ಬುಧವಾರ, ಜನವರಿ 22, 2020
28 °C

ಸಾತನೂರು: ದೇವಸ್ಥಾನದ ಆವರಣ ಸ್ವಚ್ಛತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾತನೂರು (ಕನಕಪುರ): ‘ಧಾರ್ಮಿಕ ಕೇಂದ್ರಗಳನ್ನು ಸ್ವಚ್ಛಮಾಡುವ ಮೂಲಕ ಸಾರ್ವಜನಿಕವಾಗಿ ಜನ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸುನಿಲ್‌ ತಿಳಿಸಿದರು.

ಇಲ್ಲಿನ ಸಾತನೂರು ಹೋಬಳಿ ಕಂಚನಹಳ್ಳಿ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿ ಮಾತನಾಡಿದರು.

ಸಾಮಾನ್ಯ ಜನರು ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಬಗ್ಗೆ ಪವಿತ್ರ ಭಾವನೆ ಹೊಂದಿರುತ್ತಾರೆ. ಆ ಜಾಗಗಳು ಮಲಿನವಾಗಲು ಬಿಡುವುದಿಲ್ಲ. ಗ್ರಾಮ ಸ್ವಚ್ಛವಾಗಿರಲು ಜನರಲ್ಲಿ ಸ್ವಚ್ಛತೆಯ ಪರಿಕಲ್ಪನೆ ಬರಬೇಕು. ಅದಕ್ಕಾಗಿ ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದಾರೆ ಎಂದರು.

ಮಕರ ಸಂಕ್ರಾಂತಿ ವೇಳೆ ದೇವಾಲಯಗಳ ಸ್ವಚ್ಛತೆ ನಡೆಸಲು ಜ. 7 ರಿಂದ 13ರ ವರೆಗೂ ಸ್ವಚ್ಛತಾ ಸಪ್ತಾಹ ನಡೆಯಲಿದೆ. ರಾಜ್ಯದ ವಿವಿಧೆಡೆ ಇಲ್ಲಿಯವರೆಗೆ 9,037 ಶ್ರದ್ಧಾ ಕೇಂದ್ರಗಳನ್ನು ಗುರುತಿಸಿದ್ದು 2,99,863 ಸ್ವಯಂಸೇವಕರು ಈ ಸಪ್ತಾಹದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ದೇವಾಲಯದ ಆಡಳಿತ ಮಂಡಳಿ, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಗಣ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು ಕೈ ಜೋಡಿಸಿದ್ದಾರೆ ಎಂದರು.

ದೇವಸ್ಥಾನ, ಕಲ್ಯಾಣಿ, ಸಭಾಭವನ, ಅಶ್ವತ್ಥಕಟ್ಟೆ, ಸ್ನಾನಕಟ್ಟೆ, ನದಿ ತೀರಗಳು, ಮಸೀದಿಗಳು, ಚರ್ಚ್‌ಗಳು, ಬಸದಿಗಳು, ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ನಡೆಯಲಿದೆ. ಜಾತ್ರೆ, ವಿಶೇಷ ದಿನಗಳಲ್ಲಿ ವಿಶೇಷ ತಂಡ ರಚಿಸಿ ಸ್ವಚ್ಛಗೊಳಿಸಲಾಗುವುದು. ಪ್ಲಾಸ್ಟಿಕ್‌ ಬಳಸದಂತೆ ಹಾಗೂ ಬಟ್ಟೆ ಕೈ ಚೀಲವನ್ನು ಬಳಸುವಂತೆ ಜನ ಜಾಗೃತಿ ಮೂಡಿಸಲಾಗುವುದು ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು