ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ರೂ ಸರ್ವೀಸ್ ರಸ್ತೆಲೇ ಹೋದ್ರೆ ಟೋಲ್ ಕಟ್ಟೋರ್‍ಯಾರು?: ಅಧಿಕಾರಿ ಹೇಳಿಕೆ

Last Updated 15 ಮಾರ್ಚ್ 2023, 20:21 IST
ಅಕ್ಷರ ಗಾತ್ರ

ರಾಮನಗರ: ‘ಎಲ್ಲರೂ ಸರ್ವೀಸ್ ರಸ್ತೆಯಲ್ಲೇ ಹೋದರೆ ಹೆದ್ದಾರಿಯಲ್ಲಿ ಟೋಲ್ ಕಟ್ಟುವವರು ಯಾರು? ಪ್ರಮುಖ ಸೇತುವೆ, ರೈಲ್ವೆ ಟ್ರ್ಯಾಕ್ ಇರುವ ಕಡೆ ಸರ್ವೀಸ್‌ ರಸ್ತೆ ಮಾಡಬಾರದು ಎಂದು ಕಾನೂನಿನಲ್ಲಿಯೇ ಇದೆ ಗೊತ್ತಾ?’

–ಹೀಗೆಂದು ಹೇಳಿಕೆ‌ ನೀಡಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್.

ಬೆಂಗಳೂರಿನ ಕಣಮಿಣಕಿ ಟೋಲ್ ಬಳಿ ಬುಧವಾರ ಕನ್ನಡಪರ ಸಂಘ ಟನೆಗಳ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಅವರು ಸರ್ವೀಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

‘ಇಂಡಿಯನ್ ರೋಡ್ ಕಾಂಗ್ರೆಸ್‌ನ ಷಟ್ಪಥ ಕೈಪಿಡಿ ಪ್ರಕಾರ ಪ್ರಮುಖ ಸೇತುವೆಗಳು ಹಾಗೂ ರೈಲ್ವೆ ಸೇತುವೆಗಳು ಇರುವ ಕಡೆ ಸರ್ವೀಸ್‌ ರಸ್ತೆಗಳ ಸಂಪರ್ಕ ಕೊಡಬಾರದು ಎಂದು ಇದೆ.

ಈ ಹೆದ್ದಾರಿಯನ್ನು ನಾವು ಸರ್ಕಾರದಿಂದಲೇ ಕಟ್ಟಿರಬಹುದು. ಆದರೆ ಸರ್ಕಾರಿ–ಖಾಸಗಿ ಸಹಭಾಗಿತ್ವ ದಲ್ಲಿ ಇವು ನಿರ್ಮಾಣವಾಗಿದ್ದು, ಅವು ಆರ್ಥಿಕವಾಗಿಯೂ ಲಾಭದಾ ಯಕವಾಗಬೇಕಾಗುತ್ತದೆ. ಈ ಎಲ್ಲ ಆಯಾಮಗಳಿಂದಲೂ ನಾವು ಆಲೋಚನೆ ಮಾಡಬೇಕಾಗುತ್ತದೆ’ ಎಂದು ವಿವರಿಸಿದರು.

ದಶಪಥವಲ್ಲ, ಆರೇ ಪಥ: ‘ಬೆಂಗಳೂರು–ಮೈಸೂರು ಹೆದ್ದಾರಿಯು ವಾಸ್ತವದಲ್ಲಿ ಕೇವಲ ಆರು ಪಥದ ರಸ್ತೆ. ಅಷ್ಟಕ್ಕೆ ಮಾತ್ರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಾಸ್ತವದಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಈ ಯೋಜನೆಯಲ್ಲಿ ಇಲ್ಲ. ಆದಾಗ್ಯೂ ಜನರ ಹಿತದೃಷ್ಟಿಯಿಂದ ತಲಾ ಎರಡು ಪಥಗಳ ಸರ್ವೀಸ್ ರಸ್ತೆ ನಿರ್ಮಾಣ ಮಾಡಿ ನಿರ್ವಹಣೆಯನ್ನೂ ಮಾಡುತ್ತಿದ್ದೇವೆ’ ಎಂದು ಅವರು ಸಮಜಾಯಿಷಿ ನೀಡಿದರು.

‘ದೇಶದಲ್ಲಿ ಗ್ರೀನ್‌ ಫೀಲ್ಡ್‌ ಮತ್ತು ಬ್ರೌನ್‌ ಫೀಲ್ಡ್‌ ಎಂಬ ಎರಡು ಥರದ ಹೆದ್ದಾರಿಗಳು ಇವೆ. ನೈಸ್‌ ರಸ್ತೆಯು ಗ್ರೀನ್‌ ಫೀಲ್ಡ್ ಮಾದರಿ ಹೆದ್ದಾರಿ ಆಗಿದ್ದು, ಅಲ್ಲಿ ಮಧ್ಯೆ ಯಾವ ಜನವಸತಿಗಳೂ ಬರುವುದಿಲ್ಲ. ಆದರೆ ಬೆಂಗಳೂರು–ಮೈಸೂರು ಹೆದ್ದಾರಿ ಈ ಎರಡರ ಮಿಶ್ರಣವಾಗಿದ್ದು, ಇದರಿಂದ ವೆಚ್ಚ ಹೆಚ್ಚಾಗಿದೆ. ಕೇಂದ್ರದ ಮಾನದಂಡದ ಪ್ರಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಿವಿಲ್‌ ಕಾಮಗಾರಿಗೆ ಪ್ರತಿ ಕಿ.ಮೀ.ಗೆ ₹16 ಕೋಟಿ ವೆಚ್ಚವಾದರೆ, ಈ ಹೆದ್ದಾರಿಗೆ ಕಿ.ಮೀ.ಗೆ ಸರಾಸರಿ ₹33 ಕೋಟಿ ವೆಚ್ಚವಾಗಿದೆ. ಒಟ್ಟು 89 ಮೇಲ್ಸೇತುವೆ ಮತ್ತು ಅಂಡರ್‌ಪಾಸ್‌ ಕಟ್ಟಿದ್ದು, ಇದರಿಂದ ವೆಚ್ಚ ಏರಿದೆ’ ಎಂದು ಅವರು ವಿವರಿಸಿದರು.

ಹೆದ್ದಾರಿಯಲ್ಲಿ ಅಪಘಾತಗಳ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಹೆದ್ದಾರಿಯ ಪ್ರತಿ ತಿರುವಿನಲ್ಲೂ ಗರಿಷ್ಠ ವೇಗದ ಮಿತಿ ನಿಗದಿ ಮಾಡಲಾಗಿದೆ. ಪ್ರಯಾಣಿಕರೂ ತಮ್ಮ ಜವಾಬ್ದಾರಿ ಅರಿತು ಪ್ರಯಾಣ ಮಾಡಿದರೆ ಅಪಘಾತ ತಪ್ಪಿಸಬಹುದು’ ಎಂದು
ಹೇಳಿದರು.

ವಕೀಲ ಎ.ಪಿ. ರಂಗನಾಥ್‌, ಸಂಘಟನೆಗಳ ಮುಖಂಡರಾದ ನೀಲೇಶ್‌ ಗೌಡ, ನರಸಿಂಹ ಮೂರ್ತಿ ಇದ್ದರು.

ಮೆಟಲ್ ಜಾಯಿಂಟ್‌ ದುರಸ್ತಿ: ಸ್ಪಷ್ಟನೆ
ಹೆದ್ದಾರಿ ರಸ್ತೆ ಹಾಳಾಗಿರುವ ಕುರಿತು ‘ಪ್ರಜಾವಾಣಿ’ ವರದಿಗೆ ಪ್ರತಿಕ್ರಿಯೆ ನೀಡಿದ ಶ್ರೀಧರ್, ‘ಅಲ್ಲಿ ಮೆಟಲ್‌ ಜಾಯಿಂಟ್‌ ಬಿಟ್ಟು ಹೋದ ಕಾರಣ ಸಮಸ್ಯೆ ಆಗಿದೆ. ಆ ಸೇತುವೆ ಮೇಲೆ ವಾಹನಗಳ ಓಡಾಟದ ವೇಗಕ್ಕೆ ಮಿತಿ ಇದೆ. ಅದಕ್ಕಿಂತ ಹೆಚ್ಚು ವೇಗದಿಂದ ವಾಹನಗಳು ಸಂಚರಿಸುತ್ತಿರುವ ಕಾರಣ ಸಮಸ್ಯೆ ಆಗಿದೆ. ಹೆದ್ದಾರಿಯು ಚಪ್ಪಲಿ ಇದ್ದ ಹಾಗೇ. ದಿನ ಸವೆಯುತ್ತಲೇ ಇರುತ್ತದೆ. ಹೀಗಾಗಿ ಅದನ್ನು ದುರಸ್ತಿ ಮಾಡಲು ಕಾಮಗಾರಿ ನಡೆದಿದೆ’ ಎಂದು ಸ್ಪಷ್ಟನೆ ನೀಡಿದರು.

ಟೋಲ್‌ ಸಂಗ್ರಹ: ಖಾಸಗಿ ಕಂಪನಿಗೆ ಮೂರು ತಿಂಗಳು ಗುತ್ತಿಗೆ
ಬೆಂಗಳೂರು–ಮೈಸೂರು ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಡಿಬಿಎಲ್ ಕಂಪನಿಯೇ ಇದನ್ನು 15 ವರ್ಷ ನಿರ್ವಹಣೆ ಮಾಡಬೇಕು. ಆಂಬುಲೆನ್ಸ್, ಹೈವೆ ಪೆಟ್ರೋಲಿಂಗ್‌ ಎಲ್ಲ ಜವಾಬ್ದಾರಿಯೂ ಅವರದ್ದೇ ಆಗಿರುತ್ತದೆ. ಸದ್ಯ ಎರಡು ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಗಸ್ತು ವಾಹನವೂ ಇದೆ. ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ತಿಳಿಸಿದರು.

ಟೋಲ್‌ ಸಂಗ್ರಹದ ಹಕ್ಕನ್ನು ಡಿಬಿಎಲ್‌ ಕಂಪನಿಗೆ ನೀಡಿಲ್ಲ. ಕಣಮಿಣಕಿ ಹಾಗೂ ಶೇಷಗಿರಿಹಳ್ಳಿ ಟೋಲ್ ಸಂಗ್ರಹವನ್ನು ಮೂರು ತಿಂಗಳಿಗೆ ಹರಾಜು ಹಾಕಿದ್ದು, ಸ್ಕೈ ಲಾರ್ಜ್ ಎಂಬ ಕಂಪನಿ ಗುತ್ತಿಗೆ ಪಡೆದಿದೆ. ಅವರು ದಿನಕ್ಕೆ ₹62 ಲಕ್ಷ ಹಣವನ್ನು ಸರ್ಕಾರಕ್ಕೆ ಕಟ್ಟಬೇಕಿದೆ ಎಂದು ಮಾಹಿತಿ ಹಂಚಿಕೊಂಡರು.

ಬೆಂಗಳೂರು-ಮೈಸೂರು ಟೋಲ್‌: ಆಕ್ಷೇಪಣೆಗೆ ಕೋರ್ಟ್ ಆದೇಶ
ಬೆಂಗಳೂರು-ಮೈಸೂರು ಎಕ್ಸ್‌‍ಪ್ರೆಸ್‌ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಬುಧವಾರ ಆದೇಶಿಸಿದೆ.

ಬೆಂಗಳೂರು-ಕನಕಪುರ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಎಸ್. ಪಿ ಸಂದೀಪ್ ರಾಜು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ಬುಧವಾರ ವಿಚಾರಣೆಯನ್ನು
ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಸಂಬಂಧ ಮಂಗಳವಾರ (ಮಾ.14) ನಡೆದಿದ್ದ ಧರಣಿ ಕುರಿತು ಮಾಧ್ಯಮಗಳಲ್ಲಿ ವರದಿಗಳನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಬೇಕಿದೆ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

‘ಎನ್ಎಚ್ಎಐ ಮತ್ತು ಅದರ ಯೋಜನಾ ನಿರ್ದೇಶಕ, ಯೋಜನೆ ಜಾರಿ ಘಟಕ ಮತ್ತು ಎನ್ಎಚ್ಎಐನ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

‘ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ಮತ್ತು ಸಂಗ್ರಹ ನಿರ್ಧಾರ) 2008ರ ನಿಯಮ 3ರ ಅಡಿ ಅವಕಾಶವಿದೆ. ಆದರೆ, ಇದಕ್ಕೂ ಮುನ್ನ, ಅಧಿಸೂಚನೆ ಪ್ರಕಟಣೆಯೂ ಸೇರಿದಂತೆ ಪೂರ್ವಭಾವಿ ಅಗತ್ಯಗಳನ್ನು ಪೂರೈಸಬೇಕು. ಸವಾರರಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈ ವಿಷಯವನ್ನು ಪರಿಗಣಿಸಬೇಕಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT