ಕನಕಪುರ: ಸರ್ಕಾರದ ಹೊಸ ನಿಯಮದಡಿ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದರಿಂದ ತಮ್ಮ ಜೀವನ ನಿರ್ವಹಣೆಗೆ ತುಂಬಾ ಕಷ್ಟವಾಗುತ್ತಿದೆ ಎಂದು ವಯೋವೃದ್ಧ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ಹೊಸ ಕಬ್ಬಾಳು ಗ್ರಾಮದ ವಯೋವೃದ್ಧ ವಿಧವೆ ಪಾರ್ವತಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ದಕ್ಕೆ ಸಂಕಷ್ಟ ಎದುರಿಸುತ್ತಿರುವ ಮಹಿಳೆ.
ಪಾರ್ವತಮ್ಮ ಅವರ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ವಿಧವಾ ವೇತನ ಪಡೆಯುತ್ತಿದ್ದರು, ಆದರೆ ಒಂದು ವರ್ಷದ ಹಿಂದೆ ವಿಧವಾ ವೇತನ ನಿಂತು ಹೋಗಿದೆ, ಸಂಬಂಧ ಪಟ್ಟವರ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರಂಟಿಗಳ ಮೂಲಕ ಗೃಹಲಕ್ಷ್ಮಿ ಹಣ, ಆಹಾರ ಪಡಿತರ ಕೊಡುತ್ತಿರುವುದರಿಂದ ಜೀವನ ನಿರ್ವಹಣೆ ಸಹಾಯವಾಗಿತ್ತು. ಅದರೆ, ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವಂತೆ ಹೊಸ ಕಾನೂನು ತಂದಿರುವುದರಿಂದ ತಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇಷ್ಟು ದಿನ ಗೃಹಲಕ್ಷ್ಮಿ ಹಣ ಮತ್ತು 5 ಕೆ.ಜಿ ಅಕ್ಕಿ, 5 ಕೆ.ಜಿ ಗೆ ಹಣ ಬರುತ್ತಿತ್ತು. ಇದರಿಂದ ಜೀವನ ನಿರ್ವಹಣೆ ಆಗುತ್ತಿತ್ತು. ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದರಿಂದ ಈಗ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಜೀವನ ನಿರ್ವಣೆಗೆ ತುಂಬಾ ಕಷ್ಟವಾಗಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕೂಡಲೇ ಸರ್ಕಾರವು ತಮಗೆ ಬಿಪಿಎಲ್ ಕಾರ್ಡನ್ನು ಕೊಡುವ ಮೂಲಕ ತಮ್ಮ ಸಹಾಯಕ್ಕೆ ಬರಬೇಕೆಂದು ಅವರು ಒತ್ತಾಯ ಮಾಡಿದ್ದಾರೆ.