ಭಾನುವಾರ, ಜುಲೈ 3, 2022
24 °C

ಮಾಗಡಿ: ನಿತ್ಯ ಪರಿಸರ ದಿನ ಆಚರಿಸಲು ತಾಲ್ಲೂಕು ಪಂಚಾಯಿತಿ ಇಒ ಟಿ. ಪ್ರದೀಪ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥ ಸ್ವಾಮಿ ದೇವಾಲಯದ ಸುತ್ತ ಸಸಿ ನೆಟ್ಟು ಹೂವು, ಹಣ್ಣಿನ ಗುಡ್ಡವನ್ನಾಗಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ. ಪ್ರದೀಪ್‌ ತಿಳಿಸಿದರು.

ತಾ.ಪಂ. ಮತ್ತು ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ನರೇಗಾ ಯೋಜನೆಯಡಿ ವಿಶ್ವ ಪರಿಸರ ದಿನದ ಅಂಗವಾಗಿ ಶನಿವಾರ ಸಸಿನೆಟ್ಟು ನೀರೆರೆದು ಅವರು ಮಾತನಾಡಿದರು.

ಗುಡ್ಡದ ರಂಗನಾಥ ಸ್ವಾಮಿ ದೇಗುಲದ ಸುತ್ತಲಿನ ಸರ್ಕಾರಿ ಗೋಮಾಳದಲ್ಲಿ ಪಶು, ಪಕ್ಷಿ, ಪ್ರಾಣಿಗಳಿಗೆ ಹಣ್ಣು ಕೊಡುವ ದೇಶೀಯ ಹಲಸು, ನೇರಳೆ, ಗೋಡಂಬಿ, ಬನ್ನಿ, ಹುಣಸೆ, ಅರಳಿ, ಆಲ, ಬೇಲ, ಹೊಂಗೆ ಹಿಪ್ಪೆ, ಮತ್ತಿ, ಬಿದಿರು ಸೇರಿದಂತೆ ವಿವಿಧ ಜಾತಿಯ 900 ಸಸಿಗಳನ್ನು ನೆಡಲಾಗುತ್ತಿದೆ ಎಂದರು.

ಚಾರಿತ್ರಿಕ ಮತ್ತು ಪುರಾಣ ಪ್ರಸಿದ್ಧ ದೇವಾಲಯಕ್ಕೆ ಬರುವ ಭಕ್ತರು ತಮ್ಮ ಮಕ್ಕಳು, ಹಿರಿಯರ ಹೆಸರಿನಲ್ಲಿ ಒಂದೊಂದು ಸಸಿ ನೆಟ್ಟು, ಬೇಲಿ ಕಟ್ಟಿಸಿ, ಬೆಳೆಸಲು ಅನುಮತಿ ನೀಡಲಾಗಿದೆ. ದೇಶೀಯ ಹಣ್ಣು ಮತ್ತು ಹೂವಿನ ಸಸಿಗಳನ್ನು ನೆಟ್ಟು ಬೆಳೆಸಲು ತೀರ್ಮಾನಿಸಲಾಗಿದೆ. ಸಸಿ ನೆಟ್ಟರೆ ಸಾಲದು. ನಿತ್ಯ ಪರಿಸರ ದಿನಾಚರಣೆಯಂತಿರಬೇಕು. ಪರಿಸರವೇ ನಿಜವಾದ ದೇವರು ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದರು.

ಮಾದಿಗೊಂಡನಹಳ್ಳಿ ಗುರುಪೀಠದ ಅಧ್ಯಕ್ಷ ಎಂ.ಆರ್‌. ರಾಮಸ್ವಾಮಿ ಮಾತನಾಡಿ, ಪೂರ್ವಿಕರು ಪರಿಸರದ ನಡುವೆ ದೈವಾರಾಧನೆ ಮಾಡುತ್ತಾ ಬದುಕಿದ್ದರು. ಪಶು, ಪಕ್ಷಿ, ಪ್ರಾಣಿ, ಸಸ್ಯಸಂಕುಲ, ಜಲಮೂಲ, ನೆಲ ಮೂಲಗಳನ್ನು ರಕ್ಷಿಸುವುದು ದೈವ ಸಂಕಲ್ಪವಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಸಸಿನೆಟ್ಟು ನೀರೆರೆದರು. ಡಿಎಫ್‌ಒ ಗೋಪಿನಾಥ್‌, ತಾ.ಪಂ. ಆಡಳಿತಾಧಿಕಾರಿ ಚಿಕ್ಕಸುಬ್ಬಯ್ಯ, ಆರ್‌ಎಫ್‌ಒ ಧನ್ಯಶ್ರೀ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭೈರಾರೆಡ್ಡಿ, ಮಾದಿಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಗುಡ್ಡದ ರಂಗನಾಥ ಸ್ವಾಮಿ ಟ್ರಸ್ಟ್‌ ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಚಂದ್ರಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು