ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹60.87 ಲಕ್ಷ ಉಳಿತಾಯ ಬಜೆಟ್

ರಾಮನಗರ ನಗರಸಭೆ: ನೀರಿನ ಸೌಲಭ್ಯ, ರಸ್ತೆ, ಒಳಚರಂಡಿ, ಘನತ್ಯಾಜ್ಯ ನಿರ್ವಹಣೆಗೆ ಒತ್ತು
Published 7 ಮಾರ್ಚ್ 2024, 6:23 IST
Last Updated 7 ಮಾರ್ಚ್ 2024, 6:23 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ನಗರಸಭೆಯಲ್ಲಿ ಬುಧವಾರ 2024–25ನೇ ಸಾಲಿಗೆ ₹60.87 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಯಿತು. ಅಧ್ಯಕ್ಷೆ ವಿಜಯಕುಮಾರಿ, ಪೌರಾಯುಕ್ತ ಎಲ್. ನಾಗೇಶ್ ಹಾಗೂ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಲೆಕ್ಕ ಅಧೀಕ್ಷಕ ಶಿವಣ್ಣ ಬಜೆಟ್‌ ಪ್ರತಿಯನ್ನು ಓದಿದರು.

ಕೆಲ ಅಂಶಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷದವರು ಆಕ್ಷೇಪದ ಜೊತೆಗೆ, ಪರ–ವಿರೋಧದ ಚರ್ಚೆ ನಡೆಸಿದರು. ಕಡೆಗೆ ಸರ್ವ ಸದಸ್ಯರು ಬಜೆಟ್‌ಗೆ ಅನುಮೋದನೆ ನೀಡಿದರು.

ಆಯವ್ಯಯದ ಆರಂಭ ಶಿಲ್ಕು ₹ 7.70 ಕೋಟಿ ಇದ್ದು, ₹ 66.43 ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ. ಒಟ್ಟು ಜಮಾ ₹ 74.13 ಕೋಟಿ ಇದ್ದು, ಒಟ್ಟು ವೆಚ್ಚ ₹ 73.52 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15ನೇ ಹಣಕಾಸು ಅನುದಾನ ₹ 4.40 ಕೋಟಿ ಬರಬಹುದೆಂದ ನಿರೀಕ್ಷಿಸಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುವ ಜೊತೆಗೆ, ನಗರದಲ್ಲಿ ಹದಗೆಟ್ಟಿರುವ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ರಸ್ತೆ, ಚರಂಡಿಗೆ ₹ 82 ಕೋಟಿ: ಕೇಂದ್ರ ಸರ್ಕಾರ ಪುರಸ್ಕೃತ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯ (ಯುಐಡಿಎಫ್‌) ₹82 ಕೋಟಿ ಅನುದಾನವನ್ನು ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ನಿರೀಕ್ಷಿಸಲಾಗಿದೆ.

ಈ ಮೊತ್ತದಲ್ಲಿ ನಗರದಲ್ಲಿ 24X7 ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ಹಲವು ವರ್ಷಗಳಿಂದ ದುರಸ್ತಿಯಾಗದೆ ಹಗದೆಟ್ಟಿರುವ ರಸ್ತೆಗಳ ಅಭಿವೃದ್ಧಿ ಜೊತೆಗೆ, ನಗರದಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸಲು ಈ ಅನುದಾನ ಬಳಸಲು ಉದ್ದೇಶಿಸಲಾಗಿದೆ.

ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಎಸ್‌.ಎಫ್‌.ಸಿ ವಿಶೇಷ ಅನುದಾನದಡಿ ಕೇವಲ ₹ 5.42 ಕೋಟಿ ಹಣ ನಿರೀಕ್ಷಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ, ಪೈಪ್‌ಲೈನ್ ಕಾಮಗಾರಿ, ಕೊಳವೆಬಾವಿ ಹಾಗೂ ಇತರ ಕಾಮಗಾರಿಗಳಿಗೆ ₹2.50 ಕೋಟಿ ಮೀಸಲಿಡಲಾಗಿದೆ.

‘ಆಸ್ತಿ’ಯಿಂದ ₹ 7.80 ಕೋಟಿ: ಪ್ರಮುಖ ಆದಾಯ ಮೂಲವಾದ ಆಸ್ತಿ ತೆರಿಗೆಯಿಂದ ₹ 7.80 ಕೋಟಿ ಬರಬಹುದೆಂದ ನಿರೀಕ್ಷಿಸಲಾಗಿದೆ. ಖಾತಾ ವರ್ಗಾವಣೆ, ಖಾತಾ ನಕಲು ಹಾಗೂ ಇತರ ಆದಾಯ ಮೂಲಗಳಿಂದ ₹ 20.75 ಲಕ್ಷ ಹಾಗೂ ನೂತನ ಬಡಾವಣೆಗಳ ಅಭಿವೃದ್ಧಿ ಶುಲ್ಕ ₹ 45 ಲಕ್ಷ ಬರಬಹುದೆಂದು ಅಂದಾಜಿಸಲಾಗಿದೆ.

ಆಸ್ತಿ ತೆರಿಗೆ, ಕಟ್ಟಡ, ಉದ್ದಿಮೆ ಪರವಾನಗಿ ಹಾಗೂ ಇತರ ಶುಲ್ಕಗಳ ಪಾವತಿಸಲು ಹಳೆಯ ನಗದು ಸ್ವೀಕಾರ ವ್ಯವಸ್ಥೆಗೆ ಬದಲಾಗಿ
‘ಇ–ಸ್ವೀಕೃತಿ’ ವ್ಯವಸ್ಥೆ ಬಂದಿದೆ. ಜೊತೆಗೆ ನಾಗರಿಕರು ಬಿಬಿಪಿಎಸ್ ಚಲನ್‌ಗಳನ್ನು ಸೃಜಿಸಿ ಗೂಗಲ್, ಫೋನ್‌ಪೇ ಸೇರಿದಂತೆ ಇತರ ಆ್ಯಪ್‌ಗಳಲ್ಲೂ ಪಾವತಿಸಬಹುದಾಗಿದೆ.

ಘನತ್ಯಾಜ್ಯ ನಿರ್ವಹಣೆಗಾಗಿ ಅಗತ್ಯ ವಾಹನಗಳ ಖರೀದಿ, ತ್ಯಾಜ್ಯ ವಿಲೇವಾರಿಗೆ ಹರಿಸಂದ್ರದ 9 ಎಕರೆ ಜಾಗದಲ್ಲಿ ಘಟಕ ನಿರ್ಮಾಣ, ಪಾರಂಪರಿಕ ತ್ಯಾಜ್ಯವನ್ನು ಬಯೋ ರೆಮಿಡಿಯೇಷನ್ ಮಾಡಲು ₹ 94.42 ಲಕ್ಷದ ಟೆಂಡರ್‌ ಹಾಗೂ 22 ಟನ್ ಸಾಮರ್ಥ್ಯದ ಎಂ.ಆರ್.ಎಫ್ (ಮೆಟಿರಿಯಲ್ ರಿಕವರಿ ಫೆಸಿಲಿಟಿ) ಘಟಕ ಸ್ಥಾಪನೆ ಅಂಶಗಳು ಬಜೆಟ್‌ನಲ್ಲಿ ಪ್ರಸ್ತಾಪವಾಗಿವೆ.

ಬಜೆಟ್‌ ಕುರಿತು ಅಧ್ಯಕ್ಷೆ ವಿಜಯಕುಮಾರಿ ತುಟಿ ಬಿಚ್ಚಲಿಲ್ಲ. ನಗರಸಭೆ ಉಪಾಧ್ಯಕ್ಷ ಸೋಮಶೇಖರ್ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತ್‌ಉಲ್ಲಾ ಖಾನ್ ಹಾಗೂ ಸದಸ್ಯರು ಇದ್ದರು.

ರಾಮನಗರದ ನಗರಸಭೆಯಲ್ಲಿ 2024–25ನೇ ಸಾಲಿನ ಬಜೆಟ್ ಕುರಿತ ಚರ್ಚೆಯಲ್ಲಿ ಸದಸ್ಯ ಮಂಜುನಾಥ್ ಕೆ. ಶೇಷಾದ್ರಿ ಶಶಿ ಹಾಗೂ ಪಾರ್ವತಮ್ಮ ಮಾತನಾಡಿದರು
ರಾಮನಗರದ ನಗರಸಭೆಯಲ್ಲಿ 2024–25ನೇ ಸಾಲಿನ ಬಜೆಟ್ ಕುರಿತ ಚರ್ಚೆಯಲ್ಲಿ ಸದಸ್ಯ ಮಂಜುನಾಥ್ ಕೆ. ಶೇಷಾದ್ರಿ ಶಶಿ ಹಾಗೂ ಪಾರ್ವತಮ್ಮ ಮಾತನಾಡಿದರು

‘ಸದಸ್ಯರಿಗೆ ಕ್ಯಾರೇ ಎನ್ನದ ಅಧಿಕಾರಿಗಳು’

‘ಅಧಿಕಾರಿಗಳು ಸದಸ್ಯರ ಕರೆ ಸ್ವೀಕರಿಸುವುದಿಲ್ಲ. ನಮಗೆ ಬೆಲೆ ಇಲ್ಲವಾಗಿದೆ. ಜನಸೇವಕ ಅಧಿಕಾರಿಗಳೇ ಜನಪ್ರತಿನಿಧಿಗಳಿಗೆ ಕ್ಯಾರೇ ಎನ್ನುತ್ತಿಲ್ಲ’ ಎಂದು ಸದಸ್ಯೆ ಪಾರ್ವತಮ್ಮ ಸೇರಿದಂತೆ ಕೆಲ ಸದಸ್ಯರು ಅಳಲು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಎಲ್. ನಾಗೇಶ್ ‘ಜನಪ್ರತಿನಿಧಿಗಳು ಮತ್ತು ನಾಗರಿಕರು ಕರೆ ಮಾಡಿದರೆ ಸ್ವೀಕರಿಸಬೇಕು. ಕಚೇರಿಗೆ ಬಂದಾಗ ಕೂರಿಸಿ ಮಾತನಾಡಬೇಕು ಎಂದು ಕಟ್ಟಿನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದರು. ‘ಲೇಔಟ್‌ಗಳಲ್ಲಿ ಸೌಕರ್ಯ ಕೊರತೆ’ ‘ಹೊಸದಾಗಿ ನಿರ್ಮಾಣವಾಗುತ್ತಿರುವ ಲೇಔಟ್‌ಗಳಲ್ಲಿ ಮೂಲಸೌಕರ್ಯ ಕೊರತೆ ಹೆಚ್ಚಾಗಿದೆ. ನಗರದಲ್ಲಿ ಇಂತಹ 15–20 ಬಡಾವಣೆಗಳಿವೆ. ಮೂಲಸೌಕರ್ಯ ಖಚಿತಪಡಿಸಿಕೊಂಡೇ ಅವುಗಳಿಗೆ ಅನುಮತಿ ಕೊಡಬೇಕು. ಖಾತೆ ಮಾಡಿಕೊಡುವುದಕ್ಕೆ ಮುಂಚೆ ಸೌಕರ್ಯಗಳ ಕುರಿತು ಸಭೆ ಗಮನಕ್ಕೆ ತರಬೇಕು’ ಎಂದು ಸದಸ್ಯ ಕೆ. ಶೇಷಾದ್ರಿ ಶಶಿ ಹೇಳಿದರು. ಅದಕ್ಕೆ ಇತರ ಸದಸ್ಯರು ಸಹ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT