ಶನಿವಾರ, ಏಪ್ರಿಲ್ 17, 2021
29 °C
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ ಕಾರ್ಯಕ್ರಮ

‘ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ : ವಿದ್ಯಾರ್ಥಿಗಳು ಪದವಿ ಓದುವಾಗಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ನಾರಾಯಣಪ್ರಸಾದ್ ಹೇಳಿದರು.

ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕೌಶಲ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವಿದ್ಯಾರ್ಥಿಯೂ ಪದವಿ ಅಥವಾ ಪಿಜಿ ಮುಗಿದ ತಕ್ಷಣ ಭವಿಷ್ಯದ ಬಗ್ಗೆ ಸ್ಪಷ್ಟತೆಯನ್ನು ಹೊಂದಬೇಕು. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಪರ್ಧೆ ಪ್ರಬಲಗೊಂಡಿದೆ. ಪ್ರತಿ ವರ್ಷ ಪದವಿ ಮುಗಿಸುವವರ ಸಂಖ್ಯೆ ಸುಮಾರು 2 ಲಕ್ಷ ಮೀರಿದೆ ಎಂದು ತಿಳಿಸಿದರು.

ಅಷ್ಟು ಜನರಿಗೆ ಉದ್ಯೋಗವಕಾಶದ ಪ್ರಶ್ನೆ ಎದುರಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಕಾಲೇಜ್ ಶಿಕ್ಷಣದ ಆರಂಭದಲ್ಲೆ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿದ ತಕ್ಷಣ ಏನು ಮಾಡಬೇಕೆಂಬ ದೃಢ ನಿರ್ಧಾರವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಸಿದ್ದತೆ ಮಾಡಿಕೊಂಡರೆ ಭವಿಷ್ಯದಲ್ಲಿ ಸ್ಪಷ್ಟತೆ ಸಿಗುತ್ತದೆ. ನಿರಂತರವಾಗಿ ಸ್ಪರ್ಧಾತ್ಮಕ ಪರೀಕೆಗಳನ್ನು ಎದುರಿಸುವುದರಿಂದ ಆತ್ಮಸ್ಥೈರ್ಯ ಮೂಡುತ್ತದೆ ಎಂದರು.

ಎಲ್ಲರೂ ಸರ್ಕಾರಿ ನೌಕರಿ ಹಿಡಿಯಲು ಸಾಧ್ಯವಿಲ್ಲ. ಸ್ವಉದ್ಯೋಗ ಮತ್ತು ಖಾಸಗಿ ಉದ್ಯೋಗದಿಂದ ಸಮಾಜ ನಡೆಯುತ್ತಿದೆ. ಹಾಗಾಗಿ ಪದವಿ ಅಥವಾ ಸ್ನಾತಕೋತ್ತರ ಪಡೆದವರು ಸ್ವಉದ್ಯೋಗ ಮಾಡಬಾರದೆಂಬ ನಿಯಮವಿಲ್ಲ. ಅದಕ್ಕೂ ಸಿದ್ಧತೆ ಮಾಡಿಕೊಳ್ಳಬಹುದು. ಅಲ್ಲದೆ ಈಗ ವಿದ್ಯಾರ್ಥಿನಿಯರೂ ಉದ್ಯೋವಕಾಶದ ಬಗ್ಗೆ ಗುರಿಯನ್ನು ಇಟ್ಟುಕೊಂಡಿರುವುದು ಉತ್ತಮ ಬೆಳವಣಿಗೆ. ಅದಕ್ಕೆ ಪೋಷಕರು ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗಲೆಂದು ಕಾಲೇಜಿನಲ್ಲಿ ಪ್ಲೇಸ್‌ಮೆಂಟ್ ಸೆಲ್ ತೆರೆಯಲಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ. ರಾಜಣ್ಣ ಮಾತನಾಡಿ, ಕಾಲೇಜಿನಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಶೇ 85ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡುತ್ತೇವೆ. ಕಾಲೇಜಿನ ಅಭಿವೃದ್ಧಿಗೆ ವಿದ್ಯಾರ್ಥಿಗಳ ಜತೆಗೆ ಪೋಷಕರ ಸಹಕಾರವು ಅಗತ್ಯವಿದೆ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಚಂದ್ರಪ್ಪ, ಎ.ಎಸ್.ಸಾವಿತ್ರಮ್ಮ, ದೀಪ್ತಿ, ರೂಪ, ಗ್ರಂಥಪಾಲಕ ಎನ್.ಜಿ. ಬಾಲಾಜಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು