ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: 154 ಟನ್ ಪಡಿತರ ಅಕ್ಕಿ, 7 ಟನ್ ರಾಗಿ ನಾಪತ್ತೆ

2 ತಿಂಗಳ ವಿತರಣೆಗೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ಅಕ್ಕಿ ಕಳ್ಳತನ: ಗೋದಾಮು ವ್ಯವಸ್ಥಾಪಕನ ಬಂಧನ
Published 24 ನವೆಂಬರ್ 2023, 0:10 IST
Last Updated 24 ನವೆಂಬರ್ 2023, 0:10 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಸಹಕಾರ ಸಂಘದ (ಟಿಎಪಿಎಂಎಸ್) ಗೋದಾಮಿನಲ್ಲಿದ್ದ ₹55.04 ಲಕ್ಷ ಮೌಲ್ಯದ 154 ಟನ್ ಪಡಿತರ ಅಕ್ಕಿ ಹಾಗೂ 7 ಟನ್ ರಾಗಿ ಕಳ್ಳತನವಾಗಿದೆ.

ಘಟನೆ ಕುರಿತು ತಾಲ್ಲೂಕು ಆಹಾರ ನಿರೀಕ್ಷಕ ಕೆ. ಚೇತನ್‌ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಚನ್ನಪಟ್ಟಣ ಪುರ ಠಾಣೆ ಪೊಲೀಸರು, ಗೋದಾಮಿನ ವ್ಯವಸ್ಥಾಪಕ ಬಿ.ಆರ್. ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದಾರೆ.

ಸಂಗ್ರಹವಿರುವ ಪಡಿತರ ಪರಿಶೀಲಿಸಲು ಆಹಾರ ನಿರೀಕ್ಷಕರು ಬುಧವಾರ ಗೋದಾಮಿಗೆ ಭೇಟಿ ನೀಡಿದ್ದಾಗ ಅಕ್ಕಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಮಹೇಂದ್ರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಮ್ಯ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ರಾತ್ರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ, ವ್ಯವಸ್ಥಾಪಕನ ಬಂಧನವಾಗಿದೆ.

₹55.04 ಲಕ್ಷ ಮೌಲ್ಯ: ‘ಗೋದಾಮಿನಿಂದ ಕಳ್ಳತನವಾಗಿರುವ ಅಕ್ಕಿಯು ₹52.49 ಲಕ್ಷ ಹಾಗೂ ರಾಗಿ ₹2.55 ಲಕ್ಷ ಸೇರಿ ಒಟ್ಟು ₹55.04 ಲಕ್ಷ ಮೌಲ್ಯದ್ದಾಗಿದೆ. ಇಲ್ಲಿಂದ ಚನ್ನಪಟ್ಟಣ ತಾಲ್ಲೂಕಿನ 67 ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆಯಾಗುತ್ತಿತ್ತು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ರಮ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಕಳ್ಳತನವಾಗಿರುವ ಅಕ್ಕಿಯು ಕಳೆದ ಮೂರು ವಾರಗಳಿಂದ ಕೇಂದ್ರಿಯ ಭಂಡಾರದಿಂದ ಬಂದಿತ್ತು. ಜೊತೆಗೆ, ರಾಜ್ಯ ಸರ್ಕಾರ ಕೇಂದ್ರದಿಂದ ಖರೀದಿಸಿದ್ದ ಅಕ್ಕಿಯಾಗಿದೆ. ನವೆಂಬರ್ ತಿಂಗಳಿನ ಪಡಿತರ ಈಗಾಗಲೇ ವಿತರಣೆಯಾಗಿದ್ದು, ಸದ್ಯ ಕಳ್ಳತನವಾಗಿರುವ ಅಕ್ಕಿ ಮತ್ತು ರಾಗಿಯನ್ನು ಮುಂದಿನ ಎರಡು ತಿಂಗಳ ವಿತರಣೆಗೆ ಸಂಗ್ರಹಿಸಿಡಲಾಗಿತ್ತು’ ಎಂದು ಹೇಳಿದರು.

ಪ್ರಭಾವಿಗಳು ಭಾಗಿ?: ಟಿಎಪಿಎಂಎಸ್ ಕಳೆದ ಹತ್ತು ವರ್ಷಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಅಕ್ಕಿ ವಿತರಿಸುತ್ತಾ ಬಂದಿದೆ. ಸದ್ಯ ಬಂಧಿಸಿರುವ ಗೋದಾಮು ವ್ಯವಸ್ಥಾಪಕ ಚಂದ್ರಶೇಖರ್‌, ಒಂದೂವರೆ ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು 3 ಸಾವಿರ ಮೂಟೆಯಷ್ಟು ಅಕ್ಕಿ ಮತ್ತು ರಾಗಿ ಕದ್ದಿರುವ ಕೃತ್ಯದಲ್ಲಿ ಈತನ ಜೊತೆಗೆ, ಕೆಲ ಪ್ರಭಾವಿಗಳು ಭಾಗಿಯಾಗಿರುವ ಶಂಕೆ ಇದೆ. ಎಲ್ಲಾ ಆಯಾಮದಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಗುರುವಾರ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಸದ್ಯ ಆಹಾರ ಇಲಾಖೆಯವರು ಗೋದಾಮನ್ನು ಸೀಲ್ ಮಾಡಿದ್ದು, ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಟಿಎಪಿಸಿಎಂಸ್ ಆಡಳಿತ ಮಂಡಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿ ಗುರುವಾರದಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಇದರ ಬೆನ್ನಲ್ಲೇ, ಈ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ವ್ಯವಸಾಯೋತ್ಪನ್ನಗಳ ಸಹಕಾರ ಸಂಘದ (ಟಿಎಪಿಎಂಎಸ್) ಪರವಾನಗಿ ರದ್ದುಪಡಿಸಲಾಗುವುದು. ರಾಜ್ಯ ಉಗ್ರಾಣ ನಿಗಮದ ಗೋದಾಮಿನಿಂದಲೇ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಪೂರೈಸಲಾಗುವುದು

– ರಮ್ಯ ಉಪ ನಿರ್ದೇಶಕಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ನಮ್ಮದೇನೂ ತಪ್ಪಿಲ್ಲ: ಅಧ್ಯಕ್ಷ

ಕೃತ್ಯದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಟಿಎಪಿಸಿಎಂಎಸ್ ಅಧ್ಯಕ್ಷ ಮೇಹರೀಶ್ ‘ಘಟನೆಗೆ ಸಂಬಂಧಿಸಿದಂತೆ ನಮ್ಮದೇನೂ ತಪ್ಪಿಲ್ಲ. ಪಡಿತರ ವಿತರಣೆಯ ಪರವಾನಗಿಯನ್ನು ಸಂಘಕ್ಕೆ ಕೊಟ್ಟಿದ್ದರೂ ನೌಕರರ ಮೂಲಕ ನಾವು ವಿತರಿಸುತ್ತಾ ಬಂದಿದ್ದೇವೆ. ಪ್ರತಿ ತಿಂಗಳು ಇಲ್ಲಿಗೆ ಬರುವ ಪಡಿತರದ ಎಲ್ಲಾ ಮಾಹಿತಿಯನ್ನು ಆಹಾರ ಇಲಾಖೆಯವರೇ ಪರಿಶೀಲಿಸುತ್ತಾರೆ. ಅಧಿಕಾರಿಗಳು ಹೇಳಿದ ಬಳಿಕವೇ ಅಕ್ಕಿ ಕಳ್ಳತನದ ವಿಷಯ ನಮಗೆ ಗೊತ್ತಾಗಿದೆ. ಕೃತ್ಯದಲ್ಲಿ ನಮ್ಮ ಪಾತ್ರವಿಲ್ಲ. ಇಲಾಖೆಯವರೇ ನಿಗಾ ವಹಿಸಬೇಕಿತ್ತು’ ಎಂದರು. ‘ಆಡಳಿತ ಮಂಡಳಿಯೇ ಹೊಣೆ’ ಟಿಎಪಿಸಿಎಂಎಸ್ ಗೋದಾಮಿನಿಂದ ಪಡಿತರ ಅಕ್ಕಿ ಕಳ್ಳತನವಾಗಿರುವ ಕುರಿತು ಅಧ್ಯಕ್ಷ ಮೇಹರೀಶ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರು ರೈತ ಸಂಘದ ಮುಖಂಡ ಸಿ. ಪುಟ್ಟಸ್ವಾಮಿ ಅವರು ‘ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಿಸುವ ಪರವಾನಗಿ ಪಡೆದ ಸಂಘದವರು ಇದೀಗ ತಮ್ಮ ಗೋದಾಮಿನಲ್ಲಿ ಅಕ್ಕಿ ಕಳ್ಳತನವಾಗಿರುವುದಕ್ಕೆ ಆಹಾರ ಇಲಾಖೆಯತ್ತ ಬೆರಳು ತೋರಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಕ್ಕಿ ವಿತರಣೆಗಾಗಿ ಕಮಿಷನ್ ಪಡೆಯುವ ಇವರು ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಇಷ್ಟು ದೊಡ್ಡ ಪ್ರಮಾಣದ ಪಡಿತರ ಕಳ್ಳತನದ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ಇದ್ದು ಪೊಲೀಸರು ಸಮಗ್ರ ತನಿಖೆ ನಡೆಸಿ ಎಲ್ಲರನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT