ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ. ಬ್ಯಾಡರಹಳ್ಳಿ ಗ್ರಾ ಪಂ. ಅಧ್ಯಕ್ಷ ಸ್ಥಾನ: ಅವಿಶ್ವಾಸ ಮಂಡನೆ ಸಭೆ ರದ್ದು

ಜೆ. ಬ್ಯಾಡರಹಳ್ಳಿ ಗ್ರಾ ಪಂ. ಅಧ್ಯಕ್ಷ ಸ್ಥಾನ: ಸಭೆಗೆ ಸದಸ್ಯರು ಗೈರುಹಾಜರಿ
Last Updated 29 ಜೂನ್ 2022, 3:13 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಜೆ. ಬ್ಯಾಡರಹಳ್ಳಿ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಮಂಗಳವಾರ ನಿಗದಿಯಾಗಿದ್ದ ಅವಿಶ್ವಾಸ ಗೊತ್ತುವಳಿ ಸಭೆಯು ಸದಸ್ಯರ ಗೈರುಹಾಜರಿ ಹಿನ್ನೆಲೆಯಲ್ಲಿ ರದ್ದಾಯಿತು.

ಬಿಜೆಪಿ ಬೆಂಬಲಿತಅಧ್ಯಕ್ಷ ರಾಮಚಂದ್ರು ವಿರುದ್ಧ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಗ್ಗೂಡಿ ಅವಿಶ್ವಾಸ ನಿರ್ಣಯಕ್ಕೆ ಗೊತ್ತುವಳಿ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ಮಂಜುನಾಥ್ ಸಭೆ ನಿಗದಿ ಮಾಡಿದ್ದರು.

16 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಅವಿಶ್ವಾಸ ಮಂಡನೆ ಸಭೆಗೆ ಯಾವೊಬ್ಬ ಸದಸ್ಯರೂ ಹಾಜರಾಗದ ಕಾರಣ ಸಭೆಯನ್ನು ರದ್ದು ಮಾಡಿರುವುದಾಗಿ ಉಪ ವಿಭಾಗಾಧಿಕಾರಿ ಮಂಜುನಾಥ್ ಘೋಷಿಸಿದರು.

ಅವಿಶ್ವಾಸ ಮಂಡನೆಗೆ ಜಯ ದೊರೆಯಲು ಮೂರನೇ ಎರಡು ಭಾಗದಷ್ಟು ಅಂದರೆ 11 ಸದಸ್ಯರು ಹಾಜರಾಗಬೇಕಿತ್ತು. ಸದಸ್ಯರಿಗೆ ನೀಡಿದ್ದ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಂತೆ ಬೆಳಿಗ್ಗೆ 11 ಗಂಟೆಗೆಸಭೆ ಆರಂಭವಾಗಬೇಕಿತ್ತು. ಯಾವೊಬ್ಬ ಸದಸ್ಯರು ಸಭೆಗೆ ಹಾಜರಾಗದ ಕಾರಣ 30 ನಿಮಿಷಗಳ ಕಾಲ ಹೆಚ್ಚುವರಿಯಾಗಿ ಸಮಯಾವಕಾಶ ನೀಡಿ ಸದಸ್ಯರಿಗಾಗಿ ನಿರೀಕ್ಷಿಸಲಾಯಿತು. ಆದರೂ, ಅವರು ಸಭೆಗೆ ಬಾರದ ಕಾರಣ ಸಭೆಯನ್ನು ರದ್ದು ಮಾಡಿ ನೋಟಿಸ್ ಸಹ ರದ್ದಾಗಿರುವುದಾಗಿ ಘೋಷಿಸಿದರು.

ರಾಜೀನಾಮೆ ನೀಡಿ ವಾಪಸ್ ಪಡೆದಿದ್ದ ಅಧ್ಯಕ್ಷ: ಅಧ್ಯಕ್ಷರ ವಿರುದ್ಧ ಕೆಲವು ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಕಾರಣ ಅಧ್ಯಕ್ಷ ರಾಮಚಂದ್ರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ 10 ದಿನದಲ್ಲಿ ರಾಜೀನಾಮೆ ವಾಪಸ್ ಪಡೆದಿದ್ದರು. ಹಾಗಾಗಿ ಅವಿಶ್ವಾಸ ಗೊತ್ತುವಳಿ ಸಭೆ ನಿಗದಿಯಾಗಿತ್ತು.

ಅಪಹರಣ ಪ್ರಹಸನ, ಪ್ರತಿಭಟನೆ: ಅವಿಶ್ವಾಸ ಗೊತ್ತುವಳಿ ಸಭೆ ನಿಗದಿಯಾದ ನಂತರ ಸದಸ್ಯೆಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಹುತೇಕ ಸದಸ್ಯರು ಆಪರೇಷನ್ ಭೀತಿಯಿಂದ ಒಟ್ಟಾಗಿ ಪ್ರವಾಸಕ್ಕೆ ತೆರಳಿದ್ದರು. ಈ ಮಧ್ಯೆ ಪ್ರವಾಸಕ್ಕೆ ಹೋಗದೆ ಗ್ರಾಮದಲ್ಲಿಯೇ ಉಳಿದಿದ್ದ ಸದಸ್ಯೆ ಮುನಿವೆಂಕಟಮ್ಮ ಅವರನ್ನು ಅಧ್ಯಕ್ಷ ರಾಮಚಂದ್ರು ಅಪಹರಣ ಮಾಡಿದ್ದಾರೆ. ಅವಿಶ್ವಾಸ ಗೊತ್ತುವಳಿ ಸಭೆಯನ್ನು ಮುಂದೂಡಬೇಕು ಎಂದು ಉಪ ವಿಭಾಗಾಧಿಕಾರಿ ಕಚೇರಿ ಎದುರು ಕೆಲವು ಸದಸ್ಯರು ಸೋಮವಾರ ಪ್ರತಿಭಟನೆ
ನಡೆಸಿದ್ದರು.

‘ಸಭೆ ಮುಂದೂಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಸದಸ್ಯೆಯ ಅಪಹರಣದ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಭೆಗೂ ಅದಕ್ಕೂ ಸಂಬಂಧವಿಲ್ಲ. ಎಫ್.ಐ.ಆರ್ ದಾಖಲಾದ ತಕ್ಷಣ ಆರೋಪ ಸಾಬೀತಾಗುವುದಿಲ್ಲ. ಎಫ್.ಐ.ಆರ್. ಅನ್ನು ಪರಿಗಣಿಸಿ ಸಭೆ ಮುಂದೂಡಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾವುದೇ ಸದಸ್ಯರು ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಪಡಿಸಲಾಗಿದೆ’ ಎಂದು ಉಪ ವಿಭಾಗಾಧಿಕಾರಿ ಮಂಜುನಾಥ್ ತಿಳಿಸಿದರು.

ತಹಶೀಲ್ದಾರ್ ಹರ್ಷವರ್ಧನ್, ಅವಿಶ್ವಾಸ ಗೊತ್ತುವಳಿ ಸದಸ್ಯರ ಪರ ವಕೀಲ ಚಾಂದ್ ಪಾಷ ಇದ್ದರು. ಗ್ರಾ.ಪಂ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ನಾಲ್ವರು ಸಬ್ ಇನ್‌ಸ್ಪೆಕ್ಟರ್‌ಗಳು, 8 ಎಎಸ್‌ಐಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT