ಮಂಗಳವಾರ, ಜುಲೈ 14, 2020
25 °C
ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡದ ಕೋವಿಡ್‌ ಪ್ರಯೋಗಾಲಯ

ರಾಮನಗರ ‌| ಪರೀಕ್ಷಾ ವರದಿ ವಿಳಂಬ: ಶಂಕಿತರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೋವಿಡ್‌-19 ಪ್ರಯೋಗಾಲಯ ಪರೀಕ್ಷೆ ವರದಿಗಳು ಬರುವುದು ತಡವಾಗುತ್ತಿದ್ದು, ಪರೀಕ್ಷೆಗೆ ಒಳಗಾದವರ ಎದೆ ಬಡಿತ ಹೆಚ್ಚಿಸಿದೆ. ಕ್ವಾರಂಟೈನ್‌ ವಾಸಿಗಳಿಗೂ ಇದರಿಂದ ತೊಂದರೆ ಆಗುತ್ತಿದೆ.

ಈವರೆಗೂ ಬೆಂಗಳೂರು ಪ್ರಯೋಗಾಲಯಗಳಿಗೆ ಇಲ್ಲಿನ ಜನರ ಗಂಟಲ ದ್ರವದ ಮಾದರಿಗಳನ್ನು ಕಳುಹಿಸಿ ಪರೀಕ್ಷಿಸಲಾಗುತ್ತಿದೆ. ಆರಂಭದ ದಿನಗಳಲ್ಲಿ ಎರಡು ದಿನಕ್ಕೆಲ್ಲ ಸಿಗುತ್ತಿದ್ದ ವರದಿ ಈಗ ನಾಲ್ಕೈದು ದಿನವಾದರೂ ಬರುತ್ತಿಲ್ಲ. ಇದರಿಂದಾಗಿ ಪರೀಕ್ಷೆಗೆ ಒಳಗಾದ ಮಂದಿ ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುತ್ತಿದ್ದಾರೆ. ಸೋಂಕಿತರನ್ನು ಶೀಘ್ರವಾಗಿ ಗುರುತಿಸಿ ಚಿಕಿತ್ಸೆ ನೀಡುವ ಕಾರ್ಯಕ್ಕೂ ಹಿನ್ನೆಡೆಯಾಗಿದ್ದು, ಅವರಿಂದ ಇನ್ನಷ್ಟು ಮಂದಿಗೆ ವೈರಸ್‌ ಹರಡುವ ಸಾಧ್ಯತೆಯೂ ಇದೆ.

ಯಾಕೆ ವಿಳಂಬ: ಬೆಂಗಳೂರಿನ ಆರಕ್ಕೂ ಹೆಚ್ಚು ಸರ್ಕಾರಿ ಪ್ರಯೋಗಾಲಯಗಳಲ್ಲಿ ಜನರ ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆಸಿ ವರದಿ ಕೊಡಲಾಗುತ್ತಿದೆ. ಈಚೆಗೆ ಇಲ್ಲಿನ ಪ್ರಯೋಗಾಲಯ ಸಿಬ್ಬಂದಿಗೇ ಸೋಂಕು ತಗುಲಿದ ಕಾರಣಕ್ಕೆ ವರದಿಗಳು ಬರುವುದು ತಡವಾಗುತ್ತಿದೆ. ಕಳೆದ ಶನಿವಾರ-ಭಾನುವಾರ ಜಿಲ್ಲೆಯ ಒಂದೇ ಒಂದು ಮಾದರಿಯ ವರದಿ ಬಂದಿಲ್ಲ. ಸೋಮವಾರ ಕೇವಲ 36 ಮಂದಿಯ ವರದಿಗಳು ಬಂದಿದ್ದು, ಎಲ್ಲವೂ ನೆಗಟಿವ್‌ ಆಗಿವೆ. ಸೋಮವಾರದ ಅಂತ್ಯಕ್ಕೆ ಬರೋಬ್ಬರಿ 1482 ಮಾದರಿಗಳ ವರದಿ ಬರುವುದು ಬಾಕಿ ಇದೆ.

ಪ್ರಯೋಗಾಲಯ ವಿಳಂಬ: ಜಿಲ್ಲೆಯಲ್ಲಿ ಸಂಗ್ರಹವಾಗುವ ಮಾದರಿಗಳನ್ನು ಇಲ್ಲಿಯೇ ಪರೀಕ್ಷಿಸುವ ಸಲುವಾಗಿ ಸರ್ಕಾರ ಕೋವಿಡ್‌ ಪ್ರಯೋಗಾಲಯ ಆರಂಭಕ್ಕೆ ಅನುಮತಿ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಇದನ್ನು ಉದ್ಘಾಟಿಸಿ ಹೋಗಿ ವಾರವೇ ಕಳೆದಿದೆ. ಆದರೆ ಪ್ರಯೋಗಾಲಯ ಮಾತ್ರ ಇನ್ನೂ ಕಾರ್ಯಾರಂಭ ಮಾಡಿಲ್ಲ.

"ಗಂಟಲ ದ್ರವವನ್ನು ಒಮ್ಮೆಲೆ ನಾಲ್ಕೈದು ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ವರದಿಗಳು ಖರಾರುವಕ್ಕಾಗಿರಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ, ದೆಹಲಿಯ ಐಸಿಎಂಆರ್‌ ಇಲ್ಲಿನ ವ್ಯವಸ್ಥೆ ಎಲ್ಲವನ್ನೂ ಪರೀಕ್ಷಿಸಿದ ಬಳಿಕವಷ್ಟೇ ಅನುಮತಿ ನೀಡುತ್ತದೆ. ಸದ್ಯ ಮೊದಲ ಹಾಗೂ ಎರಡನೇ ಹಂತದ ಪ್ರಾಯೋಗಿಕ ಪರೀಕ್ಷೆಗಳು ನಡೆದಿವೆ. ಅಧಿಕೃತವಾಗಿ ಪ್ರಯೋಗಾಲಯ ಆರಂಭಗೊಳ್ಳಲು ಇನ್ನೂ ಕೆಲವು ದಿನ ಬೇಕು’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್‌.

"ಒಮ್ಮೆ ಪ್ರಯೋಗಾಲಯ ಆರಂಭಗೊಂಡ ಬಳಿಕ ಈ ಸಮಸ್ಯೆ ಬಗೆಹರಿಯಲಿದೆ. ನಿತ್ಯ ಸರಾಸರಿ 250 ವರದಿಗಳನ್ನು ಪರೀಕ್ಷಿಸಬಹುದಾಗಿದೆ. ಇದರಿಂದ ಜಿಲ್ಲೆಯ ಅಷ್ಟೂ ವರದಿಗಳಿಗೆ ಇಲ್ಲಿಯೇ ಫಲಿತಾಂಶ ಸಿಗುತ್ತದೆ’ ಎನ್ನುತ್ತಾರೆ ಅವರು.

ಎರಡು ಸಂಚಾರಿ ಘಟಕ
ಜನರು ಇರುವಲ್ಲಿಗೇ ತೆರಳಿ ಅವರ ಗಂಟಲ ದ್ರವ ಮಾದರಿಗಳನ್ನು ಪಡೆಯುವ ಸಂಚಾರಿ ಬಸ್‌ ಘಟಕಗಳು ಜಿಲ್ಲೆಯಲ್ಲಿವೆ. ಈ ಮೊದಲು ಕೇವಲ ಒಂದು ಘಟಕವಿದ್ದು, ಈಗ ಮತ್ತೊಂದಕ್ಕೆ ಚಾಲನೆ ನೀಡಲಾಗಿದೆ. ಇದಲ್ಲದೆ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆ ಸೇರಿ ನಾಲ್ಕು ಕಡೆ ಗಂಟಲ ದ್ರವ ಮಾದರಿ ಸಂಗ್ರಹ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 9 ಫೀವರ್‍ ಕ್ಲಿನಿಕ್‌ಗಳಿದ್ದು, ಅದನ್ನು ದುಪ್ಪಟ್ಟುಗೊಳಿಸುವ ಪ್ರಯತ್ನ ನಡೆದಿದೆ.

***
ಜಿಲ್ಲಾ ಕೋವಿಡ್‌ ಪ್ರಯೋಗಾಲಯದ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಸದ್ಯದಲ್ಲೇ ಇದು ಕಾರ್ಯಾರಂಭ ಮಾಡಲಿದೆ.
-ಡಾ. ನಿರಂಜನ್‌, ಡಿಎಚ್‌ಒ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು