ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಿದ್ದರೂ ಬತ್ತದ ಜಲಾಶಯಗಳು

ರಾಮನಗರ ಜಿಲ್ಲೆಯ ನಾಲ್ಕು ಅಣೆಕಟ್ಟೆಗಳಲ್ಲೂ ಅಗತ್ಯ ಪ್ರಮಾಣದ ನೀರು ಸಂಗ್ರಹ
Last Updated 13 ಜುಲೈ 2019, 19:30 IST
ಅಕ್ಷರ ಗಾತ್ರ

ರಾಮನಗರ: ಈ ಮುಂಗಾರಿನಲ್ಲಿ ತೀವ್ರ ಮಳೆಯ ಕೊರತೆಯ ನಡುವೆಯೂ ಜಿಲ್ಲೆಯಲ್ಲಿನ ಅಣೆಕಟ್ಟೆಗಳಲ್ಲಿ ತಕ್ಕ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ರೈತರಲ್ಲಿ ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ಮಾಗಡಿ ತಾಲ್ಲೂಕಿನ ಮಂಚನಬೆಲೆ, ಚನ್ನಪಟ್ಟಣ ತಾಲ್ಲೂಕಿನ ಕಣ್ವ, ಇಗ್ಗಲೂರು ಜಲಾಶಯ ಹಾಗೂ ಕನಕಪುರ ತಾಲೂಕಿನ ಹಾರೋಬೆಲೆ ಜಲಾಶಯಗಳು ಇವೆ. ಇವುಗಳಲ್ಲಿ ಭಾಗಶಃ ನೀರಿನ ಸಂಗ್ರಹವಿದೆ.

ಮಾಗಡಿ ತಾಲ್ಲೂಕಿನ ಮಂಚನಬೆಲೆ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಚನಬೆಲೆ ಜಲಾಶಯವು ಮಾಗಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಅಲ್ಲದೆ ನದಿ ಮೂಲಕ ರಾಮನಗರ ತಾಲ್ಲೂಕಿಗೂ ನೀರು ಹರಿಯುತ್ತಿದೆ. ರಾಮನಗರ ನಗರಸಭೆಯ ಕೆಲವು ವಾರ್ಡುಗಳಿಗೂ ಇದೇ ನದಿ ನೀರನ್ನು ಬಳಕೆ ಮಾಡಲಾಗುತ್ತಿದೆ.

ಒಟ್ಟು 1.22 ಟಿಎಂಸಿ ಸಾಮರ್ಥ್ಯ ಇರುವ ಅಣೆಕಟ್ಟೆಯಲ್ಲಿ ಸದ್ಯ 1.037 ಟಿಎಂಸಿಯಷ್ಟು ನೀರಿದೆ. ಗರಿಷ್ಠ 736.090 ಮೀಟರ್ ವರೆಗೆ ನೀರು ಸಂಗ್ರಹ ಮಾಡಬಹುದಾಗಿದ್ದು, ಪ್ರಸ್ತುತ 735.300 ಮೀಟರ್‌ವರೆಗೆ ನೀರಿದೆ. ಇದರಿಂದಾಗಿ ಜನರ ಜೊತೆಗೆ ಸುತ್ತಲಿನ ಕಾಡುಪ್ರಾಣಿಗಳಿಗೂ ಅನುಕೂಲ ಆಗಿದೆ.

ರಾಮನಗರದಿಂದ 15 ಕಿ.ಮೀ. ದೂರದಲ್ಲಿ ಇರುವ ಕಣ್ವ ಜಲಾಶಯದಲ್ಲಿ ಪ್ರಸ್ತುತ 693.86 ಮೀಟರ್‌ನಷ್ಟು ಎತ್ತರದವರೆಗೆ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ ಇಲ್ಲಿನ ನೀರು ಸಂಗ್ರಹಣಾ ಪ್ರಮಾಣವು 693.5 ಮೀಟರ್‌ನಷ್ಟಿತ್ತು.

ಕಣ್ವ ಮತ್ತು ಸೀತನ ತೊರೆಗಳಿಗೆ ಅಡ್ಡಲಾಗಿ ಈ ಜಲಾಶಯ ನಿರ್ಮಿಸಲಾಗಿದೆ. ಈಚಿನ ದಿನಗಳಲ್ಲಿ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಆದರೆ ಏತ ನೀರಾವರಿ ಯೋಜನೆಯ ಅಡಿ ನೀರು ತುಂಬಿಸುತ್ತಿರುವ ಕಾರಣ ಇಲ್ಲಿ ಸೂಕ್ತ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ.

ಚನ್ನಪಟ್ಟಣ ತಾಲ್ಲೂಕಿನ ಏತ ನೀರಾವರಿ ಯೋಜನೆಗಳಿಗೆ ಆಧಾರವಾಗಿರುವ ಇಗ್ಗಲೂರು ಜಲಾಶಯದಲ್ಲಿ ಪ್ರಸ್ತುತ 604.77 ಮೀಟರ್‌ ಎತ್ತರಕ್ಕೆ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಸಹ ಇದೇ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಸುಮಾರು 2.13 ದಶಲಕ್ಷ ಘನ ಮೀಟರ್‌ಗಳಷ್ಟು ನೀರು ಲಭ್ಯ ಇರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಗರಕಹಳ್ಳಿ–ಶಿಂಷಾ ಏತ ನೀರಾವರಿ ಯೋಜನೆಗಳಿಗೆ ಇದೇ ಅಣೆಕಟ್ಟೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ಕನಕಪುರ ತಾಲ್ಲೂಕಿನ ಹಾರೋಬೆಲೆ ಜಲಾಶಯದಲ್ಲಿ ಸದ್ಯ 604.019 ಮೀಟರ್‌ನಷ್ಟು ನೀರಿನ ಮಟ್ಟವಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ನೀರಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. 605.028 ಮೀಟರ್‌ನಷ್ಟು ಎತ್ತರವಿರುವ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 604.119 ಮೀಟರ್‌ ಮಟ್ಟಕ್ಕೆ ನೀರಿತ್ತು. ಇಲ್ಲಿಂದ ಕಾಲುವೆಗಳ ಮೂಲಕವೂ ಜಮೀನುಗಳಿಗೆ ನೀರು ಹರಿಸಲಾಗುತ್ತದೆ. ಒಟ್ಟು 1.35 ಟಿಎಂಸಿ ನೀರು ಹಿಡಿದಿಡುವಷ್ಟು ಸಾಮರ್ಥ್ಯ ಇದಕ್ಕೆ ಇದೆ.

**
ಕುಡಿಯುವ ನೀರು, ಕೃಷಿಗೆ ಅನುಕೂಲ
ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹದಿಂದ ಸುತ್ತಲಿನ ಅಂತರ್ಜಲ ಪ್ರಮಾಣ ವೃದ್ಧಿಸಿದ್ದು, ಕುಡಿಯುವ ನೀರು ಮತ್ತು ಕೃಷಿಗೂ ಅನುಕೂಲ ಆಗಿದೆ. ಮಂಚನಬೆಲೆ ಜಲಾಶಯದಿಂದಾಗಿ ಮಾಗಡಿ ಪಟ್ಟಣದ ಜೊತೆಗೆ ರಾಮನಗರದ ಕುಡಿಯುವ ನೀರಿಗೂ ಅನುಕೂಲ ಆಗಿದೆ. ಇಗ್ಗಲೂರು, ಕಣ್ವ ಜಲಾಶಯಗಳಿಂದ ಚನ್ನಪಟ್ಟಣ ತಾಲ್ಲೂಕಿನ 150ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಬವಣೆ ತಪ್ಪಿದೆ. ಹಾರೋಬೆಲೆಯಿಂದಾಗಿ ಕನಕಪುರದಲ್ಲೂ ಅಂತರ್ಜಲ ವೃದ್ಧಿಸುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ಅಣೆಕಟ್ಟೆ ಸುತ್ತಲಿನ ಜನರಿಗೆ ನೀರಿನ ಕೊರತೆ ಅಷ್ಟಾಗಿ ಕಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT