ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀತ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಅಸ್ತ್ರ

ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯಲ್ಲಿ ನ್ಯಾಯಾಧೀಶೆ ಅನಿತಾ ಅಭಿಪ್ರಾಯ
Published 10 ಫೆಬ್ರುವರಿ 2024, 7:40 IST
Last Updated 10 ಫೆಬ್ರುವರಿ 2024, 7:40 IST
ಅಕ್ಷರ ಗಾತ್ರ

ರಾಮನಗರ: ‘ಯಾರನ್ನೇ ಆದರೂ ಜೀತದಾಳಾಗಿ ಇಟ್ಟುಕೊಂಡು, ಅಕ್ರಮವಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದ. ಆಧುನಿಕ ಕಾಲದಲ್ಲೂ ಕೆಲವೆಡೆ ವರದಿಯಾಗಿರುವ ಈ ಅನಿಷ್ಟ ಪದ್ಧತಿ ನಿರ್ಮೂಲನೆಯಾಗಬೇಕಾದರೆ ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅನಿತಾ ಎನ್.ಪಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜೀತ ಪದ್ಧತಿಗೆ ಸಂಬಂಧಿಸಿದಂತೆ ಇಂತಹ ಅಪರಾದಗಳಿಗೆ ಕಾನೂನಿನಡಿ ಮೂರು ವರ್ಷ ಕಾರಗೃಹವಾಸ ಮತ್ತು ದಂಡವನ್ನು ವಿಧಿಸಬಹುದಾಗಿದೆ’ ಎಂದರು.

‘ಜೀತದಾಳುಗಳು ತಾನು ಆರ್ಥಿಕ ಹಾಗೂ ಇತರ ಸಂಕಷ್ಟದ ಸ್ಥಿತಿಯಲ್ಲಿ ಪಡೆದಂತಹ ಅಲ್ಪಪ್ರಮಾಣದ ಸಾಲ ಹಾಗೂ ಅದರ ಬಡ್ಡಿ ತೀರಿಸಲು ಜೀವನ ಪೂರ್ತಿ ದುಡಿಮೆ ಮಾಡಬೇಕಾಗುತ್ತದೆ. ಹಲವು ಪ್ರಕರಣಗಳಲ್ಲಿ ತನ್ನ ಕುಟುಂಬವನ್ನು ಸಹ ಜೀತಕ್ಕೆ ಮುಡಿಪಾಗಿಡಬೇಕಾಗಿರುತ್ತದೆ. ಆದ್ದರಿಂದ ಜೀತಪದ್ಧತಿಯನ್ನು ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ಮುಖ್ಯವಾಗಿರುತ್ತದೆ. ಜಿಲ್ಲೆಯಲ್ಲಿ 43 ಜನ ಜೀತಪದ್ಧತಿಯಿಂದ ಬಿಡುಗಡೆಗೊಂಡು ಜೀತ ವಿಮುಕ್ತರಾಗಿದ್ದಾರೆ’ ಎಂದರು.

ಗ್ರಾಮಮಟ್ಟದಲ್ಲಿ ಕಾರ್ಯಪಡೆ: ‘ಮಕ್ಕಳು ಮತ್ತು ವಯಸ್ಕರು ಕಾಣೆಯಾದ ಪ್ರಕರಣಗಳನ್ನು ಪತ್ತೆಹಚ್ಚಲು ಗ್ರಾಮ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಸಮಿತಿಯು ಸಕ್ರಿಯವಾದಲ್ಲಿ ಮಕ್ಕಳು ಮತ್ತು ಮಾನವನ ಕಳ್ಳ ಸಾಗಾಣೆ ಮಾಡುವುದನ್ನು ಹಾಗೂ ಜೀತಪದ್ದತಿಯನ್ನು ತಡೆಯಬಹುದು. ಈ ಸಮಿತಿಯೊಂದಿಗೆ ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರು ಸಹ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

‘ಜೀತಪದ್ದತಿಯಿಂದ ಮುಕ್ತಿ ಹೊಂದಿದರವರಿಗೆ ಆಪ್ತಸಮಾಲೋಚನೆ ಮೂಲಕ, ಕೌಶಲ್ಯ ತರಬೇತಿ, ವಿದ್ಯಾಭ್ಯಾಸ, ವಸತಿ, ಉದ್ಯೋಗ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಬಹುದು. ಅವರು ಸಹ ಎಲ್ಲರಂತೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಲು ಅವಕಾಶ ಕಲ್ಪಿಸಬೇಕು’ ಎಂದರು.

ಸಮಿತಿ ರಚನೆ: ‘ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಜೀತಪದ್ಧತಿ ಕುರಿತು ಬರುವ ದೂರುಗಳನ್ನು ಪರಿಶೀಲಿಸಿ, ಜೀತಪದ್ಧತಿ ಕುರಿತು ಕ್ರಮಕೈಗೊಳ್ಳುತ್ತದೆ’ ಎಂದು ತಿಳಿಸಿದರು.

ಜೀತ ಪದ್ಧತಿ ನಿರ್ಮೂಲನೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಜೀತ ಪದ್ದತಿ ನಿರ್ಮೂಲನೆ ಕುರಿತು ಅರಿವು ಮೂಡಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಿಂದ ಜಿಲ್ಲಾ ಪಂಚಾಯಿತಿವರೆಗೆ ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಚಾಲನೆ ನೀಡಿದರು.

ಜೀತ ಪದ್ದತಿ ನಿರ್ಮೂಲನೆ ಕುರಿತು ಅರಿವು ಮೂಡಿಸಲು ರಾಮನಗರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಿಂದ ಜಿಲ್ಲಾ ಪಂಚಾಯಿತಿವರೆಗೆ ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಚಾಲನೆ ನೀಡಿದರು. ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ ಇದ್ದಾರೆ
ಜೀತ ಪದ್ದತಿ ನಿರ್ಮೂಲನೆ ಕುರಿತು ಅರಿವು ಮೂಡಿಸಲು ರಾಮನಗರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಿಂದ ಜಿಲ್ಲಾ ಪಂಚಾಯಿತಿವರೆಗೆ ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಚಾಲನೆ ನೀಡಿದರು. ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ ಇದ್ದಾರೆ

‘ಪ್ರತಿಯೊಬ್ಬರಿಗೂ ಅರಿವು ಮುಖ್ಯ’

‘ಪ್ರತಿಯೊಬ್ಬರಿಗೂ ಜೀತ ಪದ್ಧತಿಯ ಕುರಿತು ಅರಿವು ಅಗತ್ಯ. ಆಗ ಮಾತ್ರ ಜೀತಪದ್ಧತಿ ವಿರುದ್ಧ ವ್ಯಾಪಕವಾಗಿ ಜಾಗೃತಿ ಮೂಡಲು ಸಾಧ್ಯ. ಇದರಿಂದ ಈ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯ. ಸಾಲ ಪಡೆದವರು ಹಾಗೂ ಉದ್ಯೋಗ ರಹಿತರು ಜೀತಪದ್ಧತಿಗೆ ಸಾಮಾನ್ಯವಾಗಿ ಒಳಗಾಗುತ್ತಾರೆ. ಅಂತಹವರಿಗೆ ಕಾನೂನಿನ ಅರಿವು ಮೂಡಿಸಬೇಕು. ತಂತ್ರಜ್ಞಾನಗಳನ್ನು ಬಳಸಿಕೊಂಡು ಜೀತಪದ್ಧತಿಯನ್ನು ಪತ್ತೆ ಹಚ್ಚಬಹುದು. ಉದ್ಯೋಗ ಸೃಷ್ಟಿ ಹೆಚ್ಚಿದಾಗ ಜೀತಪದ್ಧತಿ ಸಹ ನಿಧಾನವಾಗಿ ನಿರ್ಮೂಲನೆಯಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT