ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ-ಜೆಡಿಎಸ್ ಮೈತ್ರಿ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಲಿದೆ: ಲಹರ್‌ ಸಿಂಗ್

Published 26 ಫೆಬ್ರುವರಿ 2024, 5:05 IST
Last Updated 26 ಫೆಬ್ರುವರಿ 2024, 5:05 IST
ಅಕ್ಷರ ಗಾತ್ರ

ರಾಮನಗರ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಡುವೆ ಏರ್ಪಟ್ಟಿರುವ ಮೈತ್ರಿಯು ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಭಾವ ಬೀರಲಿದೆ. ಮೈತ್ರಿಯಾಗಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಆಶಯ ಕೂಡ ಆಗಿತ್ತು’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಲಹರ್‌ಸಿಂಗ್ ಸಿರೋಯಾ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೂಟಗಲ್ ಹೋಬಳಿ ಹನುಮಂತಪುರ (ನಾಗರಕಲ್ಲುದೊಡ್ಡಿ) ಗ್ರಾಮದಲ್ಲಿ ಭಾನುವಾರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ಮೈತ್ರಿ ಕಾರಣದಿಂದಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳು ಕೆಲವೆಡೆ ಠೇವಣಿ ಕಳೆದುಕೊಳ್ಳಲಿದ್ದಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ರಾಜಕೀಯ ಅನುಭವಗಳು ಮೈತ್ರಿ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ವರದಾನವಾಗಲಿದೆ. ಗ್ರಾಮೀಣ ಭಾಗದ ಜನ ಸಹ ಮೈತ್ರಿಯನ್ನು ಒಪ್ಪಿದ್ದು, ಈ ಭಾರಿಯೂ ಮೋದಿ ಅವರಿಗೆ ಜನ ಬೆಂಬಲ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೋದಿ ಅವರ ಗಾಂವ್ ಕಾ ವಿಕಾಸ್ ಗರೀಬ್ ಕಾ ವಿಶ್ವಾಸ್ ಅವರ ಘೋಷಣೆಯಂತೆ ,ನಮ್ಮ ಗಮನವೆಲ್ಲಾ ಹಳ್ಳಿಯ ಕಡೆ ಇದೆ. ಕೇಂದ್ರ ಸರ್ಕಾರದ ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ ತಲುಪುತ್ತಿವೆ. ಅದಕ್ಕೆ ಪೂರಕವಾಗಿ ಹಿಂದೆ ಮಾಗಡಿ ಶಾಸಕರಾಗಿದ್ದ ಎ. ಮಂಜುನಾಥ್ ಮತ್ತು ಶಿವಣ್ಣ ಅವರ ಮನವಿ ಮೇರೆಗೆ ನನ್ನ ಅನುದಾನ ನೀಡಿದ್ದೆ. ಅದರಲ್ಲಿ ಶುದ್ದ ಕುಡಿಯುವ ನೀರು ಘಟಕ ನಿರ್ಮಿಸುವ ಮೂಲಕ ಸಾರ್ಥಕ ಕಾರ್ಯಕ್ಕೆ ಬಳಸಿರುವುದು ಸಂತಸ ತಂದಿದೆ’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್ ಮಾತನಾಡಿ, ‘ಗ್ರಾಮಾಂತರ ಪ್ರದೇಶದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಲಹರ್‌ಸಿಂಗ್ ಅವರು ತಮ್ಮ ಅನುದಾನ ನೀಡಿದ್ದಾರೆ. ಕೇಂದ್ರದಿಂದ ಮತ್ತಷ್ಟು ಅನುದಾನ ತಂದು ಇಲ್ಲಿನ ಸಮಸ್ಯೆ ಪರಿಹಾರಕ್ಕೆ ನೆರವಾಗಲಿ’ ಎಂದು ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ನಾಗರಕಲ್ಲುದೊಡ್ಡಿ ಶಿವಣ್ಣ, ದೊಡ್ಡವೀರಯ್ಯ, ಸುಮಿತ್ರಮ್ಮ, ಜಾಲಮಂಗಲ ಗ್ರಾಪಂ ಮಾಜಿ ಅಧ್ಯಕ್ಷರಾದ ರಾಜು, ನಂದೀಶ್, ಶಿವಣ್ಣ, ಸಿದ್ದರಾಜು ಇದ್ದರು.

‘ಸೋಲಿನ ಭಯದಿಂದ ಗಿಫ್ಟ್ ಹಂಚಿಕೆ’
‘ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದಾಗಿ ಮತದಾರರಿಗೆ ಚುನಾವಣೆ ಘೋಷಣೆಗೂ ಮುಂಚೆಯೇ ಗಿಫ್ಟ್ ಬಾಕ್ಸ್ ಹಂಚಿಕೆ ಮಾಡುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳಿಗಾಗಿ ಬ್ಯಾಟರಿ ಹಾಕಿ ಹುಡುಕಾಟ ನಡೆಸುವ ಪರಿಸ್ಥಿತಿಯಲ್ಲಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಯಾರೇ ಅಂತಿಮಗೊಂಡರೂ ಗೆಲುವು ಸಾಧಿಸಲಿದ್ದಾರೆ’ ಎಂದು ಎ. ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT