ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಶ್ರೀರಾಮ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ 2023ರ ಸಾಂಸ್ಕೃತಿಕ ಸಂಭ್ರಮಾಚರಣೆ ನಡೆಯಿತು.
ದುರ್ಗಾ ಪರಮೇಶ್ವರಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಜಾನಪದ ಮತ್ತು ಆಕಾಶವಾಣಿ ಕಲಾವಿದ ಚಿಕ್ಕಮರಿಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾನಪದ ಸಾಹಿತ್ಯವು ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದು, ಮುಂದಿನ ತಲೆಮಾರಿಗೆ ಪರಿಚಯಿಸುವ ಮತ್ತು ಉಳಿಸುವ ಕೆಲಸ ಮಾಡಬೇಕಿದೆ ಎಂದರು.
ವಕೀಲ ಸುರೇಶ ಪ್ರಾಸ್ತವಿಕವಾಗಿ ಮಾತನಾಡಿ, ‘ಸಾಂಸ್ಕೃತಿಕ ಸಾಮಾಜಿಕ ಟ್ರಸ್ಟ್‌ಗಳು ಇಂದು ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿವೆ. ಇದು ಹೀಗೆ ನಿರಂತರವಾಗಲಿ’ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮುನೇಶ್ ತಂಡವು ಪೂಜಾ ಕುಣಿತ, ಮಹದೇವ್ ತಂಡ ಕಂಸಾಳೆ, ನಾಗೇಶ್ ತಂಡ ವೀರಗಾಸೆ, ಕೆಂಚಮಾರಯ್ಯ ತಂಡ ತಮಟೆ ವಾದನ, ರಮೇಶ್, ಶಿವಕುಮಾರ್, ನಾಗರಾಜು ತಂಡಗಳು ವಾದ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.
ಧಮ್ಮ ದೇವಿಗೆ ಜಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ. ಶಿವರಾಂ, ಪಿಡಿಒ ಎನ್.ಎಸ್. ರಘು ಸೇರಿದಂತೆ ಶಾಲೆ ಶಿಕ್ಷಕರು, ಗ್ರಾಮದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.