ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೇಸು ಪ್ರತಿಮೆ ವಿವಾದ: ಸ್ಥಳಕ್ಕೆ ಎ.ಸಿ. ಭೇಟಿ

Last Updated 28 ಡಿಸೆಂಬರ್ 2019, 18:43 IST
ಅಕ್ಷರ ಗಾತ್ರ

ರಾಮನಗರ: ಕಪಾಲಿ ಬೆಟ್ಟದಲ್ಲಿ‌ ಯೇಸು ಪ್ರತಿಮೆ ಸ್ಥಾಪನೆ ವಿವಾದದ ಬೆನ್ನಲ್ಲೇ, ಉಪ ವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ಬೆಟ್ಟಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿತು.

ಬೆಟ್ಟದಲ್ಲಿನ ಚಟುವಟಿಕೆಗಳ ವರದಿ ನೀಡುವಂತೆ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಹಾಗೂ ಕನಕಪುರ ತಹಶೀಲ್ದಾರ್ ಆನಂದಯ್ಯ ಸ್ಥಳ ಪರಿಶೀಲಿಸಿ, ಕ್ರೈಸ್ತರಿಂದ ಮಾಹಿತಿ ಪಡೆದರು.

'ಬೆಟ್ಟದ ಸುತ್ತ 235 ಎಕರೆ ಗೋಮಾಳವಿದೆ. ಇದರಲ್ಲಿ 80 ಎಕರೆಯಷ್ಟು ಜಮೀನನ್ನು ರೈತರು ಹಾಗೂ ಕಪಾಲಿ ಬೆಟ್ಟ ಅಭಿವೃದ್ದಿ ಟ್ರಸ್ಟ್‌ಗೆ ಸರ್ಕಾರ ಹಂಚಿಕೆ ಮಾಡಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಟ್ರಸ್ಟ್‌ಗೆ 10 ಎಕರೆ ಜಾಗ ನೀಡಲಾಗಿದೆ. ಸದ್ಯ‌ ಪ್ರತಿಮೆಯ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ನಡೆದಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ಆನಂದಯ್ಯ ತಿಳಿಸಿದರು.

ಪ್ರತಿಮೆ ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದೆ.‌ ಜಿಲ್ಲಾ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಯಿಸಲಾಗಿದೆ. ಅಧಿಕಾರಿಗಳು ನಿಯಮ ಮೀರಿ ಈ ಸವಲತ್ತು ಕಲ್ಪಿಸಿದ್ದಾರೆ ಎಂಬ ಆಕ್ಷೇಪ ಕೇಳಿಸಿದೆ.

ಸಚಿವರೇ ವೀಕ್ಷಿಸಲಿ: 'ರಾಜ್ಯದ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವಾಗ ಮಾಡಿರುವ ಪ್ರತಿಜ್ಞೆಯನ್ನು ಮನನ ಮಾಡಿಕೊಳ್ಳಲಿ. ಆರ್. ಅಶೋಕ, ಅನಂತಕುಮಾರ್ ಹೆಗಡೆ ಸೇರಿದಂತೆ ಯಾರು ಬೇಕಾದರೂ ಸ್ಥಳ ಪರಿಶೀಲಿಸಸಲಿ' ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.

ಕನಕಪುರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, 'ಸಿ.ಟಿ. ರವಿ, ಅಶೋಕ್, ಈಶ್ವರಪ್ಪ ಅವರಿಗೆ ಒತ್ತಡ ಇದೆ. ಮಂತ್ರಿಯಾದವರು ರಾಜ್ಯದ ಹಿತ ಬಯಸಬೇಕು' ಎಂದರು.

‘ಬೆಟ್ಟಕ್ಕೆ 1600ನೇ ಇಸವಿಯಿಂದ ಒಂದು ಇತಿಹಾಸ ಇದೆ. ಶಿಲೆ, ಪ್ರತಿಮೆ, ಪೂಜೆ ಎಲ್ಲವನ್ನೂ ಜನ ಅಲ್ಲಿ ಮಾಡಿಕೊಂಡು ಬರುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಇದು ಗೊತ್ತಿದೆಯೋ ಏನೋ ಗೊತ್ತಿಲ್ಲ. ನಾನೇನು ಹೊಸತಾಗಿ ಮಾಡಲು ಆಗುವುದಿಲ್ಲ. ಯಾವ ಧರ್ಮ, ದೇವರು ಆರಾಧನೆ ಮಾಡಬೇಕು ಎನ್ನುವುದು ಅವರವರ ವೈಯಕ್ತಿಕ ವಿಚಾರ' ಎಂದರು.

ರಾಜಕೀಯಕ್ಕಾಗಿ ವಿವಾದ: ಕನಕಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ರವಿ 'ಪ್ರತಿಮೆ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಜಿಲ್ಲೆಯ ಪ್ರತಿಯೊಂದು ಯೋಜನೆಗೂ ಅಡ್ಡಗಾಲು ಹಾಕುತ್ತಿದೆ' ಎಂದು ದೂರಿದರು.

‘ಎಲ್ಲರೂ ವೋಟ್ ಬ್ಯಾಂಕ್ ರಾಜಕಾರಣ ಮಾಡುವವರೇ. ಆದರೆ ಬಹುಸಂಖ್ಯಾತರ ವಿರುದ್ಧವಾದ ತೀರ್ಮಾನ ಕೈಗೊಂಡರೆ ಯಾರಿಗೂ ಒಳ್ಳೆಯದಾಗದು’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಪತ್ರಕರ್ತರಿಗೆ ತಿಳಿಸಿದರು.

***

ಬಿಜೆಪಿ ಸರ್ಕಾರ ಜಮೀನು ವಾಪಸ್ ಪಡೆಯುವ ಬಗ್ಗೆ ನಾನೇನು ಹೇಳಲಾರೆ. ಸಚಿವರಿಗೆ ಒತ್ತಡ ಇರಬಹುದು

-ಡಿ.ಕೆ. ಶಿವಕುಮಾರ್,ಶಾಸಕ

ಸರ್ಕಾರದ ಸೂಚನೆಯಂತೆ ಕಪಾಲಿ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿನ ಜನರಿಂದ ಮಾಹಿತಿ ಪಡೆದಿದ್ದೇವೆ. ವಸ್ತು ಸ್ಥಿತಿ ಬಗ್ಗೆ ಶೀಘ್ರ ವರದಿ ಸಲ್ಲಿಸುತ್ತೇವೆ

-ದಾಕ್ಷಾಯಿಣಿ,ಉಪ ವಿಭಾಗಾಧಿಕಾರಿ, ರಾಮನಗರ

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಯೇಸು ಪ್ರತಿಮೆ ನಿರ್ಮಾಣ ಒಳ್ಳೆಯದು. ಬಿಜೆಪಿಯವರಿಗೆ ತಾಕತ್ತಿದ್ದರೆ ರಾಮದೇವರ ಬೆಟ್ಟದಲ್ಲಿ ರಾಮನ ಪ್ರತಿಮೆ ನಿರ್ಮಿಸಲಿ. ನಾನೇ ಜಾಗ ಕೊಡಿಸುತ್ತೇನೆ

-ಡಿ.ಕೆ. ಸುರೇಶ್,ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT