ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ | ಉಪ ಚುನಾವಣೆ: ಯೋಗೇಶ್ವರ್‌ಗೆ ಟಿಕೆಟ್ ನೀಡಲು ಮುಖಂಡರ ಒತ್ತಾಯ

ಉಪ ಚುನಾವಣೆ: ಬಿಜೆಪಿ ಜನಪ್ರತಿನಿಧಿಗಳಿಂದ ಸ್ಥಳೀಯರ ಅಭಿಪ್ರಾಯ ಸಂಗ್ರಹ
Published 11 ಜುಲೈ 2024, 15:54 IST
Last Updated 11 ಜುಲೈ 2024, 15:54 IST
ಅಕ್ಷರ ಗಾತ್ರ

ಚನ್ನಪಟ್ಟಣ: ಮುಂಬರುವ ಉಪ ಚುನಾವಣೆಗೆ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೇ ಟಿಕೆಟ್ ಕೊಡಬೇಕು ಎಂದು ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಒತ್ತಾಯಿಸಿದರು.

ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ತಾಲ್ಲೂಕಿ ಮತ್ತಿಕೆರೆಯ ಹೋಟೆಲ್‌ನಲ್ಲಿ ಉಪ ಚುನಾವಣೆ ಉಸ್ತುವಾರಿಗಳಾದ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ಪಕ್ಷದ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಸಂಸದ ಡಾ. ಸಿ.ಎನ್. ಮಂಜುನಾಥ್, ರೈತ ಮೋರ್ಚಾ ಉಪಾಧ್ಯಕ್ಷ ಎಂ. ರುದ್ರೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು.

‘ಕ್ಷೇತ್ರದ ಗೆಲುವು ಮೈತ್ರಿಕೂಟಕ್ಕೆ ಪ್ರತಿಷ್ಠೆಯಾಗಿದೆ. ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿ, ಜನಸ್ಪಂದನ ಕಾರ್ಯಕ್ರಮದ ಹೆಸರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅವರನ್ನು ಎದುರಿಸಲು ಸ್ಥಳೀಯ ಪ್ರಬಲ ರಾಜಕಾರಣಿ ಯೋಗೇಶ್ವರ್ ಅವರಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬರಿಲ್ಲ’ ಎಂದು ಸಭೆಯಲ್ಲಿದ್ದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿರುವ ಯೋಗೇಶ್ವರ್ ಅವರು, ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವುದು, ನೀರಾವರಿ ಯೋಜನೆಗಳ ಜಾರಿ ಸೇರಿದಂತೆ ಹಲವು ಜನಪರ ಕಾರ್ಯಗಳ ಮೂಲಕ ಹೆಸರಾಗಿದ್ದಾರೆ. ಸ್ಥಳೀಯವಾಗಿ ತಮ್ಮದೇ ರಾಜಕೀಯ ಹಿಡಿತ ಹೊಂದಿರುವ ಅವರನ್ನೇ ಅಭ್ಯರ್ಥಿಯಾಗಿಸುವುದರಿಂದ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದು. ಹಾಗಾಗಿ, ಮೈತ್ರಿ ನಾಯಕರು ಅವರ ಹೆಸರನ್ನೇ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಅಭಿಪ್ರಾಯ ಆಲಿಸಿದ ಡಾ.ಸಿ.ಎನ್. ಮಂಜುನಾಥ್, ‘ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯ ಗೆಲುವಷ್ಟೇ ಮುಖ್ಯ. ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

ನಾನೇ ಅಭ್ಯರ್ಥಿಯಾಗಬೇಕೆಂಬುದು ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಒತ್ತಾಸೆಯಾಗಿದೆ. ಈ ಬಗ್ಗೆ ಹಲವರು ನನ್ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕ್ಷೇತ್ರದ ಗೆಲುವಿನ ದೃಷ್ಟಿಯಿಂದ ನನಗೆ ಟಿಕೆಟ್ ಕೊಡಬೇಕು
ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ
ಚನ್ನಪಟ್ಟಣ ಉಪ ಚುನಾವಣೆ ಕುರಿತು ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ, ಇನ್ನು ಮೂರು ದಿನದೊಳಗೆ ಅಭ್ಯರ್ಥಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು
– ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT