ಶುಕ್ರವಾರ, ಮೇ 20, 2022
23 °C
ಕೆಡಿಪಿ ಪ್ರಗತಿ ‍ಪರಿಶೀಲನಾ ಸಭೆ; ಜಿಲ್ಲೆಯಲ್ಲಿನ ಗಣಿ ಅಕ್ರಮಗಳ ಕುರಿತು ಚರ್ಚೆ

ಹೆಲಿಕಾಪ್ಟರ್‌ನಲ್ಲಿ ಗಣಿ ಸರ್ವೆ: ಡಿಸಿಎಂ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಹೆಲಿಕಾಪ್ಟರ್‌ನಲ್ಲಿ ಸರ್ವೆ ನಡೆಸಿ ನಾನೇ ಅಕ್ರಮಗಳನ್ನು ಬಯಲು ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಎಚ್ಚರಿಸಿದರು.

ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಗತಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟದ ಗಣಿ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ‘ಅರಣ್ಯ ಪ್ರದೇಶದೊಳಗೆ ಎಲ್ಲಿಯೂ ಗಣಿಗಾರಿಕೆ ನಡೆದಿಲ್ಲ ಎನ್ನುತ್ತೀರಿ. ಹಾಗಿದ್ದರೆ ನಾನೇ ಹೆಲಿಕಾಪ್ಟರಿನಲ್ಲಿ ಹೋಗಿ ತೋರಿಸಲಾ?’ ಎಂದು ಮರು ಪ್ರಶ್ನಿಸಿದರು.

ಡ್ರೋಣ್‌ ಸರ್ವೆ ಮೂಲಕ ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಅಕ್ರಮ–ಸಕ್ರಮ ಗಣಿಗಾರಿಕೆಯನ್ನು ದಾಖಲಿಸಬೇಕು. ಯಾವ ಪ್ರಮಾಣದಲ್ಲಿ ಗಣಿಗಾರಿಕೆ ಆಗಿದೆ ಎಂಬುದರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಸೂಚಿಸಿದರು. ಸೂಕ್ತ ಮಾಹಿತಿ ನೀಡದ ಗಣಿ ಇಲಾಖೆ ಉಪನಿರ್ದೇಶಕಿ ಸುಮಿತ್ರಾ ಅವರನ್ನೂ ತರಾಟೆಗೆ ತೆಗೆದುಕೊಂಡರು.

ಶಾಸಕ ಎ.ಮಂಜುನಾಥ್ ಮಾತನಾಡಿ ‘ರಾಜ್ಯದಲ್ಲಿ ರಾಮನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಗೃಹ ಸಚಿವರು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಕ್ವಾರಿಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಜಿಲೆಟಿನ್‌ ಮೊದಲಾದ ಸ್ಫೋಟಕಗಳನ್ನು ಸಂಗ್ರಹಿಸಿ ಇಡಲಾಗಿದೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ನೀರಾವರಿ ಯೋಜನೆಗೆ ಹಿನ್ನೆಡೆ: ಸತ್ತೇಗಾಲದಿಂದ ಪೈಪ್‌ಲೈನ್ ಮೂಲಕ ಜಿಲ್ಲೆಗೆ ನೀರು ಪೂರೈಸುವ ಯೋಜನೆ ಕುಂಠಿತಗೊಂಡಿರುವುದಕ್ಕೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಇದೇ ವರ್ಷ ಆಗಸ್ಟ್ ಒಳಗೆ ಕಾಮಗಾರಿ ಮುಗಿಯಬೇಕು ಎನ್ನುತ್ತೀರಿ. ಆದರೆ ಇನ್ನೂ 12 ಕಿ.ಮೀ. ಸುರಂಗ ಮಾರ್ಗದ ಪೈಕಿ ಕೇವಲ 2 ಕಿ.ಮೀ. ಮಾತ್ರ ಆಗಿದೆ. ಹೀಗಿದ್ದರೆ ಯಾವಾಗ ಕೆಲಸ ಮುಗಿಸುತ್ತೀರಿ’ ಎಂದು ಅವರು ಪ್ರಶ್ನಿಸಿದರು.

400 ಮಕ್ಕಳು ಶಾಲೆಯಿಂದ ಹೊರಗೆ: ‘ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸರ್ವೆ ನಡೆದಿದ್ದು, ಶೇ 20ರಷ್ಟು ಕಾರ್ಯ ಪೂರ್ಣಗೊಂಡಿದೆ. ಅದರಂತೆ ಸುಮಾರು 400 ಮಕ್ಕಳು ಶಾಲೆ ತೊರೆದಿದ್ದು, ಅವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ನಡೆದಿದೆ’ ಎಂದು ಜಿ.ಪಂ. ಸಿಇಒ ಇಕ್ರಂ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ ವರ್ಷ ಸುಮಾರು 13 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಇವರಲ್ಲಿ 12,185 ವಿದ್ಯಾರ್ಥಿಗಳು ಈಗಾಗಲೇ ತರಗತಿಗೆ ಬರುತ್ತಿದ್ದಾರೆ. ಉಳಿದವರನ್ನೂ ಶಾಲೆಗೆ ಕರೆತರುವ ಪ್ರಯತ್ನ ನಡೆದಿದೆ ಎಂದು ಡಿಡಿಪಿಐ ಮಾಹಿತಿ ನೀಡಿದರು. ಇನ್ನೂ ಖಾಸಗಿ ಹೆಸರಿನಲ್ಲಿ ಖಾತೆ ಹೊಂದಿರುವ ಶಾಲಾ ಕಟ್ಟಡಗಳನ್ನು ಗುರುತಿಸಿ ಶೀಘ್ರ ಸರ್ಕಾರದ ಹೆಸರಿಗೆ ಖಾತೆ ಮಾಡಿಸಿಕೊಳ್ಳುವಂತೆ ಸೂಚಿಸಿದರು.

ಹೆರಿಗೆ ಆಸ್ಪತ್ರೆಗೆ ಪ್ರಸ್ತಾವ: ಪ್ರತಿ ತಾಲ್ಲೂಕು ಕೇಂದ್ರದಲ್ಲೂ ತಲಾ 50 ಹಾಸಿಗೆ ಸಾಮರ್ಥ್ಯದ ತಾಯಿ–ಮಗು ಆಸ್ಪತ್ರೆ ನಿರ್ಮಾಣ ಸಂಬಂಧ ಅಗತ್ಯ ಪ್ರಸ್ತಾವ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕನಕಪುರ, ಚನ್ನಪಟ್ಟಣ, ಮಾಗಡಿಯಲ್ಲಿ ಈ ಪ್ರತ್ಯೇಕ ಆಸ್ಪತ್ರೆಗಳು ನಿರ್ಮಾಣ ಆಗಲಿವೆ. ಇದಕ್ಕೆ ಪ್ರತ್ಯೇಕ ಸಿಬ್ಬಂದಿ ಒದಗಿಸಲಾಗುವುದು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಶಶಿಧರ್ ಮಾಹಿತಿ ನೀಡಿ, ಹೊಸ ಜಿಲ್ಲಾಸ್ಪತ್ರೆ ಉದ್ಘಾಟನೆ ಬಳಿಕ ಈಗಿರುವ ಅಸ್ಪತ್ರೆಯನ್ನು ಹೆರಿಗೆ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಗೆ ಒಟ್ಟು 195 ಸಿಬ್ಬಂದಿಯ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು.

ಕನಕಪುರದ ವಿರೂಪಸಂದ್ರ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯ ಸಚಿವರಲ್ಲಿ ಮನವಿ ಮಾಡಿದರು.

ಅಪೌಷ್ಟಿಕತೆ ನಿವಾರಿಸಿ
ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಇದ್ದು, ಇವರಿಗೆ ನೆರೆಹೊರೆಯ ವೈದ್ಯಕೀಯ ಕಾಲೇಜುಗಳ ಸಹಕಾರದಲ್ಲಿ ಉತ್ತಮ ಚಿಕಿತ್ಸೆ ನೀಡಿ ಎಂದು ಸಚಿವರು ಸೂಚಿಸಿದರು.

‘ಜಿಲ್ಲೆಯಲ್ಲಿ 200 ಮಕ್ಕಳು ತೀವ್ರ ಥರದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಈಗಾಗಲೇ 88 ಮಕ್ಕಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ’ ಎಂದು ಆರ್‌ಸಿಎಚ್ ಅಧಿಕಾರಿ ಪದ್ಮಾ ಮಾಹಿತಿ ನೀಡಿದರು. ‘ ಪ್ರತಿ ತಾಲ್ಲೂಕಿನಲ್ಲೂ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರ ಇದ್ದು, ಇಂತಹ ಮಕ್ಕಳಿಗೆ ಮೊಟ್ಟೆ, ಹಾಲಿನ ಪೌಡರ್ ಸೇರಿದಂತೆ 16 ವಿಧದ ಆಹಾರಗಳನ್ನು ನೀಡಲಾಗುತ್ತಿದೆ’ ಎಂದು ಇಕ್ರಂ ತಿಳಿಸಿದರು.

ಕಸ ವಿಲೇವಾರಿ: ಪರಿಹಾರ ಅಗತ್ಯ
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ಕಗ್ಗಂಟಾಗಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಜಿಲ್ಲಾಧಿಕಾರಿ ಮಾಹಿತಿ ನೀಡಿ ‘ಈ ಹಿಂದೆ ಕಣ್ವ ಬಳಿ 50 ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ಆರಂಭಗೊಂಡಿತ್ತು. ಆದರೆ ಸ್ಥಳೀಯರ ವಿರೋಧದಿಂದ ನಿಂತಿದೆ. ಬೇರೆಲ್ಲೂ ಜಾಗ ಸಿಗದಾಗಿದೆ. ಹೀಗಾಗಿ ನಗರಸಭೆಗಳು ಖಾಸಗಿ ಜಮೀನು ಖರೀದಿ ಮಾಡುವುದು ಸೂಕ್ತ’ ಎಂದರು. ಶಾಸಕ ಎ.ಮಂಜುನಾಥ್‌ ‘ವಿಲೇವಾರಿ ಘಟಕಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ’ ಎಂದರು. ‘ಎಲ್ಲಿಯೂ ಒಣ ಹಸ–ಹಸಿ ಕಸ ವಿಂಗಡನೆ ಸಮರ್ಪಕವಾಗಿ ನಡೆದಿಲ್ಲ’ ಎಂದು ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷೆ ಎಸ್. ಸುಗುಣ ದೂರಿದರು.

ಬ್ಯಾರಿಕೇಡ್ ನಿರ್ಮಾಣಕ್ಕೆ ಅನುದಾನ ಕೊಡಿ
ಜಿಲ್ಲೆಯಲ್ಲಿ ಆನೆ ದಾಳಿ ನಿಯಂತ್ರಣಕ್ಕೆ ಕಾಡಿನ ಸುತ್ತ ಬ್ಯಾರಿಕೇಡ್‌ ನಿರ್ಮಾಣ ಅಗತ್ಯವಾಗಿದ್ದು, ಇದಕ್ಕೆ ಅವಶ್ಯವಾದ ಅನುದಾನ ಒದಗಿಸುವಂತೆ ಅರಣ್ಯಧಿಕಾರಿಗಳು ಸಚಿವರನ್ನು ಕೋರಿದರು. ಒಟ್ಟಾರೆ ಸುಮಾರು 19 ಕಿ,ಮೀ ಉದ್ದದ ಬೇಲಿ ನಿರ್ಮಾಣ ಆಗಬೇಕಿದ್ದು, ಇದಕ್ಕೆ ₨22.49 ಕೋಟಿ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಮುಖ್ಯವಾಗಿ ಹರಿಹರ ಎ‍ಪಿಸಿ ವಲಯದಿಂದ ಭೂಹಳ್ಳಿವರೆಗೆ 4.4 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ತುರ್ತಾಗಿ ಆಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು