ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಗತ ಸ್ವೀಕರಿಸಿದ ನಕಲಿ ಐಎಎಸ್‌; ತಹಶೀಲ್ದಾರ್ ಸಮಯಪ್ರಜ್ಞೆಯಿಂದ ಬಯಲಾಯ್ತು ಬಣ್ಣ

ಚನ್ನಪಟ್ಟಣ
Last Updated 16 ನವೆಂಬರ್ 2019, 8:13 IST
ಅಕ್ಷರ ಗಾತ್ರ

ಚನ್ನಪಟ್ಟಣ: ಐಎಎಸ್ಅಧಿಕಾರಿ ಎಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬರು ತಹಶೀಲ್ದಾರ್ ಅವರ ಸಮಯಪ್ರಜ್ಞೆಯಿಂದ ಶುಕ್ರವಾರ ಪೊಲೀಸರ ಅತಿಥಿಯಾಗಿದ್ದಾರೆ.

ಮಹಮ್ಮದ್ ಸಲ್ಮಾನ್ (37) ಬಂಧಿತ ವ್ಯಕ್ತಿ. ಇನೋವಾ ಕಾರಿನಲ್ಲಿ ಕರ್ನಾಟಕ ಸರ್ಕಾರ ಎಂದು ಬೋರ್ಡ್‌ ಹಾಕಿಕೊಂಡು ಜತೆಯಲ್ಲಿ ಅಂಗರಕ್ಷಕರನ್ನು ಕರೆದುಕೊಂಡು ಬಂದಿದ್ದ ಈತ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಸ್ವಾಗತ ಸ್ವೀಕರಿಸಿದ್ದಾಗಿ ತಿಳಿದು ಬಂದಿದೆ.

ಐಎಎಸ್ ಅಧಿಕಾರಿಯೊಬ್ಬರು ಬಂದಿದ್ದಾರೆ ಎಂಬ ವಿಷಯ ತಿಳಿದು ತಹಶೀಲ್ದಾರ್ ಸುದರ್ಶನ್ ಅವರು, ಪ್ರವಾಸಿ ಮಂದಿರಕ್ಕೆ ಬಂದ ಅವರನ್ನು ಭೇಟಿ ಮಾಡಿದ್ದಾರೆ. ಅವರ ಜೊತೆ ಮಾತನಾಡುತ್ತಿದ್ದ ವೇಳೆ ಸುದರ್ಶನ್ ತಮ್ಮ ಇಲಾಖೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಆತ ಮಾಹಿತಿ ಹೇಳಲು ತಡವರಿಸಿದ್ದನ್ನು ನೋಡಿ ಅನುಮಾನಗೊಂಡಿದ್ದಾರೆ. ಆತ ಅಂಗರಕ್ಷಕರ ಜೊತೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದನ್ನು ಗಮನಿಸಿದ ತಹಶೀಲ್ದಾರ್ ಅವರು ಆತನನ್ನು ಹಿಡಿದು ಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಈಗಾಗಲೇ ಹಲವಾರು ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿ ವರ್ಗಕ್ಕೆ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಅಂಗರಕ್ಷಕರನ್ನೂ ಬಂಧಿಸಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT