು. ನಮ್ಮ ಪೊಲೀಸರು ಗಾಂಜಾ ಕೊಳ್ಳುವವರಂತೆ ಕರೆ ಮಾಡಿ ಬಲೆ ಬೀಸಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಅವರು ವಿಶ್ಲೇಷಿಸಿದರು.

ಎಎಸ್ಪಿ ರಂಗರಾಜನ್, ಡಿವೈಎಸ್ಪಿ ಪುರುಷೋತ್ತಮ್, ಓಂ ಪ್ರಕಾಶ್, ಸಿಪಿಐಗಳಾದ ಬಿ.ಎಸ್.ಮಂಜುನಾಥ್, ನರಸಿಂಹಮೂರ್ತಿ ಇದ್ದರು.

ವ್ಯಸನಿಗಳಿಗೆ ಕೌನ್ಸೆಲಿಂಗ್

ಗಾಂಜಾ ಮಾರಾಟ ಜಾಲದ ನಿರ್ಮೂಲನೆ ಸಲುವಾಗಿ ವಿವಿಧ ಇಲಾಖೆಗಳ ಜೊತೆ ಚರ್ಚೆ ನಡೆಸಲಾಗಿದೆ. ಗಾಂಜಾ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜೊತೆಗೆ ವ್ಯಸನಿಗಳಿಗೆ ಕೌನ್ಸೆಲಿಂಗ್ ನಡೆಸಲು ಆರೋಗ್ಯ ಇಲಾಖೆ ಸಹಕಾರ ಕೋರಿದ್ದೇವೆ’ ಎಂದು ಎಸ್ಪಿ ಗಿರೀಶ್‌ ಮಾಹಿತಿ ನೀಡಿದರು.

***
ಜಿಲ್ಲೆಯ ಪೊಲೀಸ್ ಸಿಬ್ಬಂದಿ ಶ್ರಮದಿಂದ 15 ದಿನದಲ್ಲಿ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದೇವೆ. ಪೂರೈಕೆ ಮತ್ತು ಮಾರಾಟ ಜಾಲದ ಮೇಲೆ ಕಣ್ಣಿಟ್ಟಿದ್ದೇವೆ
-ಎಸ್. ಗಿರೀಶ್‌, ಎಸ್ಪಿ, ರಾಮನಗರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು