ಬುಧವಾರ, ಜುಲೈ 28, 2021
24 °C

ಮುಂದಿನ 3 ವರ್ಷವೂ ಯಡಿಯೂರಪ್ಪ ಮುಖ್ಯಮಂತ್ರಿ: ಆರ್‌.ಅಶೋಕ್ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮುಂದಿನ ಮೂರು ವರ್ಷದ ಅವಧಿಗೂ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿ. ನಮ್ಮಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ ನೀಡಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ' ಉಮೇಶ್‌ ಕತ್ತಿ ಬೇಡಿಕೆ ಇಟ್ಟಿರುವುದು ಸುಳ್ಳು. ನಮ್ಮಲ್ಲಿನ ಪ್ರತಿ ಶಾಸಕ, ಕಾರ್ಯಕರ್ತರಿಗೂ ಬೇಕಾದ್ದನ್ನು ಕೇಳುವ ಹಕ್ಕಿದೆ. ಕೆಲವರು ಕೇಳಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ನಮ್ಮದು ದುರ್ಬಲ ಹೈಕಮಾಂಡ್ ಅಲ್ಲ. ಒತ್ತಡಗಳಿಗೆ ಮಣಿಯುವುದೂ ಇಲ್ಲ’ ಎಂದು ಹೇಳಿದರು.

ಮೈತ್ರಿ ಮುನ್ಸೂಚನೆ: ಮುಂದಿನ ದಿನಗಳಲ್ಲಿ ಜೆಡಿಎಸ್‌ ಜೊತೆಗೆ ಮೈತ್ರಿ ಸಾಧ್ಯತೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್‌ "ಕಾಂಗ್ರೆಸ್ ಬ್ರಿಟಿಷರು ಬಿಟ್ಟು ಹೋದ ಪಕ್ಷ. ಒಡೆದು ಆಳುವುದು ಅವರ ಚಾಳಿ. ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದೂ ಅವರೇ. ಈಗ ಜೆಡಿಎಸ್ ನವರಿಗೆ ಅದರ ಅರಿವಾಗಿದೆ. ಹಿಂದೊಮ್ಮೆ ನಾವು ಜೆಡಿಎಸ್ ಜೊತೆಗೂಡಿ ಆಡಳಿತ ನಡೆಸಿದ್ದೇವೆ. ಮತ್ತೆ ಸಹಕಾರ ನೀಡುವುದಾದರೆ ಸ್ವಾಗತಿಸುತ್ತೇವೆ’ ಎಂದರು. ರಾಜ್ಯಸಭೆ, ಪರಿಷತ್ ಚುನಾವಣೆ ಸಂಬಂಧ ಇನ್ನೊಂದು ವಾರದಲ್ಲಿ ಸಭೆ ನಡೆಯಲಿದ್ದು, ನಂತರವಷ್ಟೇ ಅಭ್ಯರ್ಥಿಗಳ ತೀರ್ಮಾನ ಆಗಲಿದೆ. ಈವರೆಗೆ ಪಕ್ಷ ಯಾರನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿಸಿದರು.

ಪ್ರಭಾವವಿಲ್ಲ: 'ರಾಜ್ಯದ ಮೇಲೆ ನಿಸರ್ಗ ಚಂಡಮಾರುತದ ಪ್ರಭಾವ ಕಡಿಮೆ. ಆದಾಗ್ಯೂ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬೆಳಗಾವಿ, ವಿಜಯಪುರ , ಬಾಗಲಕೋಟೆ ಜಿಲ್ಲೆಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ' ಎಂದರು.

ಮಳೆಗಾಲದ ವಿಪತ್ತು ನಿರ್ವಹಣೆಗಾಗಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಈಗಾಗಲೇ ಎನ್‌ಡಿಆರ್‌ಎಫ್‌ ತಂಡಗಳು ಬಂದಿಳಿದಿವೆ. ಧಾರವಾಡ ಹಾಗೂ ಬೆಳಗಾವಿಯೂ ಇನ್ನೆರಡು ತಂಡಗಳು ಬಂದು ಸೇರಲಿವೆ ಎಂದು ಮಾಹಿತಿ ನೀಡಿದರು. ಉತ್ತರ ಕರ್ನಾಟಕದಲ್ಲಿ ನೆರೆ ಪರಿಹಾರಕ್ಕೆ ತುತ್ತಾದವರಿಗೆ ಸರ್ಕಾರ ₨6180 ಕೋಟಿ ಅನುದಾನ ಹಂಚಿಕೆ ಮಾಡಿದೆ. 1200 ಕೋಟಿ ರೂಪಾಯಿ ಬೆಳೆ ಪರಿಹಾರ ನೀಡಲಾಗಿದೆ. ಮನೆ ನಿರ್ಮಾಣ ಮಾಡಿಕೊಳ್ಳುವವರು ಕಾಮಗಾರಿ ಮುಗಿಸಿದ ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾವಿರ ಕೋಟಿಗೂ ಹೆಚ್ಚು ಹಣವಿದ್ದು, ಅನುದಾನದ ಕೊರತೆ ಇಲ್ಲ. ಈ ಬಗ್ಗೆ ಎಲ್ಲ ಸಂತ್ರಸ್ಥರಿಗೂ ಪತ್ರ ಬರೆದು ಮನವಿ ಮಾಡುತ್ತೇವೆ ಎಂದರು.

ಈ ತಿಂಗಳ 8ರ ನಂತರ ರಾಜ್ಯದಲ್ಲಿನ ಶೇ 90ರಷ್ಟು ಆರ್ಥಿಕ ಚಟುವಟಿಕೆಗಳು ಪುನರಾರಂಭ ಆಗಲಿವೆ. ಸರ್ಕಾರ ಕೋವಿಡ್ ಜೊತೆಜೊತೆಗೇ ಹೋಗಲಿದೆ. ಪರಿಸ್ಥಿತಿ ನಿಭಾಯಿಸುವಷ್ಟು ಆರ್ಥಿಕವಾಗಿ ಸಮರ್ಥರಿದ್ದೇವೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು