ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"ಮನೆಮನೆಗೆ ತೆರಳಿ ಗರ್ಭಿಣಿಯರ ತಪಾಸಣೆ"

ಜಿಲ್ಲೆಯ 1544 ಅಂಗನವಾಡಿ ಕಾರ್ಯಕರ್ತೆಯರಿಗೆ 1.4 ಕೋಟಿ ವೆಚ್ಚದಲ್ಲಿ ಮೊಬೈಲ್ ವಿತರಣೆ
Last Updated 21 ಸೆಪ್ಟೆಂಬರ್ 2020, 16:36 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿರುವ ಎಲ್ಲಾ ಮಕ್ಕಳಿಗೂ ಪೌಷ್ಟಿಕ ಆಹಾರ ದೊರೆಯುವ ಮೂಲಕ ಎಲ್ಲರೂ ಪುಷ್ಠಿದಾಯಕ ಮಕ್ಕಳಾಗಿ ಬೆಳೆದು ಸದೃಢ ರಾಷ್ಟ್ರ ನಿರ್ಮಾಣ ಮಾಡುವಂತಾಗಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ವೆಂಕಟಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ ರಥಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಕಾರ್ಯಕ್ರಮಗಳ ಪ್ರತಿಫಲವಾಗಿ ಜಿಲ್ಲೆಯಾದ್ಯಂತ ಅಪೌಷ್ಟಿಕ ಮಕ್ಕಳ ಸಂಖ್ಯೆ 173ಕ್ಕೆ ಇಳಿಕೆಗೊಂಡಿದೆ ಎಂದರು.

ಸ್ಮಾರ್ಟ್ ಫೋನ್ ವಿತರಣೆ: ಜಿಲ್ಲೆಯಲ್ಲಿರುವ ಮಕ್ಕಳ ಬೆಳವಣಿಗೆಯನ್ನು ದಾಖಲಿಸಲು ಅನುವಾಗುವಂತೆ ಜಿಲ್ಲೆಯಾದ್ಯಂತ ಇರುವ 1543 ಅಂಗನವಾಡಿ ಕಾರ್ಯಕರ್ತೆಯರು ಮತ್ತು 51 ಮೇಲ್ವಿಚಾರಕಿಯರು ಸೇರಿದಂತೆ ಒಟ್ಟು 1544 ಮಂದಿಗೆ ₨1.4 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌‌ಫೋನ್‌ ನೀಡಲಾಗುತ್ತಿದೆ. ಇಂದು ಸಾಂಕೇತಿಕವಾಗಿ ಆಯ್ದ 9 ಮಂದಿ ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯಧೀಶರು ಮೊಬೈಲ್ ವಿತರಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುತ್ತಿರುವ ಮೊಬೈಲ್‌ನಿಂದ ಜಿಲ್ಲೆಯಲ್ಲಿರುವ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಹಿತಿಯನ್ನು ದಾಖಲಿಸಲು ಸಹಾಯಕವಾಗುತ್ತದೆ. ಜೊತೆಗೆ ಅವರಿಗೆ ನೀಡಲಾಗುತ್ತಿರುವ ಚುಚ್ಚುಮದ್ದು ಮತ್ತು ಪೌಷ್ಟಿಕ ಆಹಾರದ ವಿವರಗಳನ್ನು ಇದರಲ್ಲಿ ದಾಖಲಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಿ.ವಿ. ರಾಮನ್ ತಿಳಿಸಿದರು.

ಇದೇ ಸ್ಮಾರ್ಟ್ ಫೋನ್‌ನಲ್ಲಿ ಮಾತೃವಂದನಾ ಯೋಜನೆಯ ಮಾಹಿತಿಗಳು, ತಾಯಂದಿರ ಸಭೆ, ಹೆರಿಗೆ ದಿನಾಂಕ, ಮಗುವಿನ ತೂಕ, ಮಗುವಿಗೆ ನೀಡಲಾಗುವ ಚುಚ್ಚುಮದ್ದು, ಅಂಗನವಾಡಿಗೆ ಮಗುವಿನ ದಾಖಲಾತಿ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳನ್ನು ಅಪ್‌ಲೋಡ್ ಮಾಡಿ ಪ್ರತಿ ಮಗು ಹಾಗೂ ತಾಯಂದಿರ ಆರೋಗ್ಯ ಹಾಗೂ ಬೆಳವಣಿಗೆಯನ್ನು ಗಮನಿಸಲಾಗುವುದು ಎಂದು ರಾಮನ್ ತಿಳಿಸಿದರು.

ವಿಶೇಷ ಸಿಬ್ಬಂದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುವ ಸ್ಮಾರ್ಟ್ ಫೋನ್‌ನಲ್ಲಿ ದಾಖಲಿಸುವ ಎಲ್ಲಾ ದತ್ತಾಂಶಗಳನ್ನು ವಿಶೇಷ ವರದಿ ತಯಾರಿಸಲು ಅನುವಾಗುವಂತೆ ಸಾಫ್ಟ್‌ವೇರ್‌ ತಜ್ಞರ ತಂಡವು ಕಾರ್ಯನಿರ್ವಹಿಸಲಿದೆ. ವಿಶೇಷ ತರಬೇತಿ ಪಡೆದುಕೊಂಡಿರುವ ಈ ಸಿಬ್ಬಂದಿ ಜಿಲ್ಲಾ ಸಂಯೋಜಕ ಚೇತನ್ ಮತ್ತು ತಾಲ್ಲೂಕು ಸಂಯೋಜಕ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದೆ.

ಕಾರ್ಯಕರ್ತೆಯರ ಬಲ: ಪ್ರತಿ ಮನೆ ಮನೆಗೂ ತೆರಳಿ ಮನೆಯಲ್ಲಿರುವ ಮಗು, ಗರ್ಭಿಣಿಯರು, ಕಿಶೋರಿ ಮತ್ತು ಬಾಣಂತಿಯರು ಹಾಗೂ ತಾಯಂದಿರ ಮಾಹಿತಿಗಳನ್ನು ಸಂಗ್ರಹಿಸಿ ಅವರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಮತ್ತು ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆಹಾಕುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಪಾತ್ರ ಮಹತ್ವದಾಗಿದೆ. ಜಿಲ್ಲೆಯಲ್ಲಿರುವ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಿದರೆ ಹುಟ್ಟುವ ಮಗು ಪೌಷ್ಠಿಕತೆಯಿಂದ ಹುಟ್ಟುತ್ತದೆ. ಹೀಗಾಗಿ ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸಬೇಕು ಎಂದು ಆರ್.ಸಿ.ಎಚ್ ಅಧಿಕಾರಿ ಡಾ. ಪದ್ಮಾ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ, ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಶಿಶು ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT