ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ರಸ್ತೆ ಕಾಮಗಾರಿ ಆಮೆಗತಿ: ಪದ್ಮಾ ಮುರುಳಿ

ವಿದ್ಯಾರ್ಥಿಗಳು, ನಾಗರಿಕರ ಸಂಚಾರಕ್ಕೆ ತೊಂದರೆ
Last Updated 3 ಮೇ 2021, 4:03 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಮತ್ತೀಕೆರೆ ಹಾಗೂ ಶೆಟ್ಟಿಹಳ್ಳಿ ಜೋಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಸರ್ವೀಸ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿದೆ ಎಂದು ಮತ್ತೀಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾ ಮುರುಳಿ ಆರೋಪಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮನೆಯವರು, ಜಮೀನು ಸಂತ್ರಸ್ತರು, ಪೋಸ್ಟ್ ಆಫೀಸ್‌ಗೆ ಬರುವ ನಾಗರಿಕರು, ಪಂಚಾಯಿತಿಗೆ, ವಿ.ಎಸ್.ಎನ್.ಎನ್.ಗೆ ಕೆಲಸದ ನಿಮಿತ್ತ ಬರುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹಾಲಿನ ಡೈರಿಗೆ ದಿನನಿತ್ಯ ಎರಡು ಬಾರಿ ಹಾಲು ಹಾಕಲು ಬರುವ ರೈತರಿಗೆ ಕೂಡ ರಸ್ತೆ ದಾಟುವುದು ಕಷ್ಟವಾಗಿದೆ. ಈ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತೆ ಸೇತುವೆ ನಿರ್ಮಾಣ ಮಾಡಲು ಈಗಾಗಲೇ ಹೈಕೋರ್ಟ್ ಆದೇಶವಿದ್ದರೂ ಸೇತುವೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಈ ಗುಂಡಿಯಲ್ಲಿ ಮಳೆ ಬಂದಾಗ ನೀರು ತುಂಬಿಕೊಂಡಿದೆ. ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರು ರಸ್ತೆ ದಾಟುವಾಗ ಹಲವಾರು ಸಂದರ್ಭದಲ್ಲಿ ಬಿದ್ದು ಗಾಯಗಳಾಗಿರುವ ಘಟನೆಗಳು ಸಂಭವಿಸಿದೆ. ಈ ಬೇಜವಾಬ್ದಾರಿ ನಡೆಗೆ ಗ್ರಾಮಸ್ಥರು ಪ್ರತಿಭಟನೆ ಮಾಡುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಾಗೆಯೇ ಹೆದ್ದಾರಿಯ ಮಧ್ಯ ನಿರ್ಮಾಣ ಮಾಡುತ್ತಿರುವ ಕೆಳಸೇತುವೆ ಗ್ರಾಮದಿಂದ ಸಾಕಷ್ಟು ದೂರದಲ್ಲಿದೆ. ಇದು ಅವೈಜ್ಞಾನಿಕವಾಗಿದೆ. ಈ ಸೇತುವೆ ವಿಚಾರವಾಗಿ ಗ್ರಾಮಸ್ಥರು ಎರಡು ಬಾರಿ ಪ್ರತಿಭಟನೆ ಮಾಡಿದ್ದಾರೆ. ಗ್ರಾಮದಲ್ಲಿ ಆದರ್ಶ ಶಾಲೆ ಸೇರಿದಂತೆ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಇದೆ. ಮಕ್ಕಳು ಶಾಲಾ, ಕಾಲೇಜಿಗೆ ತೆರಳಲು ತೊಂದರೆ ಆಗದಂತೆ ಕ್ರಮವಹಿಸಲು ಒತ್ತಾಯಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿಲ್ಲ. ಮುಂದಾದರೂ ಈ ಬಗ್ಗೆ ಕ್ರಮವಹಿಸಬೇಕು ಎಂದು
ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT