ಸೋಮವಾರ, ಆಗಸ್ಟ್ 2, 2021
28 °C
22 ಮಂದಿಗೆ ಕ್ವಾರಂಟೈನ್: ರಾಮನಗರದ ಜನರಲ್ಲಿ ಆತಂಕ

ಸೀ‌ಲ್‌ಡೌನ್‌ ಆಯ್ತು ಕುಂಬಾರ ಬೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ವ್ಯಕ್ತಿಯೊಬ್ಬರಿಗೆ ಕೋವಿಡ್‌-19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ಕುಂಬಾರ ಬೀದಿಯನ್ನು ಪೂರ್ಣ ಸೀಲ್‌ಡೌನ್ ಆಗಿದೆ. ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ 22 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಕುಂಬಾರ ಬೀದಿಯ 57 ವರ್ಷದ ಈ ನಿವಾಸಿ ಬೆಂಗಳೂರಿನ ಸುಲ್ತಾನ್‌ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಲಾಕ್‌ಡೌನ್ ಬಳಿಕ ಪಾದರಾಯನಪುರದ ಪಕ್ಕದಲ್ಲೇ ಇರುವ ಸುಲ್ತಾನ್‌ಪೇಟೆಗೂ ಹೋಗಿ ಬಂದಿದ್ದರು. ಅಲ್ಲಿಂದ ಬಂದರೇ ಕೂಟಗಲ್‌ ಬಳಿಯ ಹಳ್ಳಿಯೊಂದಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಆರೋಗ್ಯ ಇಲಾಖೆ ಕ್ವಾರಂಟೈನ್‌ ಮಾಡಿದೆ. ಜತೆಗೆ ಅವರ ಪ್ರಯಾಣದ ಹಿನ್ನೆಲೆಯ ಇನ್ನಷ್ಟು ವಿವರ ಪಡೆಯಲಾಗುತ್ತಿದ್ದು, ಮತ್ತಷ್ಟು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.

ಕುಂಬಾರಬೀದಿ ಹಾಗೂ ಸುತ್ತಲಿನ ಪ್ರದೇಶವನ್ನು ಸದ್ಯ ಜಿಲ್ಲಾಡಳಿತ ಕಂಟೈನ್‌ಮೆಂಟ್ ವಲಯ ಎಂದು ಘೋಷಣೆ ಮಾಡಿದೆ. ಇಲ್ಲಿ ಸುಮಾರು 60 ಮನೆಗಳಿದ್ದು, 115 ಹೆಚ್ಚು ಅಂಗಡಿ ಮಳಿಗೆಗಳು ಇವೆ. 230 ಮಂದಿ ವಾಸವಿದ್ದಾರೆ. ಪೂರ್ವದಲ್ಲಿ ಶೆಟ್ಟಿಹಳ್ಳಿ ಬೀದಿ, ಪಶ್ಚಿಮದಲ್ಲಿ ಎಂ.ಜಿ.ರಸ್ತೆ, ಉತ್ತರದಲ್ಲಿ ಕಲಾಸಿಪಾಳ್ಯ ಹಾಗೂ ದಕ್ಷಿಣದಲ್ಲಿ ಮದರ್‌ಖಾನ್‌ ಮೊಹಲ್ಲಾದವರೆಗಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದ್ದು, ಇಲ್ಲಿನ ನಿವಾಸಿಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ವ್ಯಕ್ತಿಗೆ ಸೋಂಕು ಹರಿಡಿರುವುದು ಖಾತ್ರಿಯಾಗುತ್ತಿದ್ದಂತೆ ಈ ಪ್ರದೇಶದ ಜನರು ಸೋಮವಾರ ರಾತ್ರಿ ತಾವೇ ನಿರ್ಬಂಧ ವಿಧಿಸಿಕೊಂಡಿದ್ದು, ಅನ್ಯರು ಇಲ್ಲಿಗೆ ಬರದಂತೆ ನಿಷೇಧ ಹೇರಲಾಗಿದೆ. ಇಲ್ಲಿನ ವ್ಯಾಪಾರ ವಹಿವಾಟಿಗೂ ಅಡಚಣೆ ಆಗಿದೆ. ನಗರಸಭೆ ಸಿಬ್ಬಂದಿ ಈಗಾಗಲೇ ಇಡೀ ಪ್ರದೇಶವದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಿದ್ದಾರೆ. ಇದಲ್ಲದೆ ಶೆಟ್ಟಿಹಳ್ಳಿ ಬೀದಿಯನ್ನು ಜಿಲ್ಲಾಡಳಿತ ಬಫರ್‍ ವಲಯ ಎಂದು ಘೋಷಿಸಿದೆ.

ಬಸ್‌ ಪ್ರಯಾಣ: ಸೋಂಕಿತ ವ್ಯಕ್ತಿ ರಾಮನಗರದಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದರು. ಸುಲ್ತಾನ್‌ಪೇಟೆಯಲ್ಲಿಯೇ ಅವರಿಗೆ ಸೋಂಕು ತಗುಲಿತ್ತೇ ಇಲ್ಲವೇ ಬಸ್‌ ಪ್ರಯಾಣದ ವೇಳೆ ಸೋಂಕು ತಗುಲಿರಬಹುದೇ ಎಂದು ಪರೀಕ್ಷಿಸಲಾಗುತ್ತಿದೆ. ಈ ಹಿಂದೆ ಮಾಗಡಿ ಬಸ್‌ ಡಿಪೊದ ಸಿಬ್ಬಂದಿಯೊಬ್ಬರಿಗೂ ಸೋಂಕು ತಗುಲಿದ್ದು, ಬಸ್‌ ಪ್ರಯಾಣದ ಬಗ್ಗೆಯೂ ಜನರು ಆತಂಕಗೊಂಡಿದ್ದಾರೆ.

ಸಿಬ್ಬಂದಿಗಿಲ್ಲ ಪಿಪಿಇ ಕಿಟ್‌: ಸೀಲ್‌ಡೌನ್‌ಗೆ ಒಳಪಟ್ಟಿರುವ ಪ್ರದೇಶವನ್ನು ಸದ್ಯ ನಗರಸಭೆ ಸಿಬ್ಬಂದಿ, ಪೊಲೀಸರು ಕಾಯುತ್ತಿದ್ದಾರೆ. ಆದರೆ, ಈ ಸಿಬ್ಬಂದಿಯ ರಕ್ಷಣೆಗೆ ಅವಶ್ಯವಾದ ಪಿಪಿಇ ಕಿಟ್ ಸೇರಿದಂತೆ ಅಗತ್ಯ ಪರಿಕರಗಳನ್ನು ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.