ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕಲಾವಿದರಿಗೆ ಬೇಕಿದೆ ಪ್ರೋತ್ಸಾಹ: ಗೌರಮ್ಮ

ಪೌರಾಣಿಕ ನಾಟಕ ಕಲಾವಿದರಿಗೆ ಶಾಂತಲಾ ಟ್ರಸ್ಟ್‌ನಿಂದ ಸನ್ಮಾನ ಸಮಾರಂಭ
Published 18 ಮಾರ್ಚ್ 2024, 6:14 IST
Last Updated 18 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ರಾಮನಗರ: ‘ಪೌರಾಣಿಕ ನಾಟಕಗಳಲ್ಲಿ ಮಹಿಳಾ ಕಲಾವಿದರು ಪುರುಷ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸುತ್ತಾರೆ. ಆದರೆ, ಪುರುಷರಿಗೆ ಸಿಕ್ಕಷ್ಟು ಮಹತ್ವ ಇವರಿಗೆ ಸಿಗುವುದಿಲ್ಲ. ಹಾಗಾಗಿ, ಮಹಿಳಾ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ’ ಎಂದು ತೊಗಲು ಗೊಂಬೆಯಾಟದ ಕಲಾವಿದೆ ಗೌರಮ್ಮ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟೇಬಲ್ ಟ್ರಸ್ಟ್ ಭಾರತ್ ವಿಕಾಸ ಪರಿಷದ್ ಕಣ್ವ ಶಾಖೆಯ ಮಹಿಳಾ ತಂಡದ ಪೌರಾಣಿಕ ನಾಟಕ ಕಲಾವಿದರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಹಿಳೆಯರು ಹಿಂದಿನಿಂದಲೂ ಎಲ್ಲಾ ಬಗೆಯ ನಾಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ನಟಿಸಿ ಹೆಸರು ಮಾಡಿರುವ ಮಹಿಳೆಯರು, ರಂಗಭೂಮಿಯಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆಯರು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಸಾಧ್ಯ’ ಎಂದರು.

ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ, ‘ನಮ್ಮ ಹಿರಿಯರು ಪೌರಾಣಿಕ ನಾಟಕಗಳ ಮೂಲಕ ಜೀವನದ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ತಿಳಿಸಿ ಕೊಡುವ ಕೆಲಸ ಮಾಡುತ್ತಿದ್ದರು. ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು. ನಮ್ಮ ನಾಡಿನ ಚಾರಿತ್ರಿಕ ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ಪೌರಾಣಿಕ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಹೇಳಿದರು.

‘ಎಲ್ಲಾ ಪೌರಾಣಿಕ ನಾಟಕಗಳಲ್ಲಿಯೂ ಒಂದೊಂದು ರೀತಿಯ ಮೌಲ್ಯಗಳು ಅಡಕವಾಗಿರುತ್ತವೆ. ಪಾತ್ರಗಳಿಗೆ ಜೀವ ತುಂಬುವ ಕಲೆಗಾರಿಕೆಗಾಗಿ ಐದಾರು ತಿಂಗಳುಗಳ ಕಾಲ ಅಭ್ಯಾಸ ಮಾಡಲಾಗಿರುತ್ತದೆ. ಪೌರಾಣಿಕ ನಾಟಕಗಳಲ್ಲಿ ಬರುವ ಒಂದೊಂದು ಪಾತ್ರಗಳು ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ. ಮಹಿಳೆಯರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಕಲ್ಪನಾ ಶಿವಣ್ಣ, ರಂಗ ನಿರ್ದೇಶಕ ಚಿರಂಜೀವಿ ಆರ್. ಲೋಕೇಶ್ವರ್, ಭಾರತ ವಿಕಾಸ ಪರಿಷದ್ ದಕ್ಷಿಣ ಪ್ರಾಂತದ ಉಪಾಧ್ಯಕ್ಷ ವಸಂತ್ ಕುಮಾರ್, ತಾಲ್ಲೂಕು ಅಧ್ಯಕ್ಷ ಪಿ. ಗುರುಮಾದಪ್ಪ ಹಾಗೂ ಇತರರು ಇದ್ದರು.

ಮಹಿಳೆಯರೇ ಅಭಿನಯಿಸಿರುವ ಪೌರಾಣಿಕ ನಾಟಕ ರಾಜ್ಯದಾದ್ಯಂತ ಪ್ರದರ್ಶನ ಕಾಣಬೇಕು. ಇದರಿಂದ ಹೆಣ್ಣು ಮಕ್ಕಳಿಗೆ ಪ್ರೇರಣೆ ಸಿಗುತ್ತದೆ. ಅವರು ಸಹ ತಮ್ಮಲ್ಲಿರುವ ಕೀಳರಿಮೆ ತೊರೆದು ಮುಂದೆ ಬರಲಿದ್ದಾರೆ
– ಅನಸೂಯಮ್ಮ ರೈತಪರ ಹೋರಾಟಗಾರ್ತಿ

‘ಮಹಿಳೆಯರ ಕೊಡುಗೆ ಅನನ್ಯ’

‘ಮಹಿಳೆಯರು ನಾಟಕಗಳಲ್ಲಿ ಅಭಿನಯಿಸುವುದಷ್ಟೇ ಅಲ್ಲದೆ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಮಹಿಳೆಯರು ರಚಿಸಿರುವ ಸಾಮಾಜಿಕ ನಾಟಕಗಳ ಸಂಖ್ಯೆ ದೊಡ್ಡದಿದೆ. ಸ್ತ್ರೀ ಶೋಷಣೆ ಸಾಮಾಜಿಕ ಅಸಮಾನತೆ ವರದಕ್ಷಿಣೆ ಪಿಡುಗು ಹೆಣ್ಣು ಭ್ರೂಣಹತ್ಯೆ ಪಾತಿವ್ರತದ ಸಮಸ್ಯೆ ಅವಲಂಬಿತ ಜೀವನ ನಿರುದ್ಯೋಗ ಸಮಸ್ಯೆ ಸೇರಿದಂತೆ ಹೆಣ್ಣಿನ ಸುತ್ತಲಿನ ಸಮಸ್ಯೆಗಳನ್ನು ಕೇಂದ್ರೀಕರಿಸಿ ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ. ಇದೀಗ ಸಾಮಾಜಿಕೇತರ ನಾಟಕಗಳ ರಚನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ನಾಟಕ ರಚನೆ ಮತ್ತು ಅಭಿನಯ ಎರಡಕ್ಕೂ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಸ್. ಸುಮಂಗಲ ಸಿದ್ದರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT