ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿ ಕೀಳರಿಮೆ ಬಿಡಬೇಕು’

ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆ, ಕಾಲೇಜು ವಾರ್ಷಿಕೋತ್ಸವ
Last Updated 10 ಫೆಬ್ರುವರಿ 2020, 14:43 IST
ಅಕ್ಷರ ಗಾತ್ರ

ರಾಮನಗರ: ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆಯನ್ನು ಮೊದಲು ಬಿಡಬೇಕು. ಆಗ ಮಾತ್ರ ನಿರ್ದಿಷ್ಟ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಸಾಹಿತಿ ಡಾ.ಎಂ. ಬೈರೇಗೌಡ ಹೇಳಿದರು.

ಇಲ್ಲಿನ ಲಕ್ಷ್ಮೀಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2019-20ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆ, ಕಾಲೇಜು ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನಲ್ಲಿ ಪ್ರಬದ್ಧತೆ ಬೆಳೆಸುತ್ತವೆ. ವಿದ್ಯಾರ್ಥಿಗಳು ಕೇವಲ ಅಂಕಗಳ ಮಾಯ ಜಿಂಕೆಯ ಹಿಂದೆ ಬೀಳದೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

‘ಇಂದು ಉನ್ನತ ಸ್ಥಾನ ಪಡೆದ ಬಹುತೇಕರು ಗ್ರಾಮೀಣ ಭಾಗದಿಂದ ಬಂದವರೇ ಆಗಿದ್ದಾರೆ. ನಾವು ಗ್ರಾಮೀಣ ಭಾಗದವರು ನಮಗೆ ಇಂಗ್ಲಿಷ್‌ ಭಾಷೆ ಬರುವುದಿಲ್ಲ ಎಂಬ ಕೀಳರಿಮೆಯನ್ನು ವಿದ್ಯಾರ್ಥಿಗಳು ಮೊದಲು ಬಿಡಬೇಕು. ಓದಿನ ಜತೆಗೆ ನಾಯಕತ್ವ ಗುಣವನ್ನು ಬೆಳಸಿಕೊಳ್ಳಬೇಕು’ ಎಂದು ತಿಳಿಸಿದರು.

‘ನಮ್ಮ ಸುತ್ತಲಿನ ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ವಿರೋಧಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಉತ್ತಮವಾದ ಕೃತಿಗಳನ್ನು ಓದುವುದರಿಂದ ನಮ್ಮ ಜ್ಞಾನಕೋಶ ಬೆಳೆದು ನಮ್ಮಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ’ ಎಂದರು.

ಭೂಸ್ವಾಧೀನಾಧಿಕಾರಿ ಚಂದ್ರಯ್ಯ ಮಾತನಾಡಿ, ಸತತ ಪ್ರಯತ್ನಗಳು ಸಾಧನೆಯನ್ನು ಸಾಕಾರಗೊಳಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಓದು ಮುಗಿಯಿತು ಎಂದು ವಿಶ್ರಮಿಸದೆ ನಿರಂತರವಾದ ಅಭ್ಯಾಸ ಇಟ್ಟುಕೊಂಡರೆ ಎಂತಹ ಕನಸುಗಳೂ ನನಸಾಗುತ್ತವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗ್ರಾಮದ ಹಿರಿಯ ಮುಖಂಡರಾದ ಲಿಂಗೇಗೌಡ, ಶಿವಾನಂದಯ್ಯ, ದೊಡ್ಡಮುನಿಯಪ್ಪ, ಶಿವಾನಂದಪ್ಪ, ಕಾಲೇಜಿನ ಪ್ರಾಚಾರ್ಯ ಜಿ. ದಯಾನಂದ, ಉಪನ್ಯಾಸಕರಾದ ಹನುಮಂತರಾಯ, ಅನ್ಸರ್ ಉಲ್ ಹಕ್, ಡಾ. ಎಚ್.ಸಿ. ನವೀನ್ ಕುಮಾರ್ ಹಳೆಮನೆ, ತುಳಸಿರಾಮ ಶೆಟ್ಟಿ, ಕವಿತಾ, ಡಾ. ಶಾರದಾ ಬಡಿಗೇರ, ಶಿಲ್ಪ, ವಿಜಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT