ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತ ಪದ್ಧತಿ ನಿರ್ಮೂಲನೆ ಎಲ್ಲರ ಜವಾಬ್ದಾರಿ: ಅಧಿಕಾರಿ ರೇವಣಪ್ಪ

‘ಉದಯೋನ್ಮುಖ’ ಜೀತ ವಿಮುಕ್ತ ಕಾರ್ಮಿಕರ ಸಂಘ ಉದ್ಘಾಟನೆ
Last Updated 16 ಡಿಸೆಂಬರ್ 2019, 12:41 IST
ಅಕ್ಷರ ಗಾತ್ರ

ರಾಮನಗರ: ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ರೇವಣಪ್ಪ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 'ಉದಯೋನ್ಮುಖ’ ಜೀತ ವಿಮುಕ್ತ ಕಾರ್ಮಿಕರ ಸಂಘವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಜೀತ ಪದ್ಧತಿಯನ್ನು ಹೋಗಲಾಡಿಸುವುದು ಒಂದು ಇಲಾಖೆಯ ಕೆಲಸವಲ್ಲ, ಎಲ್ಲಾ ಇಲಾಖೆಗಳ ಸಹಕಾರದಿಂದ ಈ ಕಾರ್ಯ ಸಾಧ್ಯ. ಜನರಲ್ಲಿ ಇಚ್ಛಾಶಕ್ತಿ ಇದ್ದರೆ ಈ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಆಗ ಮಾತ್ರ ಇದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ನಿಷ್ಕಾಳಜಿತನ ವಹಿಸಬಾರದು. ಸರ್ಕಾರ ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಹೇಳುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಹಾಕಾಳನಪ್ಪ ಮಾತನಾಡಿ ಜೀತ ಪದ್ಧತಿಯಲ್ಲೂ ಬಾಲ ಕಾರ್ಮಿಕ ಪದ್ಧತಿ ಜಾರಿಯಲ್ಲಿ ಇದ್ದುದ್ದರಿಂದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕಿದೆ. ಆಗ ಮಾತ್ರ ಸಾಮಾಜಿಕ ವ್ಯವಸ್ಥೆಯಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಮಿಕಾಧಿಕಾರಿ ಶೇಖರ್ ಗಡಾದ್ ಮಾತನಾಡಿ, ಸರ್ಕಾರದ ವಿವಿಧ ಕಾರ್ಯಕ್ರಮಗಳಿಂದ ಜೀತ ಪದ್ಧತಿ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸರ್ಕಾರವು ಅಸಂಘಟಿತ ಕಾರ್ಮಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಜನರು ಇದನ್ನು ಉಪಯೋಗಪಡಿಸಿಕೊಳ್ಳಬೇಕು. ಜೀತ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯು ದಿನದ 24 ಗಂಟೆಯೂ ಶ್ರಮಿಸಲಿದೆ ಎಂದು ತಿಳಿಸಿದರು.

ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ (ಐಜೆಎಂ) ಪ್ರಾದೇಶಿಕ ನಿರ್ದೇಶಕ ಅಶೋಕ್ ಮಾತನಾಡಿ ಜೀತ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮತ್ತು ಜೀತ ಮುಕ್ತ ಕಾರ್ಮಿಕರು ಸರ್ಕಾರದಿಂದ ತಮ್ಮ ಪುನರ್ವಸತಿ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ಸಹಾಯ ಮಾಡಲು, ಈ ಸಂಘವು ಜೀತ ಮುಕ್ತರನ್ನು ಸಬಲಪಡಿಸುವ ವೇದಿಕೆಯಾಗಲಿದೆ. ಸಂಘದ ಸದಸ್ಯರು ಸ್ಥಳೀಯ ಸರ್ಕಾರದೊಂದಿಗೆ ಕೆಲಸ ಮಾಡುತ್ತಾರೆ ಮತ್ತು ರಕ್ಷಿಸಲ್ಪಟ್ಟ ಜೀತ ಕಾರ್ಮಿಕರು ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತಾರೆ ಎಂದರು.

ಆರ್‌ಬಿಎಲ್ಎ ಅಧ್ಯಕ್ಷೆ ಪಾಪಮ್ಮ ಮಾತನಾಡಿ ‘ಜೀತ ಎನ್ನುವುದು ಕ್ರೂರ ಪದ್ಧತಿಯಾಗಿದೆ. ಇದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಶ್ರಮಿಸುತ್ತೇನೆ. ಎಲ್ಲರ ಸಹಕಾರ, ಮಾರ್ಗದರ್ಶನವನ್ನು ಪಡೆದು ಜೀತ ಪದ್ಧತಿಯಲ್ಲಿ ಸಿಲುಕಿಕೊಂಡವರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತೇನೆ’ ಎಂದು ತಿಳಿಸಿದರು.

10 ಜಿಲ್ಲೆಗಳಿಂದ 80 ಮಂದಿ ಜೀತ ವಿಮುಕ್ತ ಕಾರ್ಮಿಕರು ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಉಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾರತಿ, ಐಜೆಎಂ ನ ಇಂದ್ರಜಿತ್ ಪವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT