ಶುಕ್ರವಾರ, ಏಪ್ರಿಲ್ 16, 2021
22 °C
ಕಾಮಗಾರಿಗಳಿಗೆ ಶೀಘ್ರ ಚಾಲನೆ

ಬಾನಂದೂರು: ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ಅಭಿವೃದ್ಧಿಗೆ ನೀಲನಕ್ಷೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿ ಮಠದ ಕೀರ್ತಿಯನ್ನು ನಾಡಿನೆಲ್ಲೆಡೆ ವಿಸ್ತರಿಸಿದ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಾದ ಬಿಡದಿ ಹೋಬಳಿಯ ಬಾನಂದೂರು ಗ್ರಾಮದ ಅಭಿವೃದ್ಧಿಗೆ ಕಡೆಗೂ ಕಾಲ ಕೂಡಿಬಂದಿದೆ. ಗ್ರಾಮವನ್ನು ಅಭಿವೃದ್ಧಿ ಪಡಿಸುವ ನೀಲ ನಕ್ಷೆ ಸಿದ್ಧವಾಗಿದ್ದು, ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶವನ್ನು ಸರ್ಕಾರ ಗುತ್ತಿಗೆ ಪಡೆದ ಕಂಪನಿಗೆ ನೀಡಿದೆ.

ಬಾನಂದೂರು ಗ್ರಾಮವನ್ನು ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಶ್ರೀಗಳ ಚಿಂತನೆಯನ್ನು ಮತ್ತಷ್ಟು ಪಸರಿಸಬೇಕು ಎನ್ನುವ ಬೇಡಿಕೆ ದಶಕಗಳದ್ದು. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿದ್ದಗಂಗ ಮಠದ ಶಿವಕುಮಾರ ಸ್ವಾಮೀಜಿ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರ ಹಾಗೂ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ಬಾನಂದೂರು ಗ್ರಾಮಗಳನ್ನು ಧಾರ್ಮಿಕ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ತಲಾ ₹ 25 ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಟ್ಟಿದ್ದರು. ಇದಾದ ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರ ಈ ಗ್ರಾಮಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿತ್ತು. ವೀರಾಪುರ ಗ್ರಾಮದ ಅಭಿವೃದ್ಧಿಗೆ ಚಾಲನೆಯನ್ನು ನೀಡಿತ್ತು. ಆದರೆ ಬಾನಂದೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ಜಾರಿ ವಿಳಂಬವಾಗಿತ್ತು.

ಈಚೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಬಾನಂದೂರು ಅಭಿವೃದ್ಧಿಪಡಿಸುವ ನೀಲನಕ್ಷೆಗೆ ಅಂತಿಮ ರೂಪ ನೀಡಿದ್ದಾರೆ.

ಏನೇನು ಇರಲಿದೆ?: ಬಾನಂದೂರು ಗ್ರಾಮವನ್ನು ವಿವಿಧ ಆಯಾಮಗಳಲ್ಲಿ ಅಭಿವೃದ್ಧಪಡಿಸುವ ಮೂಲಕ ಪಾರಂಪರಿಕ ತಾಣವನ್ನಾಗಿ ಮಾಡುವ ಯೋಜನೆ ಇದಾಗಿದೆ. ವಿವೇಕಾನಂದರು ಪಶ್ಚಿಮ ಬಂಗಾಳದಲ್ಲಿ ಸ್ಥಾಪನೆ ಮಾಡಿರುವ ಬೇಲೂರು ಮಠದ ಮಾದರಿಯಲ್ಲಿ ಬಾನಂದೂರು ಗ್ರಾಮವನ್ನು ಅಭಿವೃದ್ಧಿಪಡಿಸಲು ನೀಲನಕ್ಷೆ ಸಿದ್ದಪಡಿಲಾಗಿದೆ.

ಬಾಲಗಂಗಾಧರ ನಾಥ ಸ್ವಾಮೀಜಿಗಳು ವಾಸ್ತವ್ಯ ಹೂಡುತ್ತಿದ್ದ ಮನೆಯನ್ನು ಸುಮಾರು ₹ 1.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರ ವಿಸ್ತೀರ್ಣ 287.01 ಚ ಮೀ ಇರಲಿದೆ. ಇದರ ಜತೆಗೆ ಬಾನಂದೂರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಯುವ ಸಮುದಾಯಕ್ಕೆ ಅನುಕೂಲವಾಗುವಂತೆ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆ ಜತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉಡುಪು ತಯಾರಿಕೆ ಕೇಂದ್ರವನ್ನು ಸಹ ಸ್ಥಾಪನೆ ಮಾಡಲಾಗುತ್ತಿದ್ದು, ಇದಕ್ಕೆ ₹ 3.94 ಕೋಟಿ ಮೀಸಲಿಡಲಾಗುತ್ತಿದೆ. ಇನ್ನು ಶ್ರೀಗಳು ಬಳಕೆ ಮಾಡುತ್ತಿದ್ದ ವಸ್ತುಗಳು ಸಂಗ್ರಹ ಮತ್ತು ಪ್ರದರ್ಶನಕ್ಕಾಗಿ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು ₹ 6.87 ಕೋಟಿ ವೆಚ್ಚದಲ್ಲಿ 3168 ಚ ಮೀಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಸಮುದಾಯ ಭವನ, ಸಾಂಸ್ಕೃತಿಕ ಭವನವನ್ನು ₹ 6.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಜತೆಗೆ ₹ 1.32 ಕೋಟಿ ವೆಚ್ಚದಲ್ಲಿ ದೇವಸ್ಥಾನ, ಬಾಹ್ಯ ಸಂಪರ್ಕ ಹಾಗೂ ವಿದ್ಯುತ್ ಸರಬರಾಜು ಸೇರಿದಂತೆ ಇತರೆ ಕಾಮಗಾರಿಗಳಿಗೆ ಒಟ್ಟು ₹ 1.28 ಕೋಟಿ ವರ್ಗೀಕರಿಸಲಾಗಿದೆ.

ಖಾಸಗಿ ಕಂಪನಿಗೆ ಗುತ್ತಿಗೆ: ಬಾನಂದೂರು ಅಭಿವೃದ್ಧಿಗಾಗಿ ಮೆ.ರೈಟ್ಸ್ ಎನ್ನುವ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ, ಮೊದಲ ಕಂತಿನಲ್ಲಿ ಇದೇ 31ರೊಳಗೆ ₹ 7.11 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಆದೇಶವನ್ನು ಸಹ ನೀಡಲಾಗಿದೆ. ಇದರೊಂದಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ವಿಳಂಬವಾಗಿದ್ದ ಬಾನಂದೂರು ಗ್ರಾಮದ ಅಭಿವೃದ್ಧಿ ಯೋಜನೆಗೆ ಚಾಲನೆ ದೊರೆತಂತಾಗಿದ್ದು, ಅತಿ ಶೀಘ್ರದಲ್ಲೇ ಯೋಜನೆಗೆ ಶಂಕುಸ್ಥಾಪನೆ ಆಗಲಿದೆ.

ಏನೇನು ಇರಲಿದೆ ಬಾನಂದೂರಿನಲ್ಲಿ
* ಶ್ರೀಗಳ ಮನೆಗೆ ಹೊಸ ರೂಪ
* ಕೌಶಾಲಭಿವೃದ್ಧಿ ಕೇಂದ್ರ ಸ್ಥಾಪನೆ
* ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ
* ಸಮುದಾಯ ಭವನ, ಸಾಂಸ್ಕೃತಿಕ ಭವನ
* ದೇವಸ್ಥಾನ

***

ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು ಅಭಿವೃದ್ಧಿಗೆ ಚಾಲನೆ ದೊರೆಯುತ್ತಿರುವುದು ಹೆಮ್ಮೆಯ ವಿಚಾರ. ನಾಡಿಗೆ ಮಾದರಿಯಾಗುವಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಈ ಗ್ರಾಮ ಪರಿವರ್ತನೆ ಆಗಲಿ
-ಗಂಗಾಧರ್, ಬಾನಂದೂರು ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು