ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನ ಶಾಲಾ ವಿದ್ಯಾರ್ಥಿಗೆ ಪ್ರಶಸ್ತಿ; ಆಧುನಿಕ ದನದ ಕೊಟ್ಟಿಗೆ ಪ್ರಾಜೆಕ್ಟ್‌

Last Updated 21 ಸೆಪ್ಟೆಂಬರ್ 2021, 5:05 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಕಾಡಂಚಿನ ಗ್ರಾಮವಾದಮರಳವಾಡಿ ಹೋಬಳಿಯ ಕಲ್ಲನಕುಪ್ಪೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದೇವೇಗೌಡಅಭಿವೃದ್ಧಿಪಡಿಸಿರುವ ‘ಆಧುನಿಕ ದನದ ಕೊಟ್ಟಿಗೆ’ ಪ್ರಾಜೆಕ್ಟ್‌ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಬರುವ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್‌ ಇನೋವೇಟಿವ್‌ ಫೌಂಡೇಶನ್‌ ನೀಡುವ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಆನ್‌ಲೈನ್‌ನಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಸ್ತುತ ಎಕ್ಸ್‌ ಮುನಿಷಿಪಲ್‌ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ದೇವೇಗೌಡ, ಹೈನುಗಾರಿಕೆ ರೈತರಿಗೆ ಉಪಯುಕ್ತವಾಗುವಂತಹ ಆಧುನಿಕ ದನದ ಕೊಟ್ಟಿಗೆಯ ಮಾದರಿ ಸಿದ್ಧಪಡಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗ್ರಾಮೀಣ ರೈತರು ಕಾಡುಪ್ರಾಣಿಗಳಿಂದ ಎದುರಿಸುತ್ತಿದ್ದ ಸಮಸ್ಯೆ, ಬೆಂಕಿ ಅವಘಡ, ರಾಸುಗಳ ಕಳ್ಳತನ, ಹವಾಮಾನ ವೈಪರೀತ್ಯ ಮೊದಲಾದ ತೊಂದರೆಗಳಿಂದ ಹಸುಗಳನ್ನು ರಕ್ಷಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದರು. ಕಡಿಮೆ ವೆಚ್ಚದಲ್ಲಿ ರೈತಸ್ನೇಹಿಯಾದ ದನದ ಕೊಟ್ಟಿಗೆ ನಿರ್ಮಾಣ ಮಾಡಬಹುದು ಎಂಬುದನ್ನು ಪ್ರಾಜೆಕ್ಟ್‌ ಮೂಲಕ ತೋರಿಸಿದ್ದಾರೆ.

ಪ್ರತಿ ವರ್ಷ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಆವಿಷ್ಕಾರ ಮೇಳ ನಡೆಯುತ್ತದೆ. 2019-20ನೇ ಸಾಲಿನಲ್ಲಿ ದೇವೇಗೌಡ ತಾನು ಮಂಡಿಸಿರುವ ಆಧುನಿಕ ದನದ ಕೊಟ್ಟಿಗೆಯನ್ನು ಜಿಲ್ಲಾ ಮಟ್ಟಕ್ಕೆ ಕಳಿಸಿಕೊಟ್ಟಿದ್ದ. ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು.

ಸುಮಾರು 550 ಪ್ರಾಜೆಕ್ಟ್‌ಗಳಲ್ಲಿ ಈ ವಿದ್ಯಾರ್ಥಿ ರೂಪಿಸಿದ್ದ ಪ್ರಾಜೆಕ್ಟ್‌ ಕೂಡ ಸೇರಿತ್ತು. ಕೋವಿಡ್‌ ಕಾರಣದಿಂದ ರಾಷ್ಟ್ರಮಟ್ಟದ ಭೌತಿಕ ಸ್ಪರ್ಧೆಯನ್ನು ಮುಂದೂಡಲಾಗಿತ್ತು. ಆ ನಂತರದಲ್ಲಿ ಆನ್‌ಲೈನ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ದೇಶದಲ್ಲಿ ವಿವಿಧ ವಿದ್ಯಾರ್ಥಿಗಳು ಮಂಡಿಸಿದ 60 ಪ್ರಾಜೆಕ್ಟ್‌ಗಳು ಆಯ್ಕೆಯಾಗಿದ್ದು, ಕರ್ನಾಟಕಕ್ಕೆ 5 ಸ್ಥಾನ ಲಭಿಸಿವೆ.

ಶಾಲೆಯ ವಿಜ್ಞಾನ ಶಿಕ್ಷಕ ಶಿವಶಂಕರಾಚಾರಿ ಕೆ. ಅವರ ಮಾರ್ಗದರ್ಶನದಲ್ಲಿ ದೇವೇಗೌಡ ಪಶು ಆಸ್ಪತ್ರೆ, ಗ್ರಾಮ ಪಂಚಾಯಿತಿ ಹಾಗೂ ಹೈನುಗಾರಿಕೆ ರೈತರನ್ನು ಸಂಪರ್ಕಿಸಿ ದನದ ಕೊಟ್ಟಿಗೆಯಲ್ಲಿ ಎದುರಾಗಬಹುದಾದ ಎಲ್ಲಾ ಸಮಸ್ಯೆ ಬಗ್ಗೆ ದೀರ್ಘವಾಗಿ ಅಧ್ಯಯನ ನಡೆಸಿದ್ದ.

ವಿದ್ಯಾರ್ಥಿಯ ಸಾಧನೆಯನ್ನು ಶಿಕ್ಷಣ ಸಚಿವ ನಾಗೇಶ್‌ ಅವರು ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ.

‘ಗಡಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ರಾಷ್ಟ್ರಮಟ್ಟದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿ ರಾಷ್ಟ್ರಪ್ರಶಸ್ತಿ ಗಳಿಸಿರುವುದು ಹೆಮ್ಮೆ ತಂದಿದೆ. ಸರ್ಕಾರಿ ಶಾಲೆಯ ಮಕ್ಕಳು ಪ್ರತಿಭಾವಂತರು. ಯಾರಿಗೂ ಕಡಿಮೆ ಇಲ್ಲವೆಂಬುದನ್ನು ರುಜುವಾತು ಮಾಡಿದ್ದಾನೆ. ಶಿಕ್ಷಣ ಇಲಾಖೆಯ ಪರವಾಗಿ ಆತನನ್ನು ಅಭಿನಂದಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT