ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗರ ಕುಟುಂಬಕ್ಕೆ ಭರಪೂರ ನೆರವು

Last Updated 17 ಜೂನ್ 2021, 4:57 IST
ಅಕ್ಷರ ಗಾತ್ರ

ಮಾಗಡಿ: ಯಶವಂತಪುರ ಗ್ರಾಮಾಂತರ ಬಿಜೆಪಿ ಮಂಡಲದ ವತಿಯಿಂದ ತಿರುಮಲೆ ಕೊಳಚೆ ನಿರ್ಮೂಲನಾ ಮಂಡಳಿ ವಸತಿ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ನಿರ್ಗತಿಕ ಸೋಲಿಗ ಮಂಜುನಾಥ್ ಅಲಿಯಾಸ್ ಭೀಮ ಕುಟುಂಬಕ್ಕೆ ಮೂರು ತಿಂಗಳಿಗೆ ಸಾಕಾಗುವಷ್ಟು ದಿನಸಿ, ಹೊದಿಕೆ, ನೂತನ ಬಟ್ಟೆ, ಸೀರೆ ಮತ್ತು ₹15 ಸಾವಿರ ನಗದು ವಿತರಿಸಲಾಯಿತು.

‘ಪ್ರಚಾರಕ್ಕಾಗಿ ನೆರವು ನೀಡುತ್ತಿಲ್ಲ. ಕೊರೊನಾ ಸೋಂಕಿನಿಂದ ಸಂಕಟಕ್ಕೆ ಸಿಲುಕಿರುವ ಬಡವರಿಗೆ ಮೊದಲಿನಿಂದಲೂ ಬಿಜೆಪಿ ಮಂಡಲದ ವತಿಯಿಂದ ಸಹಾಯ ಮಾಡುತ್ತಿದ್ದೇವೆ. ಶ್ರಮಪಟ್ಟು ಗಳಿಸಿದ್ದರಲ್ಲಿ ಅಲ್ಪಸಹಾಯವನ್ನು ದೀನರ ಸೇವೆಗೆ ನೀಡುವುದು ನಮ್ಮ ಜೀವನದ ಪರಮ ಉದ್ದೇಶವಾಗಿದೆ’ ಎಂದು ಯಶವಂತಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಂಗರಾಜು ತಿಳಿಸಿದರು.

‘ಪ್ರಜಾವಾಣಿ’ ಪತ್ರಿಕೆಯ ನಿಜವಾದ ಮಾನವೀಯ ವರದಿಗಳು ನಮಗೆ ಸ್ಫೂರ್ತಿಯಾಗಿವೆ ಎಂದರು.

ಯಶವಂತಪುರ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆ.ಎಸ್., ಶಕ್ತಿಕೇಂದ್ರದ ಅಧ್ಯಕ್ಷ ನಂದಕುಮಾರ್, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಮಂಜುನಾಥ.ಆರ್, ಮಂಡಲದ ಉಪಾಧ್ಯಕ್ಷ ಎ.ರಾಮಕೃಷ್ಣ, ಕಾರ್ಯದರ್ಶಿ ಶ್ರೀನಿವಾಸ್, ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪುಟ್ಟರುದ್ರಾರಾಧ್ಯ, ಬಿಜೆಪಿ ಯುವಘಟಕದ ಮುಖಂಡರಾದ ಪುನೀತ್, ರವಿ, ನಂದ, ಗಿರೀಶ್ ಇದ್ದರು.

50 ಕೆ.ಜಿ.ಅಕ್ಕಿ, 5 ಕೆ.ಜಿ.ಬೇಳೆ, 5 ಕೆ.ಜಿ.ಸಕ್ಕರೆ, ಟೀ.ಪೌಡರ್, ಉಪ್ಪು, ಬೆಲ್ಲ, ಸಾಂಬಾರು ಪೌಡರ್, 5 ಜೊತೆ ಸೀರೆ, ನಾಲ್ವರು ಮಕ್ಕಳಿಗೆ 6 ಜೊತೆ ಬಟ್ಟೆ, 6 ಜೊತೆ ಚಪ್ಪಲಿ, ಚಾಪೆ, 5 ಕೆ.ಜಿ.ಈರುಳ್ಳಿ, ಬೆಳ್ಳುಳ್ಳಿ, ಇತರೆ ನಿತ್ಯ ಬಳಕೆಯ ದಿನಸಿ ವಸ್ತುಗಳ ಜೊತೆಗೆ 3 ಟಾರ್ಪಾಲ್, 3 ಪ್ಲಾಸ್ಟಿಕ್ ಬಕೆಟ್‌ಗಳು, 2 ಸ್ಟೀಲ್‌ ಬಕೆಟ್, ಅಡುಗೆಗೆ ಬೇಕಾದ ಸ್ಟೀಲ್ ಮತ್ತು ಅಲ್ಯುಮಿನಿಯಂ ಪಾತ್ರೆಗಳನ್ನು ವಿತರಿಸಿದರು.

ಆರೋಗ್ಯ ತಪಾಸಣೆ: ಪಟ್ಟಣದ ತಿರುಮಲೆ ಕೊಳಚೆ ನಿರ್ಮೂಲನಾ ಮಂಡಳ ವಸತಿಯಲ್ಲಿರುವ ಸೋಲಿಗ ಮಂಜುನಾಥ್‌ ಪತ್ನಿ ಗೌರಿ 8 ತಿಂಗಳ ಗರ್ಭಿಣಿಯಾಗಿದ್ದು, ಬುಧವಾರ ಆರೊಗ್ಯ ಇಲಾಖೆಯ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ಸ್ತ್ರೀರೋಗ ತಜ್ಞ ಡಾ.ಅಭಿಜಿತ್‌ ಅವರಿಂದ ಪರೀಕ್ಷೆ ಮಾಡಿಸಲಾಯಿತು.

ರಕ್ತಪರೀಕ್ಷೆ ಮತ್ತು ಇತರೆ ಪರೀಕ್ಷೆಗಳನ್ನು ಮಾಡಿಸಿ ಚಿಕಿತ್ಸೆ ನೀಡಿದರು. ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶಿವಸ್ವಾಮಿ, ಪುರುಷ ಆರೋಗ್ಯ ಸಹಾಯಕರಾದ ತುಳಸಿರಾಮ್‌, ರಾಜು, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ರಂಗನಾಥ್‌, ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್‌ ಇದ್ದರು.

ಡಾ.ಅಭಿಜಿತ್‌ ಮಾತನಾಡಿ, ‘ಗರ್ಭಿಣಿ ಗೌರಿ ಇಲ್ಲಿಯವರೆಗೆ ಆರೋಗ್ಯ ತಪಾಸಣೆ ಮಾಡಿಸಿಲ್ಲ. ಆಕೆಯನ್ನು ಗಮನಿಸಿದಾಗ 8 ತಿಂಗಳು ತುಂಬಿರಬಹುದು. ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಿಸಿ, ಚಿಕಿತ್ಸೆ ನೀಡಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT