ಚನ್ನಪಟ್ಟಣ: ಜಿಲ್ಲೆಯ ರೈತರ ಬದುಕಿಗೆ ಆಸರೆಯಾಗಿರುವ ರೇಷ್ಮೆ, ಹಾಲು, ತೆಂಗು ಹಾಗೂ ಕೊಬ್ಬರಿ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಪ್ರತಿಭಟನೆ ನಡೆಸಿದರು.
ಒಂದೆಡೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದರೆ ಇತ್ತ ರೈತರು ಬೆಳೆಯುವ ಕೊಬ್ಬರಿ, ತೆಂಗು, ರೇಷ್ಮೆ, ಹಾಲಿನ ಬೆಲೆ ಕುಸಿತವಾಗುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರ ಹಿತಕಾಯುವ ಬದಲು ಕಾರ್ಪೊರೇಟ್ ಸಂಸ್ಥೆಗಳನ್ನು ಬೆಳೆಸುತ್ತಿವೆ. ಒಂದು ಜತೆ ಚಪ್ಪಲಿಗೆ ದರ ನಿಗದಿ ಮಾಡುವ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಆಣಿಗೆರೆ ಕೆ.ಮಲ್ಲಯ್ಯ ಮಾತನಾಡಿ, ರೈತರು ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ರೈತ ಸಮುದಾಯ ಕೃಷಿಯಿಂದಲೇ ದೂರ ಉಳಿಯುವ ನಿರ್ಧಾರ ಮಾಡುವಂತಾಗಿದೆ. ರೈತರ ಹೆಸರೇಳಿ ಅಧಿಕಾರಕ್ಕೆ ಬರುವ ಜನಪ್ರತಿನಿಧಿಗಳು ರೈತರ ಬಗ್ಗೆ ಗಮನ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ರೈತಸಂಘ ಪ್ರತಿಭಟನೆ ಹಾದಿ ಹಿಡಿದಿದೆ. ಇದಕ್ಕೂ ಬಗ್ಗದಿದ್ದರೆ ವಿಧಾನಸೌಧ ಚಲೊ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಸಿ.ಕೃಷ್ಣಯ್ಯ ಮಾತನಾಡಿ, ರೈತರ ಪಾಲಿಗೆ ಒಂದೆಡೆ ಸರ್ಕಾರಗಳು ಶಾಪವಾದರೆ ಮತ್ತೊಂದೆಡೆ ವರುಣನ ಶಾಪವೂ ಇದೆ. ಮುಂಗಾರು ಮಳೆ ಕೈಕೊಟ್ಟಿದ್ದು, ಬಿತ್ತಿದ ಬೆಳೆಗಳಿಗೂ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದರೆ, ಪಶು ಆಹಾರದ ಬೆಲೆ ಗಗನಕ್ಕೇರಿದೆ. ಹಾಲಿನ ದರ ಇಳಿಕೆಯಿಂದ ಹೈನುಗಾರಿಕೆ ಮಾಡುವುದೇ ಕಷ್ಟವಾಗಿದೆ. ಕೊಡಲೇ ಸರ್ಕಾರ ರೈತರ ಹಿತಕಾಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
ನಗರದ ಗಾಂಧಿಭವನದ ಬಳಿಯಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘದ ಪದಾಧಿಕಾರಿಗಳು ನಂತರ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ತಲುಪಿ ತಹಶೀಲ್ದಾರ್ ಗೆ ಮನವಿ ಪತ್ರ ನೀಡಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮೇಗೌಡ, ಮಹಿಳಾ ಸಂಚಾಲಕಿ ರಮ್ಯಾ ರಾಮಣ್ಣ, ಪದಾಧಿಕಾರಿಗಳಾದ ರಾಮಕೃಷ್ಣಯ್ಯ, ಬೋರೇಗೌಡ, ಕೋದಂಡರಾಮ, ವಿಜಿಕುಮಾರ್, ಮರೀಗೌಡ, ಗುರುಲಿಂಗಯ್ಯ, ಕನ್ನಸಂದ್ರ ರಾಜು, ಹೊನ್ನಾಯ್ಕನಹಳ್ಳಿ ಕೃಷ್ಣಯ್ಯ, ಗೌಡಗೆರೆ ತಿಮ್ಮೇಗೌಡ, ಸುಜೀವನ್ ಕುಮಾರ್, ಮೈಲನಾಯ್ಕನಹಳ್ಳಿ ಮರಿಗೌಡ, ದಶವಾರ ರಾಮಕೃಷ್ಣ, ಬೋರೇಗೌಡ, ವೆಂಕಟೇಶ್, ಶಂಕರೇಗೌಡ, ಪಾಪಣ್ಣ, ಚಂದ್ರೇಗೌಡ, ಅಬ್ಬೂರು ವಿಜಯ್, ಬೇವೂರು ಕುಳ್ಳೇಗೌಡ, ಕೆಲಗೆರೆ ನಾಗಣ್ಣ, ಪಟೇಲರ ರಾಜು, ಬಸವರಾಜು, ಸಿದ್ದರಾಜು, ಗೋಪಾಲ್, ರವಿ, ಜಯಕೃಷ್ಣ, ಹರೂರು ರಮೇಶ್, ಚಂದ್ರಶೇಖರ್, ಶಿಲ್ಪಾ, ರತ್ನಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.