ರಾಮನಗರ:
‘ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು...’
ನಮ್ಮ ನೆಲದ ಹೆಮ್ಮೆಯ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಮೇಲಿನ ಈ ಸಾಲುಗಳಂತೆ, ಮುಂಗಾರು ಮಳೆಯ ಅಭಿಷೇಕಕ್ಕೆ ಭೂಮಿಯು ಮಿದುವಾಗಿ ಕೃಷಿ ಚಟುವಟಿಕೆಗಳಿಗೆ ಹದಗೊಂಡಿದೆ. ಬಿಸಿಲಿನ ಧಗೆಗೆ ಬಳಲಿದ್ದ ಧರೆಯು, ಮುಂಗಾರಿನ ಸಿಂಚನಕ್ಕೆ ಪುಳಕಗೊಂಡು ಬಿತ್ತನೆಗೆ ಸಿದ್ಧವಾಗಿದೆ.
ಜಿಲ್ಲೆಯಲ್ಲಿ ಸುರಿದಿರುವ ಸಾಧಾರಣ ಮಳೆಯು ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದೆ. ಅನ್ನದಾತ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಹಲವೆಡೆ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿದೆ.
‘ಮುಂಗಾರು ಪೂರ್ವ ಬೆಳೆಗಳ ಬಿತ್ತನೆ ಗುರಿ 1,414 ಹೆಕ್ಟೇರ್ ಪ್ರದೇಶದ ಪೈಕಿ, ಸದ್ಯ 1,063 ಹೆಕ್ಟೇರ್‌ನಷ್ಟು ಗುರಿ ತಲುಪಲಾಗಿದೆ. ಈ ಪೈಕಿ ಎಳ್ಳು, ತೊಗರಿ ಹಾಗೂ ಅಲಸಂದೆಯ ಬಿತ್ತನೆ ಪೂರ್ಣಗೊಂಡಿದೆ. ಎಳ್ಳಿನ ಕಟಾವು ಮುಗಿದಿದ್ದು, ಒಕ್ಕಣೆ ಕಾರ್ಯ ಪ್ರಗತಿಯಲ್ಲಿದೆ. ಮಳೆಯಿಂದಾಗಿ ತೊಗರಿ ಮತ್ತು ಅಲಸಂದೆ ಚೇತರಿಸಿಕೊಂಡಿವೆ. ಬೆಳೆ ನಷ್ಟದ ಅಪಾಯದಿಂದ ರೈತ ಪಾರಾಗಿದ್ದಾನೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಮಕೃಷ್ಣ ಹೇಳಿದರು.
‘ಕಳೆದ ಒಂದು ವಾರದಿಂದ ಸಾಧಾರಣವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ರಾಗಿ, ಹುರಳಿ, ಅವರೆ, ಹುಚ್ಚೆಳ್ಳು, ಸಾಸಿವೆ, ತೊಗರಿ, ನೆಲಗಡಲೆ, ಜೋಳ, ಹಾಗೂ ಅಲಸಂದೆಯ ಬಿತ್ತನೆಯೂ ಭರದಿಂದ ಸಾಗಿದೆ’ ಎಂದು ತಿಳಿಸಿದರು.
‘ಕೆಲವು ದಿನಗಳಿಂದ ಉತ್ತಮ ಮಳೆಯಾಗಿದ್ದು, ರಾಗಿ ಬಿತ್ತನೆಗೆ ಹದ ಉತ್ತಮವಾಗಿದೆ. ಸಕಾಲಕ್ಕೆ ಬಿತ್ತನೆ ಬೀಜವನ್ನು ಪೂರೈಕೆ ಮಾಡಿದರೆ ಆದಷ್ಟು ಬೇಗ ಬಿತ್ತನೆ ಮಾಡಲಾಗುವುದು’ ಎಂದು ಮರಳವಾಡಿಯ ರೈತ ಶ್ರೀನಿವಾಸ್ ಹೇಳಿದರು.
ರಾಗಿಯೇ ಪ್ರಮುಖ: ‘ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿಯನ್ನು ಈ ಸಲ 72,600 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ ಭತ್ತದ ಕಣಜವಾದ ಮಾಗಡಿ ತಾಲ್ಲೂಕಿನಲ್ಲಿ 32 ಸಾವಿರ ಎಕರೆ ಬಿತ್ತನೆ ಗುರಿ ಪೈಕಿ, ಮಳೆಯಾಶ್ರಿತ 600 ಎಕರೆಯಲ್ಲಿ ಈಗಾಗಲೇ ಬಿತ್ತನೆ ಪೂರ್ಣಗೊಂಡಿದೆ’ ಎಂದು ತಿಳಿಸಿದರು.
‘ಜುಲೈ ತಿಂಗಳಿಂದ ಆರಂಭಗೊಂಡು ಆಗಸ್ಟ್ ಅಂತ್ಯದವರೆಗೆ ರಾಗಿ ಬಿತ್ತನೆ ನಡೆಯಲಿದೆ. ಇದೀಗ, ಎಲ್ಲೆಡೆ ಬಿತ್ತನೆ ಆರಂಭಗೊಂಡಿದ್ದು, ಭಾಗಶಃ ಗುರಿ ತಲುಪುವ ನಿರೀಕ್ಷೆ ಇದೆ’ ಎಂದರು.
ಮಾಗಡಿ ಉತ್ತಮ: ಜಿಲ್ಲೆಯಲ್ಲಿ 6 ತಿಂಗಳಲ್ಲಿ ಸುರಿದಿರುವ ಮಳೆ ಪೈಕಿ ಜನವರಿ ಮತ್ತು ಫೆಬ್ರುವರಿಯಲ್ಲಿ ವಾಡಿಕೆ ಮಳೆ ಕೈ ಕೊಟ್ಟರೂ, ಮಾರ್ಚ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಸುರಿದಿದೆ. ವಾಡಿಕೆ 14.2 ಮಿ.ಮೀ. ಮಳೆ ನಿರೀಕ್ಷೆಗೆ ಪ್ರತಿಯಾಗಿ 16.8ರಷ್ಟು ಮಳೆಯಾಗಿದ್ದು, ಶೇ 18ರಷ್ಟು ಅಧಿಕ ಮಳೆಯಾಗಿದೆ. ಇದರಿಂದಾಗಿ, ಕೃಷಿ ಚಟುವಟಿಕೆಗಳು ಬಿರುಸುಗೊಂಡಿದೆ.
‘ಜಿಲ್ಲೆಯಲ್ಲಿ ಮಾಗಡಿ ತಾಲ್ಲೂಕಿನಲ್ಲಷ್ಟೇ ಉತ್ತಮ ಮಳೆಯಾಗಿದೆ. ಉಳಿದಂತೆ ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಮಳೆ ಕೊರತೆ ಎದುರಾಗಿದೆ. ಸಾತನೂರು, ಕೋಡಂಬಳ್ಳಿ ಹೋಬಳಿ ಸೇರಿದಂತೆ ಹಲವೆಡೆ ನಿರೀಕ್ಷಿತ ಮಳೆಯಾಗಿಲ್ಲ. ಜುಲೈ 15ರಿಂದಿಡಿದು ಆಗಸ್ಟ್ 15ರೊಳಗೆ ಸುರಿಯುವ ಮಳೆಯು ಜಿಲ್ಲೆಯ ಕೃಷಿಯ ಸ್ಥಿತಿಗತಿಯನ್ನು ನಿರ್ಧರಿಸಲಿದೆ’ ಎಂದು ರಾಮಕೃಷ್ಣ ಅವರು ಹೇಳಿದರು.
‘ಮಳೆ ಉತ್ತಮವಾಗಿರುವುದರಿಂದ ಜಮೀನು ಹದ ಮಾಡಿ ಬಿತ್ತನೆಗೆ, ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಸರ್ಕಾರ ರಸಗೊಬ್ಬರ ದರವನ್ನು ಕಡಿಮೆ ಮಾಡಿ ಸರಿಯಾದ ಸಮಯಕ್ಕೆ ಪೂರೈಕೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ತೋಕಸಂದ್ರದ ರೈತ ವೆಂಕಟೇಶ್ ಮನವಿ ಮಾಡಿದರು.
15,444 ಟನ್ ಗೊಬ್ಬರ ಪೂರೈಕೆ: ‘ಜಿಲ್ಲೆಯ ಮುಂಗಾರು ಕೃಷಿ ಚಟುವಟಿಕೆಗಳಿಗೆ 27,158 ಟನ್ ರಸಗೊಬ್ಬರಕ್ಕೆ ಬೇಡಿಕೆ ಇದೆ. ಈ ಪೈಕಿ ಡಿಎಪಿ 1,876 ಟನ್, ಕಾಂಪ್ಲೆಕ್ಟ್ 7,659 ಟನ್, ಎಂಒಪಿ 673 ಟನ್, ಯೂರಿಯಾ 16,164 ಹಾಗೂ ಎಸ್‌ಎಸ್‌ಪಿ 786 ಟನ್ ಇದೆ. ಈಗಾಗಲೇ 15,444 ಟನ್ ಪೂರೈಕೆಯಾಗಿದೆ. ಇದುವರೆಗೆ 7,388 ಟನ್ ಗೊಬ್ಬರವನ್ನು ವಿತರಣೆ ಮಾಡಲಾಗಿದೆ. ಸದ್ಯ 8,056 ಟನ್ ಗೊಬ್ಬರ ದಾಸ್ತಾನು ಇದೆ’ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
ಅಂಕಿ ಅಂಶ... ಜಿಲ್ಲೆಯ ಬಿತ್ತನೆ ವಿವರ (ಹೆಕ್ಟೇರ್‌ಗಳಲ್ಲಿ)92,655 ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಗುರಿ1,414 ಮುಂಗಾರು ಪೂರ್ವ ಬಿತ್ತನೆ ಗುರಿ1,063 ಸದ್ಯ ಬಿತ್ತನೆಯಾಗಿರುವುದು92,655ಮುಂಗಾರು ಬಿತ್ತನೆ ಗುರಿ1,084 ಸದ್ಯ ಬಿತ್ತನೆಯಾಗಿರುವುದು2,147ಸದ್ಯ ಆಗಿರುವ ಮುಂಗಾರು ಪೂರ್ವ–ಮುಂಗಾರು ಬಿತ್ತನೆ 277.1 ಮಿ.ಮೀ.ವಾಡಿಕೆ ಮಳೆ (ಜನವರಿಯಿಂದ ಜುಲೈ 14ರವರೆಗೆ)280.9 ಮಿ.ಮೀ.ಸುರಿದ ಮಳೆ ಅಂಕಿಅಂಶ... ಮುಂಗಾರು ಪೂರ್ವ ಬಿತ್ತನೆ (ಹೆಕ್ಟೇರ್‌ಗಳಲ್ಲಿ)ಬೆಳೆ;ಬಿತ್ತನೆಎಳ್ಳು;870ಅಲಸಂದೆ;138ತೊಗರಿ;55 ಮುಂಗಾರು ಬಿತ್ತನೆ (ಹೆಕ್ಟೇರ್‌ಗಳಲ್ಲಿ)ಬೆಳೆ;ಬಿತ್ತನೆರಾಗಿ;600ತೊಗರಿ;179ಹುರಳಿ;10ಅವರೆ;175ಅಲಸಂದೆ;170 ಪಟ್ಟಿ... ತಿಂಗಳವಾರು ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ)ತಿಂಗಳು;ವಾಡಿಕೆ ಮಳೆ;ಸುರಿದ ಮಳೆ;ಶೇಕಡವಾರುಮಾರ್ಚ್;14.2;16.8;ಶೇ 18 ಅಧಿಕಏಪ್ರಿಲ್;47;21;ಶೇ 56 ಕೊರತೆಮೇ;108.9;176.2;ಶೇ 62 ಅಧಿಕಜೂನ್;70;35;ಶೇ 50 ಕೊರತೆಜುಲೈ (14ರವರೆಗೆ);30;32; ಶೇ 8ರಷ್ಟು ಅಧಿಕ
ಕುದೂರು ಭಾಗದಲ್ಲಿ ಮುಂಗಾರು ಮಳೆ ಚನ್ನಾಗಿ ಸುರಿದಿದೆ. ಭೂಮಿಯನ್ನು ಉಳುಮೆ ಮಾಡಿ ರಾಗಿ ಬಿತ್ತನೆಗೆ ಹದ ಮಾಡಲಾಗುತ್ತಿದೆ. ಈ ಸಲ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇನೆ- ಗಂಗರಾಜು ರೈತ ಬೀಚನಹಳ್ಳಿ
ನಮ್ಮ ಭಾಗದಲ್ಲಿ ಮಳೆ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ಸುರಿದಿದೆ. ಕೆಲವೆಡೆ ರೈತರು ಭೂಮಿ ಹಸನು ಮಾಡಿದ್ದಾರೆ. ಉತ್ತಮ ಮಳೆಯಾಗುವ ಕುರಿತು ಅನುಮಾನವಿದೆ. ಬರದ ಆತಂಕವಿದ್ದು ಸರ್ಕಾರ ರೈತರ ನೆರವಿಗೆ ಬರಬೇಕು.–ಎಚ್.ಆರ್. ವಿಜೇಂದ್ರ ರೈತ ಹುಚ್ಚಯ್ಯನದೊಡ್ಡಿ ಚನ್ನಪಟ್ಟಣ ತಾಲ್ಲೂಕು
ಜುಲೈ ತಿಂಗಳಲ್ಲಿ ಮುಂಗಾರು ಪರವಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಾರದಿದ್ದರೆ ರೈತರು ಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರ ತಾಲ್ಲೂಕನ್ನು ಬರಪೀಡಿತ ಎಂದು ಫೋಷಿಸಿ ರೈತರಿಗೆ ಸಹಾಯಹಸ್ತ ಚಾಚಬೇಕು- ಕರಂಕೇಗೌಡ ರೈತ ಅಂಚೀಪುರ ಚನ್ನಪಟ್ಟಣ ತಾಲ್ಲೂಕು
‘ಕಳೆದ ಸಲಕ್ಕಿಂತ ನಿಧಾನ’ ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಬಿತ್ತನೆ ಕಾರ್ಯ ನಿಧಾನವಾಗಿದೆ. ಕಳೆದ ಬಾರಿ ಇಷ್ಟೊತ್ತಿಗಾಗಲೇ 15 ಸಾವಿರ ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿತ್ತು. ಈ ಸಲ ಮುಂಗಾರು ಪೂರ್ವ ಮತ್ತು ಮುಂಗಾರು ಬಿತ್ತನೆಯ 92655 ಹೆಕ್ಟೇರ್ ಗುರಿ ಪೈಕಿ 2147 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಪೂರ್ಣಗೊಂಡಿದೆ. ಮುಂಗಾರು ಮಳೆಯ ನಿರೀಕ್ಷೆ ಇದ್ದ ಜೂನ್ ತಿಂಗಳಲ್ಲಿ 70 ಮಿ.ಮೀ. ವಾಡಿಕೆ ಮಳೆಯನ್ನು ನಿರೀಕ್ಷಿಸಲಾಗಿತ್ತು. ಈ ಪೈಕಿ ಶೇ 35ರಷ್ಟು ಮಾತ್ರ ಬಂದಿದ್ದು ಅರ್ಧದಷ್ಟು ಕೊರತೆಯಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಮಕೃಷ್ಣ ಹೇಳಿದರು. ‘ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳ ಮಳೆ ಅತ್ಯಂತ ಆಶಾದಾಯಕವಾಗಿದೆ. ಈ ತಿಂಗಳ ವಾಡಿಕೆ ಮಳೆ 30 ಮಿ.ಮೀ. ಆಗಿತ್ತು. ಆದರೆ ಹದಿನಾಲ್ಕು ದಿನಗಳಲ್ಲೇ 32ರಷ್ಟು ಮಳೆಯಾಗಿದೆ. ಅಂದರೆ ಶೇ 8ರಷ್ಟು ಅಧಿಕ ಮಳೆ ಸುರಿದಿದೆ. ತಿಂಗಳಾಂತ್ಯಕ್ಕೆ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಳೆ ಬೆನ್ನಲ್ಲೇ ರೈತರು ನೆಲ ಹದಗೊಳಿಸಿ ಮುಂಗಾರು ಬೆಳೆಗಳ ಬಿತ್ತನೆಗೆ ಭೂಮಿ ಉಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಿತ್ತನೆ ಕಾರ್ಯ ಮತ್ತಷ್ಟು ಬಿರುಸುಗೊಳ್ಳುವ ಮುನ್ಸೂಚನೆ ಕಾಣುತ್ತಿದೆ’ ಎಂದು ತಿಳಿಸಿದರು. ‘ಎತ್ತುಗಳಿಗೆ ಬೇಡಿಕೆ’ ‘ಮಳೆ ಬೆನ್ನಲ್ಲೇ ಭೂಮಿ ಉಳುಮೆ ಕೆಲಸಕ್ಕೆ ಎತ್ತುಗಳು ಹಾಗೂ ಟ್ರಾಕ್ಟರ್ ಬಳಸಿದರೂ ಎತ್ತುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲು ಎಕರೆಗೆ ₹2100 ಬಾಡಿಗೆ ಇದೆ. ಅದೇ ಎತ್ತುಗಳಿಂದ ಉಳುಮೆಗೆ ಎಕರೆ ₹1600 ಇದೆ. ಒಂದು ಎಕರೆ ನೆಲವನ್ನು ಉಳುಮೆ ಮಾಡಿ ಬಿತ್ತನೆಗೆ ತಯಾರು ಮಾಡಲು ಏನಿಲ್ಲವೆಂದರೂ ಸುಮಾರು ₹7 ಸಾವಿರ ಬೇಕಾಗುತ್ತದೆ. ಬೆಳೆದ ಬೆಳೆಗೆ ತಕ್ಕ ಬೆಲೆ ಸಿಕ್ಕರೆ ನಾವು ಮಾಡುವ ಖರ್ಚಿಗೂ ಹಾಗೂ ಸುರಿಸುವ ಬೆವರಿಗೆ ಒಂದು ಅರ್ಥ ಇರುತ್ತದೆ’ ಎಂದು ಕುದೂರು ಹೋಬಳಿಯ ಮಂದಾನಿಪಾಳ್ಯದ ರೈತ ಜಯಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.