ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ ಬಣಗುಡುತ್ತಿರುವ ದೇವೇಗೌಡ ಬ್ಯಾರೇಜ್

18 ಅಡಿ ಎತ್ತರದ ಬ್ಯಾರೇಜ್ * 0.18 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ
ಎಚ್.ಎಂ.ರಮೇಶ್
Published 28 ಏಪ್ರಿಲ್ 2024, 4:45 IST
Last Updated 28 ಏಪ್ರಿಲ್ 2024, 4:45 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಇಗ್ಗಲೂರು ಬಳಿ ಎಚ್.ಡಿ.ದೇವೇಗೌಡ ಬ್ಯಾರೇಜ್‌ನಲ್ಲಿ ನೀರು ಖಾಲಿಯಾಗುವ ಹಂತ ತಲುಪಿದ್ದು ಈಗ ನೀರಿಲ್ಲದೆ ಬಣಗುಡುತ್ತಿದೆ.

18 ಅಡಿ ಎತ್ತರದ ಬ್ಯಾರೇಜ್ 0.18 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ, ಈಗ ಕೇವಲ 5.4 ಅಡಿ ನೀರು ಮಾತ್ರ ಸಂಗ್ರಹ ಇದೆ. 10 ಅಡಿ ನೀರಿಗಿಂತ ಕಡಿಮೆ ಸಂಗ್ರಹ ಇದ್ದರೆ ಆ ನೀರು ಕಾಲುವೆಗಳಿಗೆ ಹರಿಸಲು ಸಾಧ್ಯವಾಗುವುದಿಲ್ಲ. ಅದನ್ನು ಡೆತ್ ಸ್ಟೋರೇಜ್ ನೀರು ಎಂದು ಪರಿಗಣಿಸಲಾಗುತ್ತದೆ. ಆದರೆ, ಈಗ ನೀರಿನ ಮಟ್ಟ ಡೆತ್ ಸ್ಟೋರೇಜ್ ಗಿಂತಲೂ ಕೆಳಕ್ಕೆ ಮುಟ್ಟಿದೆ.

ಇಗ್ಗಲೂರಿನಲ್ಲಿ 1996ರಲ್ಲಿ ಶಿಂಷಾ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಇದು ಎಚ್.ಡಿ.ದೇವೇಗೌಡ ಅವರು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿರ್ಮಾಣವಾಗಿತ್ತು. ಸ್ವತಃ ದೇವೇಗೌಡರೇ ಈ ಜಲಾಶಯದ ನಿರ್ಮಾಣದಲ್ಲಿ ಮುತುವರ್ಜಿ ವಹಿಸಿದ್ದರು. ನಂತರ ಅದನ್ನು ಉದ್ಘಾಟನೆ ಮಾಡಿದ್ದರು. ಈ ಕಾರಣದಿಂದ ಜಲಾಶಯಕ್ಕೆ ಎಚ್.ಡಿ.ದೇವೇಗೌಡ ಬ್ಯಾರೇಜ್ ಎಂದೇ ಹೆಸರಿಡಲಾಗಿದೆ.

ಈ ಬ್ಯಾರೇಜ್ ನೀರು ಉಪಯೋಗಿಸಿಕೊಳ್ಳುವ ಉದ್ದೇಶದಿಂದ ತಾಲ್ಲೂಕಿನ ಗರಕಹಳ್ಳಿ ಏತ ನೀರಾವರಿ ಹಾಗೂ ಕಣ್ವ ಏತ ನೀರಾವರಿ ಯೋಜನೆ ರೂಪಿಸಿ ತಾಲ್ಲೂಕಿನ ಸುಮಾರು 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಕಳೆದ ಏಳು ಎಂಟು ವರ್ಷಗಳಿಂದ ತಾಲ್ಲೂಕಿನ ಕೆರೆಗಳಲ್ಲಿ ನೀರು ತುಂಬಿ ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿ ತಾಲ್ಲೂಕು ನೀರಾವರಿ ತಾಲ್ಲೂಕು ಎಂದು ಪ್ರಸಿದ್ಧಿ ಪಡೆದಿದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ಭರ್ತಿಯಾಗಿಯೇ ಇರುತ್ತಿದ್ದ ಬ್ಯಾರೇಜ್ ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದೆ ನೀರು ಖಾಲಿಯಾಗಿ ಬಣಗುಡುತ್ತಿದೆ. ವರ್ಷಕ್ಕೆ ಎರಡೆರಡು ಬಾರಿ ತುಂಬಿ 35 ಸಾವಿರ ಕ್ಯುಸೆಕ್ಸ್ ನೀರು ಹೊರಕ್ಕೆ ಬಿಟ್ಟ ಉದಾಹರಣೆ ಇದೆ. ಆದರೆ, ಕಳೆದ ವರ್ಷ ಹಾಗೂ ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದ ಕಾರಣ ಬ್ಯಾರೇಜ್ ನಲ್ಲಿದ್ದ ನೀರು ಸಂಪೂರ್ಣ ಖಾಲಿಯಾಗಿ ತಳ ಸೇರಿದೆ.

2023ರ ನವೆಂಬರ್ ತಿಂಗಳವರೆಗೆ ಭರ್ತಿಯಾಗಿಯೇ ಇದ್ದ ಬ್ಯಾರೇಜ್ ಕೇವಲ ನಾಲ್ಕು ಐದು ತಿಂಗಳಿನಲ್ಲಿ ತಳ ಕಂಡಿದೆ. ಗರಕಹಳ್ಳಿ ಏತ ನೀರಾವರಿ ಮೂಲಕ ಕೆಲವು ಕೆರೆಗಳಿಗೆ ನೀರು ಹರಿಸಲಾಗಿದೆ. ನದಿಯಲ್ಲಿ ಅಲ್ಪಸ್ವಲ್ವ ನೀರು ಹರಿಸಲಾಗಿದೆ. ಜತೆಗೆ ಕುಡಿಯುವ ನೀರು, ಕಾಲುವೆಯಲ್ಲಿ ನೀರು ಹರಿಸಿದ್ದು, ರೈತರು ನದಿಗೆ ಪಂಪ್ ಸೆಟ್ ಅಳವಡಿಸಿಕೊಂಡಿರುವುದು ಮುಂತಾದ ಕಾರಣಗಳಿಂದ ನೀರಿನ ಸಂಗ್ರಹ ಕಡಿಮೆಯಾಗಲು ಕಾರಣ ಎಂದು ಬ್ಯಾರೇಜ್ ಅಧಿಕಾರಿಗಳು ತಿಳಿಸುತ್ತಾರೆ.

ಇಗ್ಗಲೂರು ದೇವೇಗೌಡ ಬ್ಯಾರೇಜ್‌ಗೆ ನೀರಿನ ಮೂಲ ಕಡಿಮೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೆ.ಆರ್.ಎಸ್ ಭರ್ತಿಯಾಗಿ ವಿಶ್ವೇಶ್ವರಯ್ಯ ಚಾನಲ್‌ನಲ್ಲಿ ನೀರು ಹರಿಸಿದಾಗ ಅಲ್ಲಿಯ ಸೋರಿಕೆ ನೀರು ಬ್ಯಾರೇಜ್ ಗೆ ಹರಿದು ಬರುತ್ತದೆ. ಆದರೆ, ಈ ಬಾರಿ ಮಳೆ ಇಲ್ಲದ ಕಾರಣ ಸೋರಿಕೆ ನೀರು ಇಲ್ಲದೆ ಬ್ಯಾರೇಜ್ ನಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ ಎಂದು ಬ್ಯಾರೇಜ್ ಉಸ್ತುವಾರಿ ಎಇಇ ನವೀನ್ ತಿಳಿಸಿದರು.

ಹಳೆ ಸೇತುವೆ ಗೋಚರ: ಎಚ್.ಡಿ.ದೇವೇಗೌಡ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ತಳಮಟ್ಟ ತಲುಪಿದ ಕಾರಣ ಬ್ಯಾರೇಜ್ ನಿರ್ಮಾಣ ಮಾಡುವ ಮೊದಲು ನದಿಯಲ್ಲಿ ಕಟ್ಟಿದ್ದ ಹಳೆ ಸೇತುವೆ ಕಾಣಿಸಲಾರಂಭಿಸಿದೆ. ಕಳೆದ ಸುಮಾರು ಎಂಟು ವರ್ಷಗಳ ಹಿಂದೆ ಬ್ಯಾರೇಜ್‌ನಲ್ಲಿ ನೀರು ಕಡಿಮೆಯಾಗಿ ಕಾಣಿಸಿಕೊಂಡಿದ್ದ ಈ ಹಳೆ ಸೇತುವೆ ಈ ವರ್ಷ ಕಾಣಿಸಲಾರಂಭಿಸಿದೆ ಎಂದು ಇಗ್ಗಲೂರು ಗ್ರಾಮದ ಮುಖಂಡ ಇ.ತಿ.ಶ್ರೀನಿವಾಸ್ ತಿಳಿಸಿದರು.

ಮೊದಲು ನದಿಯಲ್ಲಿ ಕಟ್ಟಿದ್ದ ಹಳೆಯ ಸೇತುವೆ
ಮೊದಲು ನದಿಯಲ್ಲಿ ಕಟ್ಟಿದ್ದ ಹಳೆಯ ಸೇತುವೆ

ತಾಲ್ಲೂಕಿನ ಕೆರೆಗಳು ಖಾಲಿ

ಬ್ಯಾರೇಜ್ ಪ್ರತಿವರ್ಷ ಭರ್ತಿಯಾಗಿಯೇ ಇರುತ್ತಿದ್ದ ಕಾರಣ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು. ಆದರೆ ಈ ವರ್ಷ ಬ್ಯಾರೇಜ್ ನಲ್ಲಿ ನೀರು ಇಲ್ಲದೆ ತಾಲ್ಲೂಕಿನ ಕೆರೆಗಳು ಸಹ ಬಣಗುಡಲಾರಂಭಿಸಿವೆ. ಕಳೆದ ಅಕ್ಟೋಬರ್ ನಲ್ಲಿ ತಾಲ್ಲೂಕಿನ ಗರಕಹಳ್ಳಿ ಕೆರೆ ಮೂಲಕ ನೀರು ಹರಿಸಲು ಪ್ರಾರಂಭಿಸಲಾಗಿತ್ತು. ಆದರೆ ನೀರಿನ ಮಟ್ಟ ಕಡಿಮೆಯಾದಂತೆ ನೀರು ಹರಿಸುವುದನ್ನು ನಿಲ್ಲಿಸಲಾಯಿತು. ಇದರಿಂದ ತಾಲ್ಲೂಕಿನ ಕೆರೆಗಳು ಸಹ ನೀರಿಲ್ಲದೆ ಬಣಗುಡುವಂತಾಗಿದೆ. ಕಳೆದ ಏಳು ಎಂಟು ವರ್ಷಗಳಿಂದ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದವು. ಕೆಲವು ಕೆರೆಗಳಲ್ಲಿ ವರ್ಷಪೂರ ಅರ್ಧ ಕೆರೆ ನೀರಾದರೂ ಇರುತ್ತಿತ್ತು. ಆದರೆಈಗ ಏತ ನೀರಾವರಿ ಮೂಲಕ ನೀರು ಹರಿಸಲಾಗದ ಪರಿಸ್ಥಿತಿ ಇರುವ ಕಾರಣ ತಾಲ್ಲೂಕಿನ ಕೆರೆಗಳು ಸಹ ನೀರಿಲ್ಲದೆ ಒಣಗಲಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT